×
Ad

ಬಿಜೆಪಿ ಸದಸ್ಯನಿಗೆ ಪೊಲೀಸರು ಥಳಿಸುತ್ತಿರುವ ವೀಡಿಯೋ ಬಳಸಿ ಮುಸ್ಲಿಂ ವಿರೋಧಿ ಕಥೆ ಹೆಣೆದ ಕಿಡಿಗೇಡಿಗಳು

Update: 2021-06-01 14:44 IST

ಹೊಸದಿಲ್ಲಿ: ವ್ಯಕ್ತಿಯೊಬ್ಬನಿಗೆ ಪೊಲೀಸನೊಬ್ಬ  ಲಾಠಿಯೇಟು ನೀಡುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣ ಫೇಸ್ ಬುಕ್‍ನಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

ಈ ವ್ಯಕ್ತಿ ಒಬ್ಬ ಅಂಬ್ಯುಲೆನ್ಸ್ ಚಾಲಕನೆಂದೂ ಆತ ಮೃತ ದೇಹಗಳನ್ನು  ಚಿತಾಗಾರಗಳಿಗೆ ಅಂಬ್ಯುಲೆನ್ಸ್‍ನಲ್ಲಿ ಸಾಗಿಸುವ ವೃತ್ತಿ ನಡೆಸುವವನಾಗಿದ್ದು ಹೆಚ್ಚು ಆದಾಯ ಗಳಿಸಬೇಕೆಂಬ ಉದ್ದೇಶದಿಂದ ತೆಲಂಗಾಣದ ನಿಜಾಮಾಬಾದ್ ಆಸ್ಪತ್ರೆಯಲ್ಲಿ ರೋಗಿಗಳ ಆಕ್ಸಿಜನ್ ಪೂರೈಕೆಗೆ ತಡೆಯೊಡ್ಡಿ ಅವರನ್ನು ಸಾಯಿಸಿದ್ದನೆಂಬ ವಿವರಣೆಯೂ ವೀಡಿಯೋದ ಜತೆಗಿದೆ. ಈ ವ್ಯಕ್ತಿಯ ಹೆಸರು ನಸೀಮ್ ಎಂದು ಒಬ್ಬಾತ ಹೇಳಿದ್ದರೆ ಇನ್ನೊಬ್ಬನ ಪ್ರಕಾರ ಈತನ ಹೆಸರು ಅಸೀಮ್ ಖುರೇಶಿ ಆಗಿದೆ.

ಈ ವೀಡಿಯೋದ ಅಸಲಿಯತ್ತನ್ನು ತಿಳಿಯಲು altnews ವೆಬ್‌ ತಾಣವು ಯತ್ನಿಸಿದೆ. ಇದೇ ವೀಡಿಯೋವನ್ನು ಮೇ 27ರಂದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸುನೀಲ್ ದಿಯೋಧರ್ ಅವರು ಟ್ವೀಟ್ ಮಾಡಿದ್ದರಲ್ಲದೆ ಬಿಜೆಪಿ ಮಹಾರಾಷ್ಟ್ರ ಯುವ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವರಾಜ್ ಅವರಿಗೆ ಮಹಾರಾಷ್ಟ್ರ ಪೊಲೀಸ್ ಸಿಬ್ಬಂದಿಯೊಬ್ಬರು ಹಲ್ಲೆ ನಡೆಸಿದ್ದಾರೆಂದು ಸುನೀಲ್ ಆರೋಪಿಸಿದ್ದರು.

ಶಿವರಾಜ್‍ನ ಕುಟುಂಬ ಸದಸ್ಯರೊಬ್ಬರು  ಆಸ್ಪತ್ರೆಯಲ್ಲಿ ಎಪ್ರಿಲ್ 10ರಂದು ಮೃತಪಟ್ಟ ನಂತರ ಆಕ್ರೋಶಿತ ಕುಟುಂಬಿಕರು ಆಸ್ಪತ್ರೆಯಲ್ಲಿ ದಾಂಧಲೆ ನಡೆಸಿದ ಸಂದರ್ಭ ಪೊಲೀಸರು ಬಲಪ್ರಯೋಗ ನಡೆಸಿ ಆಕ್ರೋಶಿತರನ್ನು ಹೊರಕ್ಕೆ ಕಳುಹಿಸಿದ್ದರು ಎಂದು  ಕದೀಮ್ ಜಲ್ನಾ ಠಾಣೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಈ ಘಟನೆಯ ಕುರಿತು ಮಾಜಿ ಸೀಎಂ ದೇವೇಂದ್ರ ಫಡ್ನವೀಸ್ ಅವರು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಗಮನ ಸೆಳೆದ ನಂತರ  ಓರ್ವ ಎಸ್‍ಐ ಹಾಗೂ ನಾಲ್ಕು ಕಾನ್‍ಸ್ಟೇಬಲ್‍ಗಳನ್ನು ಅಮಾನತುಗೊಳಿಸಲಾಗಿತ್ತು. ಘಟನೆ ಎಪ್ರಿಲ್ 9ರಂದು ಜಲ್ನಾದ ದೀಪಕ್ ಆಸ್ಪತ್ರೆಯಲ್ಲಿ ನಡೆದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News