ಲಕ್ಷದ್ವೀಪದ ಜನರ ಒಪ್ಪಿಗೆ ಪಡೆದ ನಂತರವೇ ಮುಂದುವರಿಯಲಾಗುವುದು ಎಂದು ಅಮಿತ್ ಶಾ ಹೇಳಿದ್ದಾರೆ: ಸಂಸದ ಫೈಝಲ್
ಹೊಸದಿಲ್ಲಿ: ಕೇಂದ್ರಾಡಳಿತ ಪ್ರದೇಶ ಲಕ್ಷದ್ವೀಪದ ಆಡಳಿತಾಧಿಕಾರಿ ಜಾರಿಗೆ ತರಲುದ್ದೇಶಿಸಿರುವ ಹೊಸ ಕಾನೂನುಗಳನ್ನು ಸ್ಥಳೀಯ ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ಪಡೆದುಕೊಂಡ ನಂತರವಷ್ಟೇ ಜಾರಿಗೊಳಿಸಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಭರವಸೆ ನೀಡಿದ್ದಾರೆಂದು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ ನಾಯಕ ಹಾಗೂ ಲಕ್ಷದ್ವೀಪ ಸಂಸದ ಮುಹಮ್ಮದ್ ಫೈಝಲ್ ಹೇಳಿದ್ದಾರೆ.
"ಸದ್ಯ ಪ್ರಸ್ತಾಪಿಸಲಾಗಿರುವ ಯಾವುದೇ ಕಾನೂನುಗಳ ಕರಡುಗಳನ್ನು ಲಕ್ಷದ್ವೀಪಕ್ಕೆ ಕಳುಹಿಸಿ ಸ್ಥಳೀಯ ಜನಪ್ರತಿನಿಧಿಗಳ ಜತೆ ಚರ್ಚಿಸಲಾಗುವುದು. ಅವುಗಳನ್ನು ಅಂತಿಮಗೊಳಿಸುವ ಮುನ್ನ ಜನರ ಒಪ್ಪಿಗೆ ಪಡೆಯಲಾಗುವುದು ಎಂದು ಅಮಿತ್ ಶಾ ಭರವಸೆ ನೀಡಿದ್ದಾರೆ" ಎಂದು ಫೈಝಲ್ ಹೇಳಿದರು.
ಈ ಕುರಿತಂತೆ ಪ್ರತಿಕ್ರಿಯಿಸಿದ ಲಕ್ಷದ್ವೀಪದ ಬಿಜೆಪಿ ಉಸ್ತುವಾರಿ ಎ ಪಿ ಅಬ್ದುಲ್ಲಾಕುಟ್ಟಿ, "ಭಯಪಡಲು ಏನೂ ಇಲ್ಲ, ಜನರ ಒಪ್ಪಿಗೆ ಪಡೆದೇ ಮುಂದುವರಿಯಲಾಗುವುದು ಎಂದು ತಿಳಿಸಿ ಎಂದು ಶಾ ಹೇಳಿದ್ದಾರೆ" ಎಂದು ತಿಳಿಸಿದರು.
ಲಕ್ಷದ್ವೀಪದಲ್ಲಿ ಸಮಾಜ ವಿರೋಧಿ ಚಟುವಟಿಕೆ ನಿಯಂತ್ರಣ ಮಸೂದೆ 2021 ಅಥವಾ ಗೂಂಡಾ ಕಾಯಿದೆ ಜಾರಿಗೆ ಮುಂದಾಗಿರುವ ಅಲ್ಲಿನ ಆಡಳಿತದ ಕ್ರಮ ಈಗಾಗಲೇ ವಿಪಕ್ಷಗಳಿಂದ ಮಾತ್ರವಲ್ಲದೆ ಆಡಳಿತ ಬಿಜೆಪಿಯ ಸದಸ್ಯರಿಂದಲೂ ಟೀಕೆಗೆ ಗುರಿಯಾಗಿವೆ. ಮದ್ಯ ಮಾರಾಟಕ್ಕೆ ಅನುಮತಿ, ಬೀಫ್ ಗೆ ನಿಷೇಧ ನಿರ್ಧಾರ ಕುರಿತೂ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಈ ನಿಯಮಗಳನ್ನು ಪ್ರಸ್ತಾಪಿಸಿರುವ ಲಕ್ಷದ್ವೀಪ ಆಡಳಿತಾಧಿಕಾರಿ ಪ್ರಫುಲ್ ಪಟೇಲ್ ಖೋಡಾ ಅವರನ್ನು ವಾಪಸ್ ಕರೆಸಿ ಎಂದೂ ವಿಪಕ್ಷಗಳು ಆಗ್ರಹಿಸಿವೆ.