12 ಟನ್ ಆಹಾರ ಉತ್ಪನ್ನಗಳನ್ನು ಭಾರತಕ್ಕೆ ದೇಣಿಗೆ ನೀಡಿದ ಕೀನ್ಯಾ
Update: 2021-05-30 13:12 IST
ನೈರೋಬಿ: ಕೀನ್ಯಾ ತನ್ನ ಕೋವಿಡ್ -19 ಪರಿಹಾರ ಕಾರ್ಯಗಳ ಭಾಗವಾಗಿ ಭಾರತಕ್ಕೆ 12 ಟನ್ ಆಹಾರ ಉತ್ಪನ್ನಗಳನ್ನು ದಾನ ಮಾಡಿದೆ ಎಂದು ಪ್ರಕಟನೆಯೊಂದು ತಿಳಿಸಿದೆ.
ಪೂರ್ವ ಆಫ್ರಿಕಾದ ದೇಶವು ಸ್ಥಳೀಯವಾಗಿ ಉತ್ಪಾದಿಸುವ 12 ಟನ್ ಚಹಾ, ಕಾಫಿ ಹಾಗೂ ನೆಲಗಡಲೆಯನ್ನು ಭಾರತೀಯ ರೆಡ್‌ಕ್ರಾಸ್ ಸೊಸೈಟಿಗೆ ಕಳುಹಿಸಿದ್ದು, ಆಹಾರ ಪ್ಯಾಕೆಟ್‌ಗಳನ್ನು ಮಹಾರಾಷ್ಟ್ರದಾದ್ಯಂತ ವಿತರಿಸಲಾಗುವುದು ಎಂದು ಸೊಸೈಟಿ ಹೇಳಿದೆ.
"ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ಭಾರತ ಸರಕಾರದೊಂದಿಗೆ ಒಗ್ಗಟ್ಟಿನಿಂದ ನಿಲ್ಲಲು ಕೀನ್ಯಾ ಸರಕಾರ ಬಯಸುತ್ತದೆ" ಎಂದು ಆಫ್ರಿಕನ್ ದೇಶದ ಹೈಕಮಿಷನರ್ ವಿಲ್ಲಿ ಬೆಟ್ ಹೇಳಿದ್ದಾರೆ.
ಈ ಕೊಡುಗೆ ಕೀನ್ಯಾದ ಜನರು ಭಾರತದ ಜನರೊಂದಿಗೆ ಹೊಂದಿರುವ ಅನುಭೂತಿಯನ್ನು ಸೂಚಿಸುತ್ತದೆ ಎಂದು ಭಾರತೀಯ ರೆಡ್‌ಕ್ರಾಸ್ ಸೊಸೈಟಿ ಉಪಾಧ್ಯಕ್ಷ (ಮಹಾರಾಷ್ಟ್ರ ಶಾಖೆ) ಹೋಮಿ ಖುಸ್ರೋಖನ್ ಹೇಳಿದ್ದಾರೆ.