ಕರಾಯದಲ್ಲಿ ಕಳವು ಪ್ರಕರಣ : ನಾಲ್ಕು ಮಂದಿ ಆರೋಪಿಗಳು ಸೆರೆ

Update: 2021-05-29 09:56 GMT

ಉಪ್ಪಿನಂಗಡಿ: ಬೆಳ್ತಂಗಡಿ ತಾಲೂಕಿನ ಕರಾಯದಲ್ಲಿ ನಡೆದ ಎರಡು ಮನೆಕಳ್ಳತನ ಪ್ರಕರಣಗಳನ್ನು ಉಪ್ಪಿನಂಗಡಿ ಪೊಲೀಸರು ಪತ್ತೆ ಹಚ್ಚಿದ್ದು, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬೆಳ್ತಂಗಡಿ ತಾಲೂಕಿನ ಉರುವಾಲು ಗ್ರಾಮದ ಮುರಿಯಾಳ ಎಂಬಲ್ಲಿಯ ಸಂಶುದ್ದೀನ್ (30), ಕರಾಯ ಗ್ರಾಮದ ಕಲ್ಪನೆ ಎಂಬಲ್ಲಿಯ ನವಾಝ್ (25), ಕರಾಯ ಜನತಾ ಕಾಲನಿಯ ನಿಝಾಮ್ (27), ಕರಾಯದ ಸರ್ಫ್‍ರಾಜ್ (24) ಬಂಧಿತ ಆರೋಪಿಗಳು. ಇವರಲ್ಲಿ ಪ್ರಕರಣದ ಪ್ರಮುಖ ಆರೋಪಿ ಸಂಶುದ್ದೀನ್ ಎಂಬಾತನ ವಿರುದ್ಧ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿದ್ದು, ನ್ಯಾಯಾಲಯದಿಂದ ಜಾಮೀನಿನ ಮೇಲೆ ಬಿಡುಗಡೆಯಾಗಿ ಈತ ಬಳಿಕ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯ ವಿವರ: 2021ರ ಜ.14ರಂದು ಕಲ್ಲೇರಿ ಎಂಬಲ್ಲಿ  ಬೇಕರಿ ವ್ಯವಹಾರ ನಡೆಸುತ್ತಿದ್ದ ಕೆ.ಎನ್. ಶರತ್‍ ಕುಮಾರ್ ಎಂಬವರ ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿ ಮನೆಯ ಮುಂಭಾಗದ ಬಾಗಿಲನ್ನು ಮುರಿದು ಒಳನುಗ್ಗಿದ ಕಳ್ಳರು ಅಲ್ಲಿ ಕಪಾಟಿನಲ್ಲಿದ್ದ 3.81 ಲಕ್ಷ ರೂ. ಮೌಲ್ಯದ ಚಿನ್ನಾಭರಣ, 14 ಸಾವಿರ ರೂ. ನಗದು ದೋಚಿ ಪರಾರಿಯಾಗಿದ್ದರು. ಶರತ್ ಅವರು ಬೇಕರಿಯಲ್ಲಿದ್ದ ಸಮಯದಲ್ಲಿ ರಾತ್ರಿ 7 ರಿಂದ 9.30ರ ಮಧ್ಯೆ ಈ ಕಳ್ಳತನ ನಡೆಸಲಾಗಿದ್ದು, ಕಳ್ಳರು ಮನೆಯ ವಿದ್ಯುತ್ ಸಂಪರ್ಕವನ್ನು ತಪ್ಪಿಸಿ ಮನೆಯ ಮುಂಭಾಗದ ಎರಡು ವಿದ್ಯುತ್ ದೀಪಗಳನ್ನು ಒಡೆದು ಹಾಕಿದ್ದರು ಎಂದು ಈ ಬಗ್ಗೆ ದೂರು ದಾಖಲಾಗಿತ್ತು.

ಇನ್ನೊಂದು ಪ್ರಕರಣವು ಮುರಿಯಾಳ ಎಂಬಲ್ಲಿ ನಡೆದಿದ್ದು, ಇದು ಮೇ 17ರಂದು ಬೆಳಕಿಗೆ ಬಂದಿತ್ತು. ಇಲ್ಲಿನ ಶಾಹಿದಾ ಎಂಬವರು ಕಲ್ಲಡ್ಕದ ತನ್ನ ತವರು ಮನೆಗೆ ಹೋಗಿದ್ದ ವೇಳೆ ಈ ಘಟನೆ ನಡೆದಿತ್ತು. ಇಲ್ಲಿಯೂ ಮನೆಯ ಮುಂಭಾಗದ ಬೀಗ ಒಡೆದು ಒಳನುಗ್ಗಿದ ಕಳ್ಳರು ಸುಮಾರು 1.70 ಲಕ್ಷದ ಚಿನ್ನಾಭರಣ, 4 ಸಾವಿರ ರೂಪಾಯಿ ನಗದನ್ನು ದೋಚಿಕೊಂಡು ಪರಾರಿಯಾಗಿದ್ದರು. ಈ ಎರಡೂ ಪ್ರಕರಣಗಳ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಈ ಪ್ರಕರಣಗಳ ಪತ್ತೆಗೆ ವಿಶೇಷ ತಂಡ ರಚಿಸಲಾಗಿತ್ತು. ಈ ವೇಳೆ ದೊರೆತ ಸುಳಿವಿನ ಆಧಾರದಲ್ಲಿ ಮೇ 28ರಂದು ನೆಕ್ಕಿಲಾಡಿ ಪೊಲೀಸ್ ಚೆಕ್‍ಪೋಸ್ಟ್ ಬಳಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತರೆಲ್ಲಾ ಕರಾಯ ಪರಿಸರದವರೇ ಆಗಿದ್ದು, ತಮ್ಮ ಸುತ್ತಮುತ್ತಲಿನ ಮನೆಯವರ ಚಲನವಲವನ್ನು ಅಧ್ಯಯನ ಮಾಡಿ, ಅವರು ಮನೆಯಲ್ಲಿ ಇಲ್ಲ ಎಂದಾಗ ಮೊಬೈಲ್ ಕೂಡಾ ಹಿಡಿದುಕೊಳ್ಳದೇ ಆ ಮನೆಗಳಿಗೆ ನುಗ್ಗಿ ಕಳ್ಳತನ ಮಾಡಿ ತಮ್ಮ ಮನೆ ಸೇರಿಕೊಳ್ಳುತ್ತಿದ್ದರು. ಇದರಿಂದಾಗಿ ಇವರ ಮೇಲೆ ಯಾರಿಗೂ ಸಂಶಯ ಬರುತ್ತಿರಲಿಲ್ಲ. ಬಂಧಿತರಿಂದ ಕಳ್ಳತನ ಪ್ರಕರಣಕ್ಕೆ ಉಪಯೋಗಿಸಿದ ಮೂರು ಮೋಟಾರು ಸೈಕಲ್, 5.50 ಲಕ್ಷ ಮೌಲ್ಯದ ಚಿನ್ನಾಭರಣವನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ದ.ಕ. ಜಿಲ್ಲಾ ಎಸ್ಪಿ ಸೋನಾವಣೆ ರಿಷಿಕೇಶ್ ಅವರ ನಿರ್ದೇಶನದಂತೆ ಹೆಚ್ಚುವರಿ ಎಸ್ಪಿ ಭಾಸ್ಕರ ಒಕ್ಕಲಿಗ, ಪುತ್ತೂರು ಉಪವಿಭಾಗದ ಪೊಲೀಸ್ ಉಪಾಧೀಕ್ಷರಾದ ಕು.ಗಾನ ಪಿ. ಕುಮಾರ್‍ರವರ ಮಾರ್ಗದರ್ಶನದಲ್ಲಿ ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕ ಉಮೇಶ್ ಉಪ್ಪಳಿಕೆ, ಉಪ್ಪಿನಂಗಡಿ ಠಾಣಾ ಉಪನಿರೀಕ್ಷಕ ಕುಮಾರ್ ಸಿ. ಕಾಂಬ್ಳೆ ಅವರ ನೇತೃತ್ವದಲ್ಲಿ ನಡೆದ ಈ ಪತ್ತೆ ಕಾರ್ಯದಲ್ಲಿ ಪ್ರೊಬೆಷನರಿ ಪಿಎಸ್‍ಐ ಅನೀಲ ಕುಮಾರ, ಎಎಸ್‍ಐ ಚೋಮ ಪಿ., ವೃತ್ತ ನಿರೀಕ್ಷಕರ ಕಚೇರಿಯ ಸಿಬ್ಬಂದಿಗಳಾದ ಶಿವರಾಮ, ಸಲೀಂ, ಧರ್ಣಪ್ಪ ಗೌಡ, ಜಗದೀಶ್ ಎ., ಉಪ್ಪಿನಂಗಡಿ ಠಾಣಾ ಸಿಬ್ಬಂದಿಗಳಾದ ಹರೀಶ್ಚಂದ್ರ, ಹರೀಶ್ ಗೌಡ, ಚಂದ್ರ, ನವೀನ, ಪ್ರತಾಪ್ ವಿನಾಯಕ, ಪುತ್ತೂರು ಗ್ರಾಮಾಂತರ ಠಾಣೆಯ ಪ್ರವೀಣ್ ರೈ, ಜಿಲ್ಲಾ ಗಣಕಯಂತ್ರ ಸಿಬ್ಬಂದಿಗಳಾದ ಸಂಪತ್, ದಿವಾಕರ, ಚಾಲಕರಾದ ಬಿ. ನವಾಝ್ ಬುಡ್ಕಿ, ಕನಕರಾಜ್ ಪಾಲ್ಗೊಂಡಿದ್ದರು. ಪೊಲೀಸರ ಈ ಕಾರ್ಯವು ಸಾರ್ವಜನಿಕರ ಶ್ಲಾಘನೆಗೆ ಪಾತ್ರವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News