×
Ad

ಯುವಕನಿಗೆ ಕಪಾಳಮೋಕ್ಷ ಮಾಡಿ ಫೋನ್ ಪುಡಿಗಟ್ಟಿದ ಛತ್ತೀಸ್‌ಗಢ ಐಎಎಸ್ ಅಧಿಕಾರಿ

Update: 2021-05-23 12:53 IST
photo:Rediff.com

 ರಾಯ್‌ಪುರ:ಲಾಕ್‌ಡೌನ್ ಸಮಯದಲ್ಲಿ ಕೋವಿಡ್ -19 ಸುರಕ್ಷತಾ ಮಾನದಂಡಗಳನ್ನು ಉಲ್ಲಂಘಿಸಿದ್ದಕ್ಕಾಗಿ ಯುವಕನಿಗೆ ಕಪಾಳಮೋಕ್ಷ ಮಾಡಿ ಆತನ  ಫೋನ್ ಅನ್ನು ನೆಲಕ್ಕೆ ಎಸೆದಿದ್ದಕ್ಕಾಗಿ ಛತ್ತೀಸ್‌ಗಢ ದ ಸೂರಜ್‌ಪುರ ಜಿಲ್ಲಾಧಿಕಾರಿ  ಶನಿವಾರ ಕ್ಷಮೆ ಯಾಚಿಸಿದ್ದಾರೆ.

  ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಛತ್ತೀಸ್ ಗಢ ಮುಖ್ಯಮಂತ್ರಿ ಭೂಪೇಶ್ ಬಾಘೆಲ್ ಜಿಲ್ಲಾಧಿಕಾರಿಯನ್ನು ಎತ್ತಂಗಡಿ ಗೊಳಿಸುವಂತೆ ರವಿವಾರ ಆದೇಶಿಸಿದ್ದಾರೆ.

ಆ ಯುವಕನಿಗೆ ಥಳಿಸುತ್ತಿರುವ ವೀಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ತಕ್ಷಣವೇ  ಜಿಲ್ಲಾಧಿಕಾರಿ  ಕ್ಷಮೆಯಾಚಿಸಿದರು. ಜಿಲ್ಲಾಧಿಕಾರಿಯೊಬ್ಬರು ನಾಗರಿಕನ ಮೇಲೆ ದೈಹಿಕ ಹಲ್ಲೆ ನಡೆಸಿದ ಬಗ್ಗೆ ತೀವ್ರ ಟೀಕೆ ವ್ಯಕ್ತವಾಗಿತ್ತು.  

ಬೈಕ್ ನಲ್ಲಿ ತೆರಳುತ್ತಿದ್ದ ವ್ಯಕ್ತಿಯನ್ನು ಜಿಲ್ಲಾಧಿಕಾರಿ ಹಾಗೂ ಪೊಲೀಸರು ತಡೆದು ನಿಲ್ಲಿಸಿದ್ದರು. ಆಗ ಯುವಕ ಕಾಗದದ ತುಂಡು ಹಾಗೂ ಮೊಬೈಲ್ ನಲ್ಲಿ ಏನೋ  ತೋರಿಸಲು ಮುಂದಾಗುತ್ತಾನೆ.  ಬಳಿಕ ಮೊಬೈಲ್ ಅನ್ನು  ಕಸಿದುಕೊಂಡ ಜಿಲ್ಲಾಧಿಕಾರಿ ಅದನ್ನು ರಸ್ತೆಗೆ ಎಸೆಯುತ್ತಾರೆ. ಆ ವ್ಯಕ್ತಿಗೆ ಕಪಾಳಮೋಕ್ಷ ಮಾಡುತ್ತಾರೆ ಹಾಗೂ ಆಗ ಸ್ಥಳಕ್ಕೆ ಧಾವಿಸಿದ್ದ ಇಬ್ಬರು ಪೊಲೀಸರಿಗೆ ವ್ಯಕ್ತಿಗೆ ಥಳಿಸಲು ಹೇಳುತ್ತಾರೆ. ಪೊಲೀಸರು  ವ್ಯಕ್ತಿಗೆ ಲಾಠಿಯಿಂದ  ಹೊಡೆಯಲು ಆರಂಭಿಸುವ ದೃಶ್ಯ ವೀಡಿಯೊದಲ್ಲಿದೆ.

 "ಇಂದು ಒಂದು ವೀಡಿಯೊ  ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.  ಇದರಲ್ಲಿ ಲಾಕ್ ಡೌನ್ ಸಮಯದಲ್ಲಿ ಹೊರಗೆ ಓಡಾಗುತ್ತಿದ್ದ ವ್ಯಕ್ತಿಗೆ  ಕಪಾಳಮೋಕ್ಷ ಮಾಡಿರುವುದನ್ನು ತೋರಿಸಲಾಗಿದೆ. ಇಂದಿನ ವರ್ತನೆಗೆ ನಾನು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ. ಯಾರಿಗೂ  ಅಗೌರವ ತೂರಿಸುವುದು ನನ್ನ ಉದ್ದೇಶವಲ್ಲ’’ ಎಂದು ಶನಿವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ಜಿಲ್ಲಾಧಿಕಾರಿ  ರಣಬೀರ್ ಶರ್ಮಾ ಹೇಳಿದ್ದಾರೆ.

ಕೆಲವು ವರದಿಗಳು ಹೇಳುವಂತೆ ಆ ವ್ಯಕ್ತಿ ಚಿಕ್ಕವನಾಗಿರಲಿಲ್ಲ.  ಆತ 23 ವರ್ಷದವನಾಗಿದ್ದ.  ಬೈಕ್ ನಲ್ಲಿ ಅತ್ಯಂತ ವೇಗವಾಗಿ ಹೋಗುತ್ತಿದ್ದ . ಆ ವ್ಯಕ್ತಿಯು ಅಧಿಕಾರಿಗಳೊಂದಿಗೆ ಕೆಟ್ಟದಾಗಿ ವರ್ತಿಸಿದ್ದ. ಕೋವಿಡ್ ಮಾನದಂಡಗಳನ್ನು ಉಲ್ಲಂಘಿಸಿದ್ದಕ್ಕಾಗಿ ಆ ವ್ಯಕ್ತಿಯ ಮೇಲೆ ಸಾಂಕ್ರಾಮಿಕ ರೋಗಗಳ ಕಾಯ್ದೆ ಅಡಿ ಆರೋಪ  ಹೊರಿಸಲಾಗಿದೆ ಎಂದು  ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಎತ್ತಂಗಡಿಗೆ ಸಿಎಂ ಭೂಪೇಶ್ ಬಾಘೆಲ್ ಆದೇಶ

ರಾಯ್‌ಪುರ: ಕೋವಿಡ್ -19 ಲಾಕ್‌ಡೌನ್ ಮಾರ್ಗಸೂಚಿಗಳನ್ನು ಉಲ್ಲಂಘಿಸಿರುವುದಾಗಿ ಆರೋಪಿಸಿ  ಯುವಕನ ಕಪಾಳಕ್ಕೆ ಬಾರಿಸಿ, ಮೊಬೈಲ್ ಅನ್ನು ರಸ್ತೆ ಎಸೆದಿದ್ದ ಸೂರಜ್‌ಪುರ ಜಿಲ್ಲಾಧಿಕಾರಿ ರಣಬೀರ್ ಶರ್ಮಾ ಅವರನ್ನು ಹುದ್ದೆಯಿಂದ ಬಿಡು್ಗಡೆ  ಮಾಡುವಂತೆ  ಎಂದು ಛತ್ತೀಸ್ ಗಢ ಮುಖ್ಯಮಂತ್ರಿ ಭೂಪೇಶ್ ಬಾಘೆಲ್ ರವಿವಾರ ಆದೇಶಿಸಿದ್ದಾರೆ.

"ಸಾಮಾಜಿಕ ಮಾಧ್ಯಮಗಳ ಮೂಲಕ, ಸೂರಜ್‌ಪುರ ಕಲೆಕ್ಟರ್ ರಣಬೀರ್ ಶರ್ಮಾ ಯುವಕನೊಬ್ಬನ ಮೇಲೆ ಹಲ್ಲೆ ನಡೆಸುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಇದು ತುಂಬಾ ದುಃಖಕರ ಮತ್ತು ಖಂಡನೀಯವಾಗಿದೆ. ಛತ್ತೀಸ್‌ಗಢ ದಲ್ಲಿ, ಅಂತಹ ಯಾವುದೇ ಕೃತ್ಯವನ್ನು ಸಹಿಸುವುದಿಲ್ಲ. ರಣಬೀರ್ ಶರ್ಮಾ ಅವರನ್ನು ತಕ್ಷಣದಿಂದ ಹುದ್ದೆಯಿಂದ  ತೆಗೆದುಹಾಕಲು ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News