​ಎಲ್ಲಾ ಅಂಗಡಿ ವ್ಯವಹಾರಗಳಿಗೆ ಅವಕಾಶ ಕಲ್ಪಿಸಲು ಮನವಿ

Update: 2021-05-23 12:19 GMT

ಮಂಗಳೂರು, ಮೇ 23: ಕೊರೋನ ನಿಗ್ರಹದ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ವಿಧಿಸಿದ ಲಾಕ್‌ಡೌನ್ ಮಧ್ಯೆ ಅಗತ್ಯ ವಸ್ತುಗಳ ಖರೀದಿಗೆ 4 ಗಂಟೆಗಳ ಕಾಲಾವಕಾಶ ನೀಡಿರುವುದರ ಜೊತೆಗೆ ಈ ಸಂದರ್ಭ ಎಲ್ಲಾ ಅಂಗಡಿ ವ್ಯವಹಾರಗಳಿಗೂ ಅವಕಾಶ ಕಲ್ಪಿಸುವಂತೆ ಎಐಸಿಸಿ ಕಾರ್ಯದರ್ಶಿ, ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿಸೋಜ ರಾಜ್ಯ ಸರಕಾರಕ್ಕೆ ಮನವಿ ಮಾಡಿದ್ದಾರೆ.

ರಾಜ್ಯದಲ್ಲಿ ಕಳೆದ 28 ದಿನಗಳಿಂದ ಸತತವಾಗಿ ಲಾಕ್‌ಡೌನ್ ಮಾಡಿ ದಿನನಿತ್ಯ ಕೇವಲ 4 ಗಂಟೆಗಳ ಕಾಲ ದಿನಸಿ ಮತ್ತು ತರಕಾರಿ, ಮೀನು, ಮಾಂಸದ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಉಳಿದ ಎಲ್ಲಾ ಅಂಗಡಿಗಳಿಗೆ ಬಂದ್ ಮಾಡಲು ಆದೇಶಿಸಿರುವುದರಿಂದ ಅಲ್ಲಿನ ದಾಸ್ತಾನು ಗಳು ಹಾಳಾಗಿದೆ. ಕೆಲವು ಸಮಯ ಮೀರಿ ಕಸದ ಬುಟ್ಟಿಗೆ ಸೇರುವ ಸಂದರ್ಭ ಬಂದಿದೆ. ಅಂಗಡಿ ಬಾಡಿಗೆ, ಅಂಗಡಿಯ ಕೆಲಸಗಾರರಿಗೆ ಸಂಬಳ, ವಿದ್ಯುತ್ ಬಿಲ್ ಇತ್ಯಾದಿ ಹೊರೆ ತಾಳಲಾರದೆ ಸಮಸ್ಯೆ ಎದುರಾಗಿದೆ. ಹಾಗಾಗಿ ಎಲ್ಲರಿಗೂ ವ್ಯಾಪಾರ, ವಹಿವಾಟು ನಡೆಸಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ರಾಜ್ಯದಲ್ಲಿ ಕೆಲವು ವರ್ಗಗಳಿಗೆ ಮಾತ್ರ ಪ್ಯಾಕೇಜ್ ಘೋಷಿಸಲಾಗಿದೆ. ರಾಜ್ಯದ ಸರ್ವರ ಹಿತದೃಷ್ಟಿಯಿಂದ ಎಲ್ಲ ಕುಟುಂಬಗಳಿಗೂ ಕನಿಷ್ಠ 10,000 ರೂ. ಪ್ಯಾಕೇಜ್ ನೀಡಬೇಕು. ವಿದ್ಯುತ್ ಬಿಲ್, ನೀರಿನ ಬಿಲ್ ಮತ್ತು ಅಂಗಡಿ ಬಾಡಿಗೆ ಮುಂತಾದವುಗಳನ್ನು ಮನ್ನಾ ಮಾಡಬೇಕು ಎಂದು ಅವರು ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News