ಅಂತಹ ವ್ಯಕ್ತಿ ಮಂತ್ರಿಯಾಗಿರುವುದು ಸುಂದರ ಗೋವಾಕ್ಕೆ ಅಪಚಾರ: ಡಾ. ಪಳನಿವೇಲ್ ತ್ಯಾಗರಾಜನ್ ಪತ್ರ

Update: 2021-05-31 13:03 GMT

ಚೆನ್ನೈ,ಮೇ 31: ಜಿಎಸ್ಟಿ ಮಂಡಳಿ ಸಭೆಯಲ್ಲಿ ಸಣ್ಣ ರಾಜ್ಯಗಳಿಗೆ,ನಿರ್ದಿಷ್ಟವಾಗಿ ಗೋವಾಕ್ಕೆ ಅವಮಾನ ಮಾಡಿದ್ದಕ್ಕಾಗಿ ಕ್ಷಮೆ ಯಾಚಿಸಬೇಕು ಎಂದು ಗೋವಾದ ಸಾರಿಗೆ ಸಚಿವ ಮಾವಿನ್ ಗಾಡಿನೊ ಅವರು ಆಗ್ರಹಿಸಿರುವ ಹಿನ್ನೆಲೆಯಲ್ಲಿ ‘ವಿಷಯವನ್ನು ಸ್ಪಷ್ಟಪಡಿಸಲು’ ತಮಿಳುನಾಡಿನ ಹಣಕಾಸು ಸಚಿವ ಡಾ.ಪಳನಿವೇಲ್ ತ್ಯಾಗರಾಜನ್ ಅವರು ಗೋವಾದ ಜನತೆಗೆ ಬಹಿರಂಗ ಪತ್ರವೊಂದನ್ನು ಬರೆದಿದ್ದಾರೆ. 

ಗಾಡಿನೊರನ್ನು ತೀವ್ರ ತರಾಟೆಗೆತ್ತಿಕೊಂಡಿರುವ ಅವರು ಮೇ 28ರಂದು ಕೇಂದ್ರ ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ ನಡೆದಿದ್ದ ಜಿಎಸ್ಟಿ ಮಂಡಳಿ ಸಭೆಯಲ್ಲಿ ತಾನು ಗೋವಾದ ಜನತೆಯ ಹಿತಾಸಕ್ತಿಯ ವಿರುದ್ಧ ಮಾತನಾಡಿರಲಿಲ್ಲ ಎಂದು ವಿಶದಪಡಿಸಿದ್ದಾರೆ.

ಮೇ 29ರಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಗಾಡಿನೊ, ತ್ಯಾಜರಾಜನ್ ಅವರು ಗೋವಾದಂತಹ ಸಣ್ಣ ರಾಜ್ಯಗಳಿಗಿಂತ ದೊಡ್ಡ ರಾಜ್ಯಗಳ ಭಾವನೆಗಳಿಗೆ ಹೆಚ್ಚಿನ ಗಮನ ನೀಡಬೇಕು ಎಂದು ಕರೆ ನೀಡಿದ್ದರು ಎಂದು ಆರೋಪಿಸಿದ್ದರು. ತ್ಯಾಗರಾಜನ್ ಹೇಳಿಕೆಯು ಖಂಡನೀಯವಾಗಿದೆ ಎಂದಿದ್ದ ಗಾಡಿನೊ,ಇದಕ್ಕಾಗಿ ಅವರು ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದ್ದರು.

ಗಾಡಿನೊ ಆರೋಪಕ್ಕೆ ಪ್ರತಿಕ್ರಿಯಿಸಿರುವ ತ್ಯಾಗರಾಜನ್, ತಾನು ಸಭೆಯಲ್ಲಿ ನೀಡಿದ್ದ ಪ್ರತಿಯೊಂದೂ ಹೇಳಿಕೆಯು ತನ್ನ ಡಿಎಂಕೆ ಪಕ್ಷವು ಸುದೀರ್ಘ ಕಾಲದಿದ ನಂಬಿಕೊಂಡು ಬಂದಿರುವ ಜಿಎಸ್ಟಿಯ ‘ಒಂದು ರಾಜ್ಯ ಒಂದು ಮತ ’ಮಾದರಿಯು ನ್ಯಾಯಯುತವಲ್ಲ ಮತ್ತು ದ್ರಾವಿಡ ಚಳವಳಿಯು ಪ್ರತಿಪಾದಿಸಿರುವ ಸ್ಥಳೀಯ ಸ್ವಶಾಸನ ಮಾದರಿಯು ಆತ್ಮಗೌರವ ಮತ್ತು ಆತ್ಮನಿರ್ಣಯದ ತಾರ್ಕಿಕ ವಿಸ್ತರಣೆಯಾಗಿದೆ ಎಂಬ ಈ ಎರಡು ಸಿದ್ಧಾಂತಗಳಿಗೆ ಅನುಗುಣವಾಗಿತ್ತು ಎಂದಿದ್ದಾರೆ.

ಗಾಡಿನೊ ಅವರ ಸುದ್ದಿಗೋಷ್ಠಿಯನ್ನು ಪ್ರಸ್ತಾಪಿಸಿರುವ ತ್ಯಾಗರಾಜನ್, ಅವರು ಸೀಮಿತ ತಿಳುವಳಿಕೆ ಮತ್ತು ಪ್ರಾಮಾಣಿಕತೆಯನ್ನು ಹೊಂದಿದ್ದಾರೆಯೇ? ಆದರೆ ಅವರ ಇತಿಹಾಸ ನಿಮಗೆ ಗೊತ್ತಿದೆ ಮತ್ತು ಈ ಘಟನೆಗೆ ಮುನ್ನ ನಿಮ್ಮ ಸ್ವಂತ ನಿರ್ಧಾರಗಳಿಗೆ ಬಂದಿದ್ದೀರಿ ಎಂಬ ವಿಶ್ವಾಸ ತನಗಿದೆ. ನಿಮಗೆ ಸಂಶಯವಿದ್ದರೆ ಇಲ್ಲಿ ಕೇಳಿ, ಮಾನವೀಯ ನೆಲೆಯಲ್ಲಿ ಕೋವಿಡ್ ಸಂಬಂಧಿತ ಔಷಧಿಗಳು ಮತ್ತು ಲಸಿಕೆಗಳ ಮೇಲಿನ ಜಿಎಸ್ಟಿಯನ್ನು ಶೇ.5ರಿಂದ ಶೂನ್ಯಕ್ಕೆ ಇಳಿಸುವ ಪ್ರಸ್ತಾವವನ್ನು ಅವರು ಪ್ರಬಲವಾಗಿ ವಿರೋಧಿಸಿದ್ದರು ಎಂದಿದ್ದಾರೆ.

ತಾನು ಗೋವಾದ ಜನತೆಯ ಹಕ್ಕುಗಳಿಗಾಗಿ ಬಲವಾಗಿ ಪ್ರತಿಪಾದಿಸಿದ್ದರಿಂದ ತಾನು ಅವರ ಕ್ಷಮೆಯನ್ನು ಕೋರಬೇಕಿಲ್ಲ ಎಂದಿರುವ ತ್ಯಾಗರಾಜನ್,‘ನಾನು ನಿಮಗೆ ಯಾವುದೇ ಕೆಡುಕನ್ನು ಮಾಡಿಲ್ಲ. ವಾಸ್ತವದಲ್ಲಿ ನಾನು ನಿಮ್ಮ ರಾಜ್ಯ ಸರಕಾರದ ಹಕ್ಕುಗಳನ್ನು ಬಲವಾಗಿ ಬೆಂಬಲಿಸಿದ್ದೆ. ಅದಕ್ಕಾಗಿ ಯಾವುದೇ ಆಭಾರವು ಬೇಕಿಲ್ಲ, ಅದನ್ನು ನಾನು ನಿರೀಕ್ಷಿಸಿಯೂ ಇಲ್ಲ. ಏಕೆಂದರೆ ನನ್ನ ನಿಲುವು ರಾಜ್ಯಗಳ ಹಕ್ಕುಗಳು ಮತ್ತು ಒಕ್ಕೂಟವಾದವನ್ನು ಬಲಗೊಳಿಸುವ ನನ್ನ ಸಿದ್ಧಾಂತಗಳಿಂದ ಪ್ರಭಾವಿತವಾಗಿವೆ ’ಎಂದಿದ್ದಾರೆ.

ಗಾಡಿನೊರಂತಹ ವ್ಯಕ್ತಿಯನ್ನು ತಮ್ಮ ಸಚಿವರನ್ನಾಗಿ ಹೊಂದಿರುವುದಕ್ಕಾಗಿ ಗೋವಾದ ಜನತೆಗೆ ತನ್ನ ‘ಪ್ರಾಮಾಣಿಕ ಸಂತಾಪಗಳನ್ನು ’ಸೂಚಿಸಿರುವ ತ್ಯಾಗರಾಜನ್,‘ನಿಮ್ಮ ಸುಂದರ ರಾಜ್ಯವನ್ನು ಪ್ರತಿನಿಧಿಸಲು ಅವರನ್ನು ನೇಮಿಸುವ ಮೂಲಕ ಗೋವಾ ಮುಖ್ಯಮಂತ್ರಿಗಳು ಗೋವಾದ ಪ್ರಜೆಗಳು ಮತ್ತು ಜಿಎಸ್ಟಿ ಮಂಡಳಿಯೊಂದಿಗೆ ತಪ್ಪಾಗಿ ನಡೆದುಕೊಂಡಿದ್ದಾರೆ. ಅಂತಹ ವ್ಯಕ್ತಿ ಮಂತ್ರಿಯಾಗಿರುವುದು ಸುಂದರ ಗೋವಾಕ್ಕೆ ಅಪಚಾರ. ಅಂತಿಮವಾಗಿ, ರಾಜಕೀಯ ಮತಭೇದವಿದ್ದರೂ ನಾನು ತನ್ನ ‘ಶಾಸಕರ ಸ್ವಾಧೀನ ’ಪ್ರಕ್ರಿಯೆಯಲ್ಲಿ ಕನಿಷ್ಠ ಗುಣಮಟ್ಟವನ್ನು ನಿಗದಿಗೊಳಿಸುವಂತೆ ಬಿಜೆಪಿಯನ್ನುಕೋರುತ್ತೇನೆ. ಅದು ಹಾಗೆ ಮಾಡಿದ್ದರೆ ಗೋವಾ ಮತ್ತು ಈ ದೇಶಕ್ಕೆ ಹೆಚ್ಚಿನ ನೋವನ್ನು ತಪ್ಪಿಸಬಹುದಿತ್ತು ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News