ಕೋವಿಡ್-19 ಚಿಕಿತ್ಸೆಯಲ್ಲಿ ಓರೆನ್ ಥೆರಪಿ ಎಷ್ಟು ಪರಿಣಾಮಕಾರಿ ?: ವೈದ್ಯರ ವಿವರಣೆ ಇಲ್ಲಿದೆ

Update: 2021-05-30 14:44 GMT

ವೈರಸ್ ಎಷ್ಟೊಂದು ಅನಿರೀಕ್ಷಿತ ಮತ್ತು ಅಪಾಯಕಾರಿಯಾಗಬಲ್ಲದು ಎನ್ನುವುದಕ್ಕೆ ಕೋವಿಡ್-19 ಎರಡನೇ ಅಲೆಯ ರುದ್ರತಾಂಡವ ಪುರಾವೆಯಾಗಿದೆ. ಈಗಿನ ಅಲೆಯು ನಿಧಾನವಾಗಿ ತಗ್ಗುತ್ತಿದೆಯಾದರೂ ಮುಂದಕ್ಕೆ ಅಪ್ಪಳಿಸಲಿರುವ ಮೂರನೇ ಅಲೆಯ ವಿರುದ್ಧ ಹೋರಾಡಲು ಹೆಚ್ಚಿನ ಪರ್ಯಾಯ ಚಿಕಿತ್ಸೆಗಳು ಮತ್ತು ಮಾರ್ಗಗಳನ್ನು ಕಂಡುಕೊಳ್ಳುವ ಅಗತ್ಯವಿದೆ. ಹಲವಾರು ದಶಕಗಳಿಂದ ದೀರ್ಘಕಾಲಿಕ ಕಾಯಿಲೆಗಳ ಚಿಕಿತ್ಸೆಯಲ್ಲಿ ಬಳಕೆಯಾಗುತ್ತಿರುವ ಓರೆನ್ ಥೆರಪಿಯು ಶರೀರದ ರೋಗನಿರೋಧಕ ಶಕ್ತಿಯನ್ನು ಉತ್ತೇಜಿಸುವ ಮೂಲಕ ಅನಾರೋಗ್ಯವನ್ನು ನಿವಾರಿಸುವ ಭರವಸೆದಾಯಕ ಪೂರಕ ಚಿಕಿತ್ಸೆಯಾಗಿ ಹೊರಹೊಮ್ಮಿದೆ. 

ಕನಿಷ್ಠ,ಕೆಲವು ವೈದ್ಯರು ಹಾಗೆ ಪ್ರತಿಪಾದಿಸುತ್ತಾರೆ. ಈ ಥೆರಪಿಯಲ್ಲಿ ವೈದ್ಯಕೀಯ ಓರೆನ್ ಅನ್ನು ಸಲೈನ್ ಅಥವಾ ಲವಣಯುಕ್ತ ದ್ರಾವಣದಲ್ಲಿ ಮಿಶ್ರಗೊಳಿಸಿ ಅಭಿಧಮನಿಯ ಮೂಲಕ ಶರೀರದಲ್ಲಿ ಸೇರಿಸಲಾಗುತ್ತದೆ. ಈ ಚಿಕಿತ್ಸೆಯು ಚೇತರಿಕೆ ಪ್ರಕ್ರಿಯೆಯನ್ನು ತ್ವರಿತಗೊಳಿಸುತ್ತದೆ ಮತ್ತು ಮರಣ ದರವನ್ನು ಕಡಿಮೆ ಮಾಡುತ್ತದೆ ಎಂದು ಹೇಳಲಾಗಿದೆ. 
ತಮಿಳುನಾಡಿನ ಪೊಲ್ಲಾಚಿಯ ಮಿರಾಕಲ್ ವೆಲ್ನೆಸ್ ಕ್ಲಿನಿಕ್ ನಲ್ಲಿ ಮುಖ್ಯ ವೈದ್ಯಾಧಿಕಾರಿಯಾಗಿರುವ ಡಾ.ಕೆ.ಅರುಳ್ ಅವರು ತನ್ನ ರೋಗಿಗಳಿಗೆ ಓರೆನ್ ಥೆರಪಿಯ ಮೂಲಕ ಚಿಕಿತ್ಸೆ ನೀಡುತ್ತಿದ್ದಾರೆ. ಈ ಚಿಕಿತ್ಸೆಯು ತನ್ನ ರೋಗಿಗಳಲ್ಲಿ ಚೇತರಿಕೆ ದರವನ್ನು ಶೇ.80-90ರಷ್ಟು ಹೆಚ್ಚಿಸುತ್ತಿದೆ ಎನ್ನುತ್ತಾರೆ ಅವರು. ಓರೆನ್ ಚಿಕಿತ್ಸೆ ಹೇಗೆ ಕೆಲಸ ಮಾಡುತ್ತದೆ ಎನ್ನುವುದನ್ನು ಅವರು ಇಲ್ಲಿ ವಿವರಿಸಿದ್ದಾರೆ.

ಓರೆನ್ ಥೆರಪಿಯು ನಿರೋಧಕತೆಯನ್ನು ಉತ್ತೇಜಿಸಲು ಮತ್ತು ರೋಗನಿವಾರಕ ಪ್ರಕ್ರಿಯೆಗೆ ಚಾಲನೆ ನೀಡಲು ಆಮ್ಲಜನಕದ ಅತ್ಯಂತ ಪ್ರತಿಕ್ರಿಯಾತ್ಮಕ ರೂಪವಾಗಿರುವ ಓರೆನ್ನನ್ನು ಶರೀರದಲ್ಲಿ ಸೇರಿಸುವ ಪರ್ಯಾಯ ವೈದ್ಯಕೀಯ ಚಿಕಿತ್ಸೆಯಾಗಿದೆ. ಇಂಟರ್ನ್ಯಾಷನಲ್ ಇಮ್ಯುನೊ ಫಾರ್ಮಾಕಾಲಜಿಯ ಅನುಸಾರ ಓರೆನ್ ಥೆರಪಿಯು ತನ್ನ ಆಮ್ಲಜನಕ ಪೂರೈಕೆಯನ್ನು ಹೆಚ್ಚಿಸುವ ಹಾಗೂ ಉತ್ಕರ್ಷಣ, ವೈರಸ್ ಮತ್ತು ಉರಿಯೂತ ನಿರೋಧಕ ಗುಣಗಳಿಂದಾಗಿ ಕೋವಿಡ್-19 ಚಿಕಿತ್ಸೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸಬಲ್ಲದು. 
ರಕ್ತದ ಮೂಲಕ ಅಂಗಾಂಶಗಳಿಗೆ ಆಮ್ಲಜನಕ ಪೂರೈಕೆಯನ್ನು ಹೆಚ್ಚಿಸಿ ಅಂಗಾಂಶಗಳಿಗೆ ಆಮ್ಲಜನಕ ಕೊರತೆಯನ್ನು ನಿಗಿಸುವದರಿಂದ ಓರೆನ್ ಥೆರಪಿಯು ಕೋವಿಡ್ ರೋಗಿಗಳಿಗೆ ಲಾಭದಾಯಕವಾಗಬಲ್ಲದು. ಓರೆನ್ ಪ್ರಬಲ ಉರಿಯೂತ ನಿರೋಧಕವೂ ಆಗಿರುವುದರಿಂದ ‘ಸೈಟೊಕೈನ್ ಸ್ಟಾರ್ಮ್ ’ಅನ್ನು ನಿಯಂತ್ರಿಸಲೂ ಅದು ನೆರವಾಗುತ್ತದೆ. ಶರೀರವು ವೈರಸ್ ಗೆ ಬದಲು ತನ್ನದೇ ಅಂಗಾಂಶಗಳ ಮೇಲೆ ದಾಳಿಯನ್ನಾರಂಭಿಸುವ ಸ್ಥಿತಿಯನ್ನು ‘ಸೈಟೊಕೈನ್ ಸ್ಟಾರ್ಮ್ ’ ಎಂದು ಕರೆಯಲಾಗುತ್ತದೆ.

►ಓರೆನ್ ಥೆರಪಿಯ ಲಾಭಗಳು

ಓರೆನ್ ಥೆರಪಿಯು ನಿರೋಧಕ ವ್ಯವಸ್ಥೆಯನ್ನು ಮತ್ತು ಶರೀರದಲ್ಲಿ ಆಮ್ಲಜನಕ ಪ್ರಸರಣವನ್ನು ಹೆಚ್ಚಿಸುತ್ತದೆ ಹಾಗೂ ಹಲವಾರು ರೋಗಗಳಲ್ಲಿ ದೀರ್ಘಕಾಲಿಕ ನೋವುಗಳನ್ನೂ ಗುಣಪಡಿಸುತ್ತದೆ. ಮೂತ್ರಕೋಶಕ್ಕೆ ಸಂಬಂಧಿಸಿದ ಇಂಟರ್ಸ್ಟಿಶಿಯಲ್ ಸಿಸ್ಟಿಟಿಸ್, ದೀರ್ಘಕಾಲಿಕ ಯಕೃತ್ತಿನ ಉರಿಯೂತ,ಹಲ್ಲಿನ ಸೋಂಕುಗಳು,ಮಧುಮೇಹ ಮತ್ತು ಅಕ್ಷಿಪಟಲ ಅವನತಿಯಂತಹ ಸಮಸ್ಯೆಗಳನ್ನೂ ಗುಣಪಡಿಸುತ್ತದೆ. ಡಾ.ಅರುಳ್ ಅವರು ಓರೆನ್ ಥೆರಪಿಯ ಲಾಭಗಳನ್ನು ವಿವರಿಸಿದ್ದಾರೆ.
- ಅದು ರೋಗನಿರೋಧಕ ವ್ಯವಸ್ಥೆಯನ್ನು ಕ್ರಿಯಾಶೀಲಗೊಳಿಸುತ್ತದೆ
- ಜೀವಕೋಶಗಳಿಂದ ಆಮ್ಲಜನಕದ ಬಳಕೆಯನ್ನು ಹೆಚ್ಚಿಸುತ್ತದೆ
- ನೋವು ಗ್ರಾಹಕಗಳ ಮೇಲೆ ಪರಿಣಾಮವನ್ನು ಬೀರುವ ಮೂಲಕ ದೀರ್ಘಕಾಲಿಕ ನೋವುಗಳನ್ನು ಕಡಿಮೆ ಮಾಡುತ್ತದೆ,ಅವುಗಳನ್ನು ನಿವಾರಿಸುತ್ತದೆ ಸಹ

► ಕೋವಿಡ್ ರೋಗಿಗಳಿಗೆ ಓರೆನ್ ಚಿಕಿತ್ಸೆಯನ್ನು ಹೇಗೆ ನೀಡಲಾಗುತ್ತದೆ?

ಸೌಮ್ಯದಿಂದ ತೀವ್ರ ಸ್ವರೂಪದವರೆಗಿನ ಲಕ್ಷಣಗಳಿಂದ ನರಳುತ್ತಿರುವ ಯಾವುದೇ ಕೋವಿಡ್ ರೋಗಿಗೆ ಓರೆನ್ ಚಿಕಿತ್ಸೆಯನ್ನು ನೀಡಬಹುದು ಎನ್ನುತ್ತಾರೆ ಡಾ.ಅರುಳ್. ಅದನ್ನು ಕ್ಲಿನಿಕ್ಗಳಲ್ಲಿಯೂ ಸುಲಭವಾಗಿ ನೀಡಬಹುದು ಮತ್ತು ಚಿಕಿತ್ಸೆಯ ಪ್ರತಿ ಅವಧಿ ಒಂದು ಗಂಟೆಯನ್ನು ಮೀರುವುದಿಲ್ಲ. ಕೆಲವು ರೋಗಿಗಳು ಮೂರು ಭೇಟಿಗಳಲ್ಲಿಯೇ ಗುಣಮುಖರಾಗುತ್ತಾರೆ,ಹಲವರಿಗೆ 15 ಭೇಟಿಗಳೂ ಅಗತ್ಯವಾಗಬಹುದು. ಗಂಭೀರ ಸ್ಥಿತಿಯಲ್ಲಿರುವ ಕೋವಿಡ್ ರೋಗಿಗಳಿಗೆ ಈ ಚಿಕಿತ್ಸೆಯನ್ನು ನೀಡಲು ಐಸಿಯು ವ್ಯವಸ್ಥೆ ಅಗತ್ಯವಾಗುತ್ತದೆ.

ಕೋವಿಡ್ ರೋಗಿಗಳಿಗೆ ಓರೆನ್ ಥೆರಪಿಯ ಪರಿಣಾಮಕಾರತ್ವದ ಬಗ್ಗೆ ಇನ್ನಷ್ಟು ಕ್ಲಿನಿಕಲ್ ಅಧ್ಯಯನಗಳು ನಡೆಯಬೇಕಿವೆಯಾದರೂ, ಅದು ಗಂಭೀರ ಸ್ಥಿತಿಯಲ್ಲಿರುವ ರೋಗಿಗಳಿಗೆ ಭರವಸೆ ಮತ್ತು ಆಶಾಕಿರಣವನ್ನು ಮೂಡಿಸಿದೆ. ಕೋವಿಡ್ ಚಿಕಿತ್ಸೆಯಲ್ಲಿ ಅದನ್ನು ಪರಿಣಾಮಕಾರಿ ಪರ್ಯಾಯ ಚಿಕಿತ್ಸೆಯಾಗಿ ಬಳಸುವಂತಾಗಲು ಅದರ ಲಾಭಗಳು ಮತ್ತು ಅಪಾಯಗಳ ಬಗ್ಗೆ ತಜ್ಞರಿಂದ ಸಮಗ್ರ ಪರಿಶೀಲನೆಯ ಅಗತ್ಯವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News