ಸಿಬಿಎಸ್ಇ, ಸಿಐಸಿಎಸ್ಇ 12ನೇ ಪರೀಕ್ಷೆ ಶೀಘ್ರ ಅಂತಿಮ ನಿರ್ಧಾರ ಪ್ರಕಟ : ಶಿಕ್ಷಣ ಇಲಾಖೆ

Update: 2021-05-30 18:25 GMT

ಹೊಸದಿಲ್ಲಿ, ಮೇ 30: ದೇಶದಲ್ಲಿ ಕೊರೋನ ಸೋಂಕಿನ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಸಿಬಿಎಸ್ಇ ಮತ್ತು ಸಿಐಎಸ್ಸಿಇಯ ಬಾಕಿ ಉಳಿದಿರುವ 12ನೇ ಪರೀಕ್ಷೆ ನಡೆಸಬೇಕೇ ಅಥವಾ ಇತರ ಆಯ್ಕೆಯತ್ತ ಆದ್ಯತೆ ನೀಡಬೇಕೇ ಎಂಬುದನ್ನು ಶೀಘ್ರ ನಿರ್ಧರಿಸಲಾಗುವುದು ಎಂದು ಮೂಲಗಳು ಹೇಳಿವೆ.

ಪರೀಕ್ಷೆಯನ್ನು ರದ್ದುಗೊಳಿಸಿ, ಈ ಹಿಂದಿನ ಪರೀಕ್ಷೆಯಲ್ಲಿ ಪಡೆದ ಅಂಕಗಳ ಆಧಾರದಲ್ಲಿ ತೇರ್ಗಡೆಗೊಳಿಸುವುದು  ಅಥವಾ ಕಡಿಮೆ ಅವಧಿಯ ಪರೀಕ್ಷೆಯನ್ನು ಆಗಸ್ಟ್ನಲ್ಲಿ ನಡೆಸುವುದು ಸೇರಿದಂತೆ ಹಲವು ಆಯ್ಕೆಗಳು ನಮ್ಮೆದುರಿಗಿವೆ. ಹಲವು ರಾಜ್ಯಗಳು ಆಗಸ್ಟ್ ನಲ್ಲಿ ಕಿರು ಅವಧಿಯ ಪರೀಕ್ಷೆ ನಡೆಸಲು ಒಲವು ತೋರಿಸಿವೆ ಎಂದು ಕೇಂದ್ರ ಶಿಕ್ಷಣ ಇಲಾಖೆಯ ಮೂಲಗಳು ಹೇಳಿವೆ.

ಈ ಮಧ್ಯೆ, ವಿದ್ಯಾರ್ಥಿಗಳು 11ನೇ ತರಗತಿಯ ಅಂತಿಮ ಪರೀಕ್ಷೆ ಹಾಗೂ 12ನೇ ತರಗತಿಯ ಕ್ಲಾಸ್ ಪರೀಕ್ಷೆಯಲ್ಲಿ ಪಡೆದಿರುವ ಸರಾಸರಿ ಅಂಕಗಳ ಪಟ್ಟಿಯನ್ನು ಜೂನ್ 7ರೊಳಗೆ  ಒದಗಿಸುವಂತೆ ಸಿಐಸಿಎಸ್ಇಗೆ ಸಂಯೋಜನೆಗೊಂಡಿರುವ ಶಾಲೆಗಳಿಗೆ ಸೂಚಿಸಲಾಗಿದೆ ಎಂದು ವರದಿಯಾಗಿದೆ.

ಇದುವರೆಗೆ ಯಾವುದೇ ನಿರ್ಧಾರ ಅಂತಿಮಗೊಂಡಿಲ್ಲ.

ಜೂನ್ 1ರಂದು ಅಂತಿಮ ನಿರ್ಧಾರ ಘೋಷಿಸಲಾಗುವುದು . ವಿದ್ಯಾರ್ಥಿಗಳ ಸುರಕ್ಷತೆಗೆ ಮೊದಲ ಆದ್ಯತೆಯಾಗಿದೆ. ಆದರೆ ಪರೀಕ್ಷೆಗಳೂ ಅತ್ಯಂತ ನಿರ್ಣಾಯಕ ಎಂದು ಕೇಂದ್ರ ಶಿಕ್ಷಣ ಇಲಾಖೆ ಹೇಳಿದೆ. ಸಿಬಿಎಸ್ಇ(ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್) ಮತ್ತು ಸಿಐಎಸ್ಸಿಇ(ಕೌನ್ಸಿಲ್ ಫಾರ್ ದಿ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್) 12ನೇ ತರಗತಿ ಪರೀಕ್ಷೆಗಳನ್ನು ಕೊರೋನ ಸೋಂಕು ಉಲ್ಬಣಿಸಿದ್ದರಿಂದ ರದ್ದುಗೊಳಿಸಬೇಕೆಂದು ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ಸುಪ್ರೀಂ ಕೋರ್ಟ್ ನಲ್ಲಿ ಮೇ 31ರಂದು ನಡೆಯಲಿದೆ.

ಈ ಮಧ್ಯೆ ರವಿವಾರ ಕೇಂದ್ರ ಸರಕಾರ ನಡೆಸಿದ್ದ ಉನ್ನತ ಮಟ್ಟದ ಸಭೆಯಲ್ಲಿ ಸಿಬಿಎಸ್ಸಿ ಎರಡು ಆಯ್ಕೆಗಳನ್ನು ಪ್ರಸ್ತಾಪಿಸಿದೆ ಎಂದು ವರದಿಯಾಗಿದೆ.

ಜುಲೈ 15- ಆಗಸ್ಟ್ 26ರ ಅವಧಿಯಲ್ಲಿ ಪ್ರಮುಖ ವಿಷಯಗಳಿಗೆ , ಅಧಿಸೂಚಿತ ಕೇಂದ್ರಗಳಲ್ಲಿ ಪರೀಕ್ಷೆ ನಡೆಸಿ ಸೆಪ್ಟಂಬರನಲ್ಲಿ ಫಲಿತಾಂಶ ಘೋಷಿಸುವುದು ಅಥವಾ ವಿದ್ಯಾರ್ಥಿ ದಾಖಲಾತಿ ಪಡೆದಿರುವ ಶಾಲೆಯಲ್ಲೇ ಕಿರು ಅವಧಿಯ ಪರೀಕ್ಷೆ ನಡೆಸುವುದು. ಈ ಎರಡು ಆಯ್ಯೆಯಲ್ಲಿ ಎರಡನೇ ಆಯ್ಕೆಗೆ ಬಹುಮತ ದೊರಕಿದ್ದು ಪ್ರಮುಖ ವಿಷಯಗಳಿಗೆ 90 ನಿಮಿಷದ ಪರೀಕ್ಷೆ ನಡೆಸಲು ಹಲವು ರಾಜ್ಯಗಳು ಒಲವು ಹೊಂದಿವೆ ಎಂದು ವರದಿಯಾಗಿದೆ.

ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ಎರಡೂ ಶಿಕ್ಷಣ ಮಂಡಳಿಗಳ 12ನೇ ತರಗತಿ ಪರೀಕ್ಷೆಯನ್ನು (ಮೇ-ಜೂನ್ ನಲ್ಲಿ ನಡೆಯಬೇಕಿತ್ತು) ಮುಂದೂಡಲಾಗಿದೆ. ಎರಡೂ ಮಂಡಳಿಗಳು 10ನೇ ತರಗತಿ ಪರೀಕ್ಷೆಯನ್ನು ರದ್ದುಗೊಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News