ಪಡುಬಿದ್ರಿ: ಟಗ್‍ನಲ್ಲಿ ನಾಪತ್ತೆಯಾದವರ ಪೈಕಿ ಓರ್ವನ ಮೃತದೇಹ ಪತ್ತೆ

Update: 2021-05-26 15:57 GMT

ಪಡುಬಿದ್ರಿ: ಪಡುಬಿದ್ರಿಯ ಸಮುದ್ರ ತೀರದಲ್ಲಿ ಪತ್ತೆಯಾಗಿ ಮಂಗಳವಾರ ತೆರವುಗೊಳಿಸಿದ ಟಗ್‍ನೊಳಗಡೆ ನಾಪತ್ತೆಯಾದವರ ಪೈಕಿ ಓರ್ವ ನೌಕರನ ಮೃತದೇಹ ಪತ್ತೆಯಾಗಿದ್ದು, ಉಳಿದಿಬ್ಬರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.

ಕಳೆದ ಮೇ 15ರಂದು ಚಂಡಮಾರುತಕ್ಕೆ ಸಿಲುಕಿ ಪಡುಬಿದ್ರಿಯ ಸಮುದ್ರ ತೀರದಲ್ಲಿ ಗುಜರಾತ್ ಮೂಲದ ಅಲೆಯನ್ಸ್ ಟಗ್ ಪತ್ತೆಯಾಗಿತ್ತು. ಸತತ ಕಾರ್ಯಾಚರಣೆಯ ಬಳಿಕ ಮಂಗಳವಾರ ಟಗ್ ಮೇಲಕೆತ್ತಲಾಯಿತು. 

ಹಳೆಬಂದರಿಗೆ ಟಗ್: ಮೇಲಕೆತ್ತಲಾದ ಟಗ್ ಅನ್ನು ಎರಡು ದಿನಗಳೊಳಗೆ ಬೋಟ್ ಸಹಾಯದಿಂದ ಸಮುದ್ರ ಮಾರ್ಗದಲ್ಲಿಯೇ ಎಳೆದೊಯ್ದು ಮಂಗಳೂರು ಹಳೆ ಬಂದರಿಗೆ ತಲುಪಿಸಲಾಗುವುದು ಎಂದು ಟಗ್ ಸುಸ್ಥಿಗೆ ತರಲು ಗುತ್ತಿಗೆ ವಹಿಸಿಕೊಂಡಿದ್ದ ಮಂಗಳೂರು ಬದ್ರಿಯಾ ಕಂಪನಿ ಮುಖ್ಯಸ್ಥ ಬಿಲಾಲ್ ಮೊಯ್ದಿನ್ ಸ್ಪಷ್ಟಪಡಿಸಿದ್ದಾರೆ.

ಕಳೇಬರ ಇರುವುದು ಅನುಮಾನ: ಟಗ್‍ನಲ್ಲಿ ಓರ್ವ ನೌಕರನ ಮೃತದೇಹವಷ್ಟೇ ದೊರಕಿದ್ದು, ಉಳಿದಿಬ್ಬರಿಗಾಗಿ ಜೀವರಕ್ಷಕರ ಸಹಾಯದಿಂದ ನಾವು ಶೋಧ ಮಂಗಳವಾರವೇ ಕಾರ್ಯ ನಡೆಸಿದ್ದೇವೆ. ಆದರೆ ಕಳೇಬರಗಳು ಇರುವುದು ಅನುಮಾನ.  ಟಗ್ ಮೇಲ್ಭಾಗ ದುರಂತಕ್ಕೀಡಾದ ಸಮಯದಲ್ಲಿಯೇ ಕಳಚಿ ಹೋಗಿದ್ದು, ಟಗ್‍ನಲ್ಲಿದ್ದ ಇನ್ನಿಬ್ಬರು ಅ ಸಮಯದಲ್ಲಿಯೇ ನೀರು ಪಾಲಾಗಿದ್ದಿರಬಹುದು. ಬುಧವಾರ ಮತ್ತೆ ಟಗ್ ಕ್ಯಾಬಿನ್ ಹಾಗೂ ಇಂಜಿನ್ ಕೊಠಡಿಯಲ್ಲಿರುವ ಮರಳು ಹಾಗೂ ನೀರನ್ನು ಹೊರ ಹಾಕುವ ಕಾರ್ಯವನ್ನು ಮಾಡಲಾಗುತ್ತಿದೆ. ಸಂಪೂರ್ಣ ಮರಳು ಹಾಗೂ ನೀರು ಹೊರಹಾಕಿ ಟಗ್ ಸಮತೂಕಕ್ಕೆ ತಂದು ಅದನ್ನು ಎಳೆದೊಯ್ಯಲಾಗುವುದು ಎಂದು ಮಾಧ್ಯಮದವರಿಗೆ ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News