ಲಾಕ್ ಡೌನ್ ನಲ್ಲಿ ರೋಗಿಗಳ ಆರೈಕೆ ಮಾಡುತ್ತಿರುವ ಭಟ್ಕಳದ ಮೊಬೈಲ್ ಕ್ಲಿನಿಕ್ ವ್ಯಾನ್

Update: 2021-05-27 16:55 GMT

ಭಟ್ಕಳ: ಲಾಕ್ ಡೌನ್ ಸಂದರ್ಭದಲ್ಲಿ ಹೊರಗಿಳಿಯುವುದು ಸಾಧ್ಯವಿಲ್ಲ ಎಂಬ ಕಷ್ಟದ ಜೊತೆಗೆ ಕೊರೋನ ಕಾಟವೂ ಜನರನ್ನು ಕಾಡುತ್ತಿದೆ. ಜ್ವರ ಅಥವಾ ಇತರ ಲಕ್ಷಣಯುತ ರೋಗಗಳು ಕಂಡುಬಂದಾಗ ಹೊರಗಿನ ಆಸ್ಪತ್ರೆಗಳಿಗೆ ತೆರಳಲು ಭಯಪಡುತ್ತಿದ್ದಾರೆ. ಈ ಭಯ, ಗೊಂದಲಗಳ ನಡುವೆ ಭಟ್ಕಳದ ಜನರಿಗೆ ಆಪತ್ಬಾಂಧವನಂತೆ ಮೊಬೈಲ್ ಕ್ಲಿನಿಕ್ ಒಂದು ಕಾರ್ಯಾಚರಿಸುತ್ತಿದೆ.

ಇಲ್ಲಿನ ಸಾಮಾಜಿಕ ಮತ್ತು ರಾಜಕೀಯ ಸಂಸ್ಥೆಯಾಗಿರುವ ಮಜ್ಲಿಸೆ ಇಸ್ಲಾಹ್-ವ-ತಂಜೀಮ್ ಸಂಸ್ಥೆ, ರಾಬಿತಾ ಸೂಸೈಟಿ, ಇಂಡಿಯನ್ ನವಾಯತ್ ಫೋರಮ್ ಮತ್ತು ಭಟ್ಕಳ ಮುಸ್ಲೀಮ್ ಯೂತ್ ಫೆಡರೇಶನ್ ಜಂಟಿ ಆಶ್ರಯದಲ್ಲಿ ಕಳೆದ 15 ದಿನಗಳಿಂದ ಮೊಬೈಲ್ ಕ್ಲಿನಿಕ್ ಮನೆಮನೆಗೆ ತೆರಳಿಗೆ ಚಿಕಿತ್ಸೆ ನೀಡುತ್ತಿದೆ. 

ಅನಾರೋಗ್ಯ ಪೀಡಿತರ ಮನೆ ಬಾಗಿಲಿಗೆ ನುರಿತ ವೈದ್ಯಕೀಯ ತಂಡ ತೆರಳಿ ಪರೀಕ್ಷೆ ನಡೆಸಿ, ಚಿಕಿತ್ಸೆ ನೀಡುತ್ತಿದೆ.

ಈ ಮೊಬೈಲ್ ಕ್ಲಿನಿಕ್ ನಲ್ಲಿ, ಓರ್ವ ವೈದ್ಯ, ನರ್ಸ್, ಫಾರ್ಮಾಸಿಸ್ಟ್ ಜೊತೆಗೆ ಅತ್ಯವಶ್ಯಕ ವಸ್ತುಗಳಾದ ಆಮ್ಲಜನಕ ಮತ್ತಿತರ ಪರಿಕರಗಳ ಅವಶ್ಯಕತೆಗಳನ್ನು ಪರೀಕ್ಷಿಸಲು ಪ್ರತ್ಯೇಕ ಸಹಾಯಕರೋರ್ವರನ್ನು ನಿಯೋಜಿಸಲಾಗಿದೆ.

ಆಯಾ ಭಾಗದ ಕ್ರೀಡಾ ಸಂಘದ ಯುವಕರು, ಮುಖಂಡರು ತಮ್ಮ ಭಾಗದ ಅನಾರೋಗ್ಯ ಪೀಡಿತರ ಬಗ್ಗೆ ಮೊಬೈಲ್ ಕ್ಲಿನಿಕ್ ಗೆ ಮಾಹಿತಿ ನೀಡುತ್ತಿದ್ದು, ವೈದ್ಯರ ವಾಹನ ಮನೆ ಬಾಗಿಲಿಗೆ ಬರುತ್ತಿದೆ. ತಾಲೂಕಿನ ಯಾವುದೇ ಭಾಗದ ಜನರು ಉಚಿತವಾಗಿ ಮೊಬೈಲ್ ಕ್ಲಿನಿಕ್ ನ ನೆರವನ್ನು ಪಡೆಯಬಹುದಾಗಿದೆ. ಹೆಚ್ಚಿನ ಚಿಕಿತ್ಸೆ ಅಗತ್ಯ ಇದ್ದಲ್ಲಿ ಅವರನ್ನು ಬೇರೆ ಆಸ್ಪತ್ರೆಗೆ ಕಳುಹಿಸುವ ಏರ್ಪಾಟನ್ನೂ ಮಾಡಿಕೊಳ್ಳಲಾಗಿದೆ.

ಪ್ರತಿ ದಿನ ಬೆಳಗ್ಗೆ 11.30 ರಿಂದ 1.30 ಹಾಗೂ ಸಂಜೆ 4.30ರಿಂದ 7 ಗಂಟೆಯ ಅವಧಿಯಲ್ಲಿ ಮೊಬೈಲ್ ಕ್ಲಿನಿಕ್ ಸೌಲಭ್ಯ ಲಭ್ಯವಿದ್ದು, ತಾಲೂಕಿನ ಯಾವುದೇ ಭಾಗದ ಜನರು ದೂರವಾಣಿ ಕರೆಯ ಮೂಲಕ ಕ್ಲಿನಿಕ್ ಸೇವೆಯನ್ನು ಪಡೆಯಬಹುದಾಗಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಭಟ್ಕಳ ಮುಸ್ಲಿಮ್ ಯೂತ್ ಫೆಡರೇಶನ್ ಅಧ್ಯಕ್ಷ ಮೌಲಾನ ಅಝೀಝುರ್‍ರಹಮಾನ್ ರುಕ್ನುದ್ದೀನ್ ನದ್ವಿ, 10 ದಿನಗಳ ಅವಧಿಯಲ್ಲಿ ಮೊಬೈಲ್ ಕ್ಲಿನಿಕ್ ಸರಿಸುಮಾರು 500 ಜನರಿಗೆ ನೆರವು ನೀಡಿದೆ. ತಾಲೂಕಿನ ಯುವಕರು, ಯುವಕ ಸಂಘದ ಪ್ರತಿನಿಧಿಗಳು ತಮ್ಮ ತಮ್ಮ ಭಾಗದ ಅನಾರೋಗ್ಯ ಪೀಡಿತರ ಬಗ್ಗೆ ಮಾಹಿತಿಯನ್ನು ಕ್ರೋಢೀಕರಿಸಿಕೊಂಡು ನಮಗೆ ನೀಡಿದರೆ ಸಾಮೂಹಿಕವಾಗಿ ಆರೋಗ್ಯ ಸೇವೆ ನೀಡಲು ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News