ಮಂಗಳೂರು: ಲಸಿಕಾ ಕೇಂದ್ರಗಳೆದುರು ಸರತಿ ಸಾಲು !

Update: 2021-05-31 06:44 GMT

ಮಂಗಳೂರು, ಮೇ 31: ಲಸಿಕೆಗಾಗಿನ ಜನರ ಪರದಾಟ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಲಸಿಕಾ ಕೇಂದ್ರಗಳ ಸುತ್ತ ಬೆಳಗ್ಗೆ ಸುಮಾರು 5 ಗಂಟೆಯಿಂದಲೇ ಸರತಿ ಸಾಲಿನಲ್ಲಿ ಕಾಯುವ ದೃಶ್ಯ ಮುಂದುವರಿದಿದೆ.

ದಿನಕ್ಕೆ ನಿಗದಿತ ಸಂಖ್ಯೆಯಲ್ಲಿ ಮಾತ್ರವೇ ಲಸಿಕೆಗಳನ್ನು ನೀಡಲಾಗುತ್ತಿರುವುದರಿಂದ ನೂರಾರು ಸಂಖ್ಯೆಯಲ್ಲಿ ಬಂದು ಕಾದು ತಮಗೆ ಟೋಕನ್ ಸಿಗದಾಗ ಜನರು ಆಕ್ರೋಶ ವ್ಯಕ್ತಪಡಿಸಿ ಹಿಂತಿರುಗುತ್ತಿದ್ದಾರೆ.

ಮಂಗಳೂರು ನಗರದ 10 ಆರೋಗ್ಯ ಕೇಂದ್ರಗಳಲ್ಲಿ ಇಂದು 45 ವರ್ಷ ಮೇಲ್ಪಟ್ಟವರಿಗೆ ಕೋವಿಶೀಲ್ಡ್ ಪ್ರಥಮ ಡೋಸ್ ನೀಡಲಾಗುವುದು ಎಂದು ರವಿವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಕಟನೆಯಲ್ಲಿ ತಿಳಿಸಲಾಗಿದೆ. ಅದರಂತೆ ನಗರದ ಲಸಿಕಾ ಕೇಂದ್ರಗಳಲ್ಲಿ ಸಾರ್ವಜನಿಕರು ಮುಂಜಾನೆಯಿಂದಲೇ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆಗಾಗಿ ಜಮಾಯಿಸಿದ್ದರು. ಬಿಜೈ ಕಾಪಿಕಾಡಿನ ಸರಕಾರಿ ಶಾಲೆಯ ಲಸಿಕಾ ಕೇಂದ್ರದಲ್ಲಿ ಇಂದು ಬೆಳಗ್ಗೆ ಭಾರೀ ಸಂಖ್ಯೆಯಲ್ಲಿ ಲಸಿಕೆಗಾಗಿ ಜನ ಸೇರಿದ್ದರು.

‘‘ಬೆಳಗ್ಗೆ 5 ಗಂಟೆಗೆ ಬಂದ ಸರತಿಯಲ್ಲಿ ನಿಂತಿದ್ದೇವೆ. ಆದರೆ ಟೋಕನ್ ನಿಯಮಿತ ಸಂಖ್ಯೆಯಲ್ಲಿ ಮಾತ್ರ ನೀಡಿದ್ದಾರೆ. ಅದೂ ತಮಗೆ ಬೇಕಾದವರಿಗೆ ಮಾತ್ರ ನೀಡಿದ್ದಾರೆ’’ಎಂಬ ಆರೋಪವೂ ಲಸಿಕಾ ಕೇಂದ್ರದಲ್ಲಿ ಸೇರಿದ್ದ ಕೆಲವರಿಂದ ವ್ಯಕ್ತವಾಗಿದೆ.

ಬಿಜೈ ಮಾತ್ರವಲ್ಲದೆ, ನಗರದ ಇತರ ಲಸಿಕಾ ಕೇಂದ್ರಗಳಲ್ಲಿಯೂ ಲಸಿಕೆಯನ್ನು ನೀಡುವಲ್ಲಿ ತಾರತಮ್ಯ ಎಸಲಾಗುತ್ತಿದೆ. ಬೆಳಗ್ಗೆ ಹೋಗಿ ಸರತಿಯಲ್ಲಿ ಕಾದು ನಿಂತರೂ ಟೋಕನ್ ಸಿಗುವುದಿಲ್ಲ ಎನ್ನುವ ಆರೋಪಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ.

ಮಂಗಳೂರು ತಾಲೂಕು ಹೊರತುಪಡಿಸಿ ಉಳಿದ ನಾಲ್ಕು ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ ಹಾಗೂ ತಾಲೂಕು ಆಸ್ಪತ್ರೆಗಳ ಲಸಿಕಾ ಕೇಂದ್ರಗಳಲ್ಲಿಯೂ ಇಂದು ಕೋವಿಶೀಲ್ಡ್ ಲಸಿಕೆಯ ಪ್ರಥಮ ಡೋಸ್ ನೀಡಲಾಗುತ್ತದೆ ಎಂದು ಆರೋಗ್ಯ ಇಲಾಖೆಯ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News