ಚತ್ತೀಸ್ ಗಢ: ಜಾನುವಾರು ಕಳವು ಶಂಕೆ; ಗ್ರಾಮಸ್ಥರ ಹಲ್ಲೆಯಿಂದ ಓರ್ವ ಸಾವು
ಬಿಲಾಸ್ಪುರ, ಮೇ 29: ಚತ್ತೀಸ್ಗಡದ ಗೌರೇಲಾ-ಪೆಂದ್ರಾ-ಮರ್ವಾಹಿ (ಜಿಪಿಎಂ) ಜಿಲ್ಲೆಯಲ್ಲಿ ಜಾನುವಾರು ಕಳ್ಳರೆಂದು ಶಂಕಿಸಿ ಗ್ರಾಮಸ್ಥರು ಗುಂಪೊಂದು ಥಳಿಸಿದ ಪರಿಣಾಮ 45 ವರ್ಷದ ವ್ಯಕ್ತಿಯೋರ್ವರು ಮೃತಪಟ್ಟಿದ್ದಾರೆ. ಐವರು ಗಂಭೀರ ಗಾಯಗೊಂಡಿದ್ದಾರೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ಗೌರೇಲಾ ಪೊಲೀಸ್ ಠಾಣಾ ವ್ಯಾಪ್ತಿಯ ಸಾಲ್ಹೆಘೋರಿ ಗ್ರಾಮದಲ್ಲಿ ಗುರುವಾರ ಸಂಭವಿಸಿದ ಈ ಘಟನೆಗೆ ಸಂಬಂಧಿಸಿ ಕನಿಷ್ಠ 6 ಮಂದಿಯನ್ನು ಬಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಸಂತ್ರಸ್ತರು ಮಧ್ಯಪ್ರದೇಶದ ಅಮರಕಾಂತಂಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಮೇಧಕರ್ಗ್ರಾಮದ ನಿವಾಸಿಗಳು.
ಸಾಲ್ಹೆಘೋರಿಯಿಂದ ಖರೀದಿಸಿದ ಕೋಣಗಳನ್ನು ತಮ್ಮ ಗ್ರಾಮಕ್ಕೆ ಸಾಗಿಸಲು ಈ ಇಬ್ಬರು ಮೇಧಖಾರ್ನಿಂದ ಇಲ್ಲಿಗೆ ಬುಧವಾರ ರಾತ್ರಿ ಆಗಮಿಸಿದ್ದರು. ಅವರಿಬ್ಬರನ್ನು ತಡೆದ ಗ್ರಾಮಸ್ಥರು ಜಾನುವಾರುಗಳ ಮಾಲಕತ್ವವನ್ನು ಸಾಬೀತುಪಡಿಸುವಂತೆ ತಿಳಿಸಿದರು. ಆದರೆ, ಅವರಿಬ್ಬರು ವಿಫಲರಾದರು. ಈ ಹಿನ್ನೆಲೆಯಲ್ಲಿ ಅವರಿಬ್ಬರು ಜಾನುವಾರುಗಳನ್ನು ಕಳುವಗೈದಿದ್ದಾರೆ ಎಂದು ಆರೋಪಿಸಿ ಗ್ರಾಮಸ್ಥರು ದೊಣ್ಣೆಯಿಂದ ಥಳಿಸಿದರು. ಕೂಡಲೇ ಇತರ ಗ್ರಾಮಸ್ಥರೂ ಆಗಮಿಸಿ ಅವರ ಮೇಲೆ ದಾಳಿ ನಡೆಸಿದರು ಹಾಗೂ ಅವರಿಬ್ಬರನ್ನು ಗ್ರಾಮದ ಸಮುದಾಯ ಭವನದಲ್ಲಿ ಕೂಡಿ ಹಾಕಿದರು ಎಂದು ಅವರು ತಿಳಿಸಿದ್ದಾರೆ.
ಗುರುವಾರ ಬೆಳಗ್ಗೆ ಇಬ್ಬರು ವ್ಯಕ್ತಿಗಳ ಸಂಬಂಧಿಕರು ಸಾಲ್ಹೆಗೋರಿಗೆ ತಲುಪಿದ್ದರು. ಈ ಸಂದರ್ಭ ಗ್ರಾಮಸ್ಥರು ಅವರ ಮೇಲೆ ಕೂಡ ದೊಣ್ಣೆಯಿಂದ ಹಲ್ಲೆ ನಡೆಸಿದರು. ಈ ದಾಳಿಯಲ್ಲಿ ಸೂರತ್ ಬಂಜಾರ ಎಂಬವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗಾಯಗೊಂಡ ಐವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.