ದ.ಕ. ಜಿಲ್ಲೆಯಾದ್ಯಂತ ಉತ್ತಮ ಪೂರ್ವ ಮುಂಗಾರು ಮಳೆ

Update: 2021-05-29 06:09 GMT

ಮಂಗಳೂರು, ಮೇ 29: ಕೇರಳಕ್ಕೆ ಮೇ 31ಕ್ಕೆ ಮುಂಗಾರು ಪ್ರವೇಶವಾಗುವ ಸಾಧ್ಯತೆ ಇರುವುದರಿಂದ ಅದರ ಪ್ರಭಾವದಿಂದ ಶುಕ್ರವಾರ ತಡರಾತ್ರಿಯಿಂದ ಇಂದು ಮುಂಜಾನೆಯವರೆಗೂ ಪೂರ್ವ ಮುಂಗಾರು ಮಳೆ ದ.ಕ. ಜಿಲ್ಲೆಯಾದ್ಯಂತ ಉತ್ತಮವಾಗಿ ಸುರಿದಿದೆ.

ತಡರಾತ್ರಿಯಿಂದ ಬೆಳಗ್ಗೆ ಸುಮಾರು 8 ಗಂಟೆಯವರೆಯೂ ಸುರಿದ ಮಳೆಯಿಂದಾಗಿ ನಗರದ ಹಲವು ರಾಜಕಾಲುವೆಗಳು, ಚರಂಡಿ ತೋಡುಗಳು ತುಂಬಿ ಹರಿದವು. 9 ಗಂಟೆಯ ಬಳಿಕ ಮಳೆ ಪ್ರಮಾಣ ತಗ್ಗಿದ್ದು, ಹನಿಹನಿಯಾಗಿ ಸುರಿಯುತ್ತಿದೆ.

ನಗರದ ಪಂಪ್‌ವೆಲ್ ಸೇತುವೆ ಕೆಳಭಾಗ ಸೇರಿದಂತೆ ಬೆಳಗ್ಗಿನ ಹೊತ್ತು ನಗರದ ಕೆಲವು ಕಡೆ ನೀರು ಸರಾಗವಾಗಿ ಹರಿದು ಹೋಗಲು ಸಾಧ್ಯವಾಗದೆ ಕೃತಕ ನೆರೆಯ ವಾತಾವರಣ ಸೃಷ್ಟಿಯಾಗಿತ್ತು. ಮಳೆ ತಗ್ಗುತ್ತಲೇ ಮಳೆ ನೀರು ಹರಿದು ಕೃತಕ ನೆರೆಯೂ ಇಳಿದು ಹೋಗಿದೆ. ಪಂಪ್‌ವೆಲ್ ಮೇಲ್ಸೇತುವೆ ಕೆಳಭಾಗದಲ್ಲಿ ಕೃತಕ ನೆರೆ ಸೃಷ್ಟಿಯಾದ ಕಾರಣ ಬೆಳಗ್ಗೆ ಹೊತ್ತು ಖರೀದಿಗೆ ಮಂಗಳೂರಿಗೆ ವಾಹನದಲ್ಲಿ ಬಂದವರು ಪರದಾಡುವ ಪರಿಸ್ಥಿತಿ ನಿರ್ಮಾಣವಾಯಿತು.

ಕೇರಳಕ್ಕೆ ಮುಂಗಾರು ಪ್ರವೇಶದ ಬಳಿಕ ಜೂನ್ 5ರ ವೇಳೆಗೆ ಕರ್ನಾಟಕದಲ್ಲಿ ಮುಂಗಾರು ಮಳೆಯನ್ನು ನಿರೀಕ್ಷಿಸಲಾಗಿದೆ. ಇದರ ಪೂರ್ವಭಾವಿಯಾಗಿ ರಾಜ್ಯದ ಕೆಲವೆಡೆ ಮಳೆಯಾಗುತ್ತಿದೆ. ಈ ಬಾರಿಯೂ ಉತ್ತಮ ಸಾಮಾನ್ಯ ಮಳೆಯನ್ನು ನಿರೀಕ್ಷಿಸಲಾಗಿದೆ ಎಂದು ಹವಾಮಾನ ಇಲಾಖೆಯ ನಿರ್ದೇಶಕ ಸಿ.ಎಸ್. ಪಾಟೀಲ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News