ಪಡಿತರ ಚೀಟಿ ಪರಿವರ್ತನೆ ಬಗ್ಗೆ ಸರಕಾರ ಮಟ್ಟದಲ್ಲಿ ಕ್ರಮ: ಸಚಿವ ಕೋಟ

Update: 2021-05-24 16:12 GMT

ಕೋಟ, ಮೇ 24: ಹಲವರ ಪಡಿತರ ಚೀಟಿ ಬಿಪಿಎಲ್ನಿಂದ ಎಪಿಎಲ್ ಆಗಿ ಪರಿವರ್ತನೆಗೊಂಡಿರುವ ಬಗ್ಗೆ ಮೇ 27ರಂದು ಸರಕಾರ ಮಟ್ಟದಲ್ಲಿ ನಡೆಯುವ ಸಭೆಯಲ್ಲಿ ಚರ್ಚಿಸಿ ಸೂಕ್ತ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

 ಕೋಟ ಗ್ರಾಪಂ ಆವರಣದಲ್ಲಿ ಸೋಮವಾರ ನಡೆದ ಪಡಿತರ ಗೊಂದಲಗಳ ಕುರಿತ ಸಭೆಯಲ್ಲಿ ಅವರು ಮಾತನಾಡುತಿದ್ದರು. ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಗ್ರಾಪಂ ಸದಸ್ಯರಾದ ಚಂದ್ರ ಪೂಜಾರಿ ಹಾಗೂ ಸಂತೋಷ್ ಪ್ರಭು, ಹಲವರ ಪಡಿತರ ಚೀಟಿ ಬಿಪಿಎಲ್ನಿಂದ ಎಪಿಎಲ್ ಆಗಿ ಪರಿವರ್ತನೆ ಗೊಂಡಿದೆ. ಈ ಬಗ್ಗೆ ಸರಕಾರದ ಮಟ್ಟದಲ್ಲಿ ಸೂಕ್ತ ನಿರ್ಧಾರ ಕೈಗೊಂಡು ಬಡ ಹಾಗೂ ಮಧ್ಯಮವರ್ಗದವರಿಗೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿದರು.

ಕೋಟ ಗ್ರಾಪಂ ಸದಸ್ಯ ಭುಜಂಗ ಗುರಿಕಾರ ಮಾತನಾಡಿ, ಕೋವಿಡ್ ಹಿನ್ನೆಲೆ ಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ಪಡಿತರ ಪಡೆಯಲು ಸಮಸ್ಯೆಗಳು ಆಗುತ್ತಿವೆ. ಕೋಟತಟ್ಟು ಪಡುಕರೆ ಪಡಿತರ ಅಂಗಡಿಯಲ್ಲಿ ಟೋಕನ್ ಪಡೆದು ಬಿಸಿಲಿನಲ್ಲಿ ನಿಂತು ಪಡಿತರ ಪಡೆಯಬೇಕು. ಅದಕ್ಕೆ ಮಣೂರು ಪಡುಕರೆ ಭಾಗದಲ್ಲಿ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಈ ಬಗ್ಗೆ ಸಂಬಂಧಪಟ್ಟ ಆಹಾರ ಇಲಾಖೆ ಮನವಿ ನೀಡಿ ಹಾಗೂ ಸ್ಥಳೀಯ ಸೊಸೈಟಿಗಳು ಸೂಕ್ತ ನಿರ್ಧಾರ ಕೈಗೊಂಡು ಜನಸಾಮಾನ್ಯರಿಗೆ ಅನುಕೂಲಕರ ವಾತಾವರಣ ಸೃಷ್ಟಿಸಲಿದೆ ಎಂದು ಹೇಳಿದರು. ಪಡಿತರ ವ್ಯವಸ್ಥೆಯಲ್ಲಿ ಪದೇ ಪದೇ ಆಗುತ್ತಿರುವ ಸರ್ವರ್ ಸಮಸ್ಯೆ ಬಗ್ಗೆ ಕ್ರಮಕೈಗೊಳ್ಳಬೇಕೆಂದು ಸದಸ್ಯ ಪ್ರದೀಪ್ ಆಗ್ರಹಿಸಿದರು.

ಈ ಸಂದರ್ಭದಲ್ಲಿ ಉಡುಪಿ ಆಹಾರ ಇಲಾಖಾ ಉಪನಿರ್ದೇಶಕ ಮಹಮ್ಮದ್ ಇಸಾಕ್, ಸಂಯೋಜಕ ರಕ್ಷಿತ್, ಬ್ರಹ್ಮಾವರ ತಹಶಿಲ್ದಾರ್ ಕಿರಣ್ ಗೌರಯ್ಯ, ಗ್ರಾಪಂ ಅಧ್ಯಕ್ಷ ಅಜಿತ್ ದೇವಾಡಿಗ, ಉಪಾಧ್ಯಕ್ಷ ಜಯಂತಿ ಪೂಜಾರಿ, ಕೋಟ ಸಿ.ಎ ಬ್ಯಾಂಕ್ ಅಧ್ಯಕ್ಷ ಜಿ.ತಿಮ್ಮ ಪೂಜಾರಿ ಉಪಸ್ಥಿತರಿದ್ದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುರೇಶ್ ಬಂಗೇರ ಕಾರ್ಯಕ್ರಮ ಸಂಯೋಜಿಸಿದರು.

ಸೀಲ್‌ಡೌನ್ ಮನೆಗಳಿಗೆ ಪಡಿತರ

ಸೀಲ್ಡೌನ್ ಆಗಿರುವ ಮನೆಗಳಿಗೆ ಪಡಿತರ ತಲುಪಿಸುವ ನಿಟ್ಟಿನಲ್ಲಿ ಆ ಮನೆಯವರ ಮನೆಯವರ ಮೊಬೈಲ್ ಸಂಖ್ಯೆಯನ್ನು ಪಂಚಾಯತ್ ಕಾರ್ಯ ಪಡೆಗೆ ನೀಡಬೇಕು. ಅದರಂತೆ ಕಾರ್ಯಪಡೆ ಆ ಮನೆಗಳಿಗೆ ಪಡಿತರ ತಲುಪಿ ಸುವ ವ್ಯವಸ್ಥೆ ಮಾಡಲಿದೆ ಎಂದು ಸಚಿವ ಕೋಟ ತಿಳಿಸಿದರು.

ಬ್ರಹ್ಮಾವರ ತಾಲೂಕು ರಚನೆಯಿಂದ ಕಳೆದ ಹಲವು ತಿಂಗಳಿಂದ ಹೊಸ ಪಡಿತರಕ್ಕೆ ಸಮಸ್ಯೆ ಎದುರಾಗಿದೆ. ಈ ಸಂಬಂಧ 15 ದಿನಗಳೊಳಗೆ ಪೂರ್ಣ ಪ್ರಮಾಣದ ಸಾಫ್ಟ್‌ವೇರ್ ಅಪ್ಡೇಟ್ಗೊಳ್ಳಲಿದ್ದು, ಇದರಿಂದ ಸಮಸ್ಯೆ ಪರಿ ಹಾರವಾಗಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಪಂಚಾಯತ್ ಸದಸ್ಯರನ್ನು ಕೊರೋನಾ ಫ್ರೆಂಟ್ ವಾರಿಯರ್ಸ್‌ ಎಂಬುದಾಗಿ ಘೋಷಿಸುವಂತೆ ಸಚಿವರಲ್ಲಿ ಮನವಿ ಮಾಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News