ದ.ಕ.ಜಿಲ್ಲಾ ಉಸ್ತುವಾರಿ ಸಚಿವರಿಗೆ ಕೆಟಿಪಿಟಿ ಕಾಯ್ದೆ ಬಗ್ಗೆ ಪಿಡಿಒ ಪಾಠ!

Update: 2021-05-26 17:50 GMT

ಮಂಗಳೂರು, ಮೇ 26: ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿಗೆ ಕಂದಾವರ ಗ್ರಾಪಂ ಪಿಡಿಒ ಕೆಟಿಪಿಟಿ ಕಾಯ್ದೆ ಬಗ್ಗೆ ಪಾಠ ಮಾಡಿದ ಆಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಕೊನೆಗೂ ಎಚ್ಚೆತ್ತ ಪಿಡಿಒ ಜಿಪಂ ಸಿಇಒ ಅವರ ಸೂಚನೆಯ ಬಳಿಕ ಉಸ್ತುವಾರಿ ಸಚಿವರ ಕಚೇರಿಗೆ ತೆರಳಿ ಕ್ಷಮೆಯಾಚಿಸಿದ್ದಾರೆ. ಇದರೊಂದಿಗೆ ಪ್ರಕರಣವು ಸುಖಾಂತ್ಯಗೊಂಡಿವೆ.

ಹೋಂ ಕ್ವಾರಂಟೈನ್‌ನಲ್ಲಿರುವವರಿಗೆ ಆಹಾರ ಕಿಟ್ ಹಂಚಿಕೆಗೆ ಸಂಬಂಧಿಸಿ ಕಂದಾವರ ಗ್ರಾಪಂ ಪಿಡಿಒ ಯಶವಂತ ಎಂಬವರಿಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಇತ್ತೀಚೆಗೆ ಮೊಬೈಲ್ ಕರೆ ಮಾಡಿ ವಿಚಾರಿಸಿದಾಗ ಕಾನೂನಿನ ಕುರಿತು ವಾಗ್ವಾದ ನಡೆಸಿದ್ದಾರೆ.

ಗ್ರಾಪಂನಲ್ಲಿ ಆಹಾರ ಕಿಟ್ ಹಂಚಿಕೆ ಸರಿಯಾಗಿಲ್ಲ ಎಂಬ ದೂರಿನ ಮೇರೆಗೆ ಸಚಿವರು ಪಿಡಿಒಗೆ ಕರೆ ಮಾಡಿದ್ದರು. ಆವಾಗ ಪಿಡಿಒ ಯಶವಂತ ಕೆಟಿಪಿಟಿ ಕಾಯ್ದೆ ಬಗ್ಗೆ ಸಚಿವರಿಗೇ ಪಿಡಿಒ ಪಾಠ ಮಾಡಿದ್ದಾರೆ. ಕೊನೆಗೆ ತಾಪಂ ಇಒ ಜೊತೆ ಮಾತನಾಡುವುದಾಗಿ ಹೇಳಿ ಸಚಿವರು ಫೋನ್ ಕರೆ ಕಡಿತಗೊಳಿಸಿದ್ದಾರೆ.

ಆಹಾರ ಕಿಟ್ ಯಾಕೆ ಸರಿಯಾಗಿ ಹಂಚಿಕೆ ಮಾಡುತ್ತಿಲ್ಲ ಎಂಬ ಸಚಿವರ ಪ್ರಶ್ನೆಗೆ ಉತ್ತರಿಸಿದ ಪಿಡಿಒ ಕೆಟಿಪಿಟಿ (ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕ ಕಾಯ್ದೆ) ಕಾಯ್ದೆ ಬಗ್ಗೆ ಸ್ಪಷ್ಟನೆ ಬೇಕು. ಸಾವಿರ ರು.ಮೊತ್ತದ ಖರೀದಿಗೆ ಟೆಂಡರ್ ಬೇಡ, ಲಕ್ಷಕ್ಕಿಂತ ಜಾಸ್ತಿ ಮೊತ್ತದ ಖರೀದಿಗೆ ಟೆಂಡರ್ ಬೇಕಾಗುತ್ತದೆ ಎಂದು ಹೇಳಿದ್ದರು. ಇದರಿಂದ ಅಸಮಾಧಾನಗೊಂಡ ಸಚಿವರು, ಬೇರೆ ಪಂಚಾಯತ್‌ಗಳಲ್ಲಿ ಹೇಗೆ ಆಹಾರ ಕಿಟ್ ನೀಡಿದೆ ಎಂಬುದನ್ನು ಪರಿಶೀಲಿಸಿ ಕಾರ್ಯಪ್ರವೃತ್ತರಾಗುವಂತೆ ಸೂಚಿಸಿದ್ದರು. ಆದಾಗ್ಯೂ ಮತ್ತೆ ಪಿಡಿಒ ಯಶವಂತ ಕೆಟಿಪಿಟಿ ಕಾಯ್ದೆಯ ಬಗ್ಗೆ ಮಾತನಾಡಿದಾಗ ಸಮಾಧಾನದಿಂದಲೇ ಪ್ರತಿಕ್ರಿಯಿಸಿದ ಸಚಿವರು ‘ಅಲ್ಲಪ್ಪ, ನೀನು ಯಾರಲ್ಲಿ ಮಾತನಾಡುತ್ತಿದ್ದಿ? ಎಂದು ಗೊತ್ತಿದೆಯೇ ಎಂದು ಕೇಳಿದ್ದಾರೆ. ಜನರಿಗೆ ತೊಂದರೆಯಾಗಬಾರದು, ಬೇರೆ ಪಂಚಾಯತ್‌ಗಳಲ್ಲಿ ಹೇಗೆ ಕೊಟ್ಟಿದ್ದಾರೆ ಎಂಬುದನ್ನು ನೋಡಿಕೊಂಡು ಮುಂದುವರಿಯಿರಿ ಎಂದಿದ್ದಾರೆ. ಅದಕ್ಕೂ ಪಿಡಿಒ ಒಪ್ಪದಿದ್ದಾಗ ನಾನೇ ತಾಪಂ ಇಒ ಜೊತೆ ಮಾತನಾಡುವುದಾಗಿ ಹೇಳಿ ಸಚಿವರು ಫೋನು ಕರೆ ಕಡಿತಗೊಳಿಸಿದ್ದಾರೆ. ಇದೀಗ ಈ ಸಂಭಾಷಣೆಯ ಆಡಿಯೋ ವೈರಲ್ ಆಗಿದೆ.

ಕಚೇರಿಗೆ ತೆರಳಿ ಕ್ಷಮೆಯಾಚನೆ: ಕಂದಾವರ ಗ್ರಾಪಂ ಪಿಡಿಒ ಯಶವಂತ್ ಬಗ್ಗೆ ಗ್ರಾಮದಲ್ಲಿ ಪರ ವಿರೋಧ ಅಭಿಪ್ರಾಯವಿದೆ. ನಿವೃತ್ತ ಸೈನಿಕನಾಗಿರುವ ಈ ವ್ಯಕ್ತಿಯು ಉಸ್ತುವಾರಿ ಸಚಿವರ ಜೊತೆ ಉಡಾಫೆಯಿಂದ ವರ್ತಿಸಿದ ಬಗ್ಗೆ ಮಾಹಿತಿ ಪಡೆದುಕೊಂಡ ದ.ಕ.ಜಿಪಂ ಸಿಇಒ ತಕ್ಷಣ ಪಿಡಿಒ ಅವರನ್ನು ಕರೆಸಿ ತರಾಟೆಗೆ ತೆಗೆದುಕೊಂಡಿದ್ದಾರೆ. ಸಿಇಒ ಅವರ ಸೂಚನೆಯಂತೆ ನೇರ ಉಸ್ತುವಾರಿ ಸಚಿವರ ಕಚೇರಿಗೆ ತೆರಳಿದ ಪಿಡಿಒ ಕ್ಷಮೆ ಯಾಚಿಸಿದ್ದಾರೆ. ಇದರೊಂದಿಗೆ ಈ ಪ್ರಕರಣವನ್ನು ಮುಕ್ತಾಯಗೊಳಿಸಲಾಗಿದೆ ಎಂದು ಉಸ್ತುವಾರಿ ಸಚಿವರ ಕಚೇರಿ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News