ಏರ್ ಇಂಡಿಯಾ ಪೈಲಟ್‍ಗಳ ಸೇವಾ ರದ್ದತಿ ಆದೇಶವನ್ನು ವಜಾಗೊಳಿಸಿದ ದಿಲ್ಲಿ ಹೈಕೋರ್ಟ್

Update: 2021-06-01 11:51 GMT

ಹೊಸದಿಲ್ಲಿ: ತನ್ನ ಹಲವಾರು ಪೈಲಟ್‍ಗಳ ಸೇವೆಯನ್ನು ಅಂತ್ಯಗೊಳಿಸಲು ಏರ್ ಇಂಡಿಯಾ ಕಳೆದ ವರ್ಷ ಕೈಗೊಂಡ ನಿರ್ಧಾರವನ್ನು ದಿಲ್ಲಿ ಹೈಕೋರ್ಟ್ ಇಂದು ರದ್ದುಗೊಳಿಸಿದೆ. ಕೆಲಸದಿಂದ ತೆಗೆಯಲಾದ ಗುತ್ತಿಗೆ ಆಧರಿತ ಪೈಲಟ್‍ಗಳ ಸಹಿತ ಎಲ್ಲಾ ಪೈಲಟ್‍ಗಳನ್ನು ಮರಳಿ ಸೇರ್ಪಡೆಗೊಳಿಸಬೇಕು ಹಾಗೂ ಬಾಕಿ ವೇತನವನ್ನು ಪಾವತಿಸಬೇಕೆಂದೂ ನ್ಯಾಯಾಲಯ ಆದೇಶಿಸಿದೆ.

ಗುತ್ತಿಗೆ ಆಧರಿತ ಸೇವೆ ಸಲ್ಲಿಸುತ್ತಿರುವ ಪೈಲಟ್‍ಗಳ ಗುತ್ತಿಗೆ ಅವಧಿಯ ವಿಸ್ತರಣೆ ಕುರಿತ ನಿರ್ಧಾರವನ್ನು ಅವರ ಸಮಾಧಾನಕರ ನಿರ್ವಹಣೆಯ ಆಧಾರದಲ್ಲಿ ಕೈಗೊಳ್ಳಬಹುದು ಎಂದು  ತಮ್ಮ ಆದೇಶದಲ್ಲಿ ನ್ಯಾಯಾಧೀಶೆ ಜ್ಯೋತಿ ಸಿಂಗ್ ಹೇಳಿದ್ದಾರೆ.

ಕಳೆದ ವರ್ಷದ ಆಗಸ್ಟ್ ತಿಂಗಳಲ್ಲಿ ಒಟ್ಟು 61 ಏರ್ ಇಂಡಿಯಾ ತನ್ನ ಪೈಲಟ್‍ಗಳ ಸೇವೆಯನ್ನು ಅಂತ್ಯಗೊಳಿಸಿತ್ತು. ಕೋವಿಡ್ ಸಾಂಕ್ರಾಮಿಕ ತಂದೊಡ್ಡಿದ ಆರ್ಥಿಕ ಸಮಸ್ಯೆಯಿಂದಾಗಿ ಈ ನಿರ್ಧಾರ ಕೈಗೊಂಡಿದ್ದಾಗಿಯೂ ಆಗ ಏರ್ ಇಂಡಿಯಾ ಹೇಳಿತ್ತು.

ಏರ್ ಇಂಡಿಯಾ ಕ್ರಮವನ್ನು ಪ್ರಶ್ನಿಸಿ ಪೈಲಟ್‍ಗಳು ಹಲವು ಅಪೀಲುಗಳನ್ನು ಸಲ್ಲಿಸಿದ್ದರಲ್ಲದೆ ಕಳೆದ ವರ್ಷದ ಎಪ್ರಿಲ್ 2ರಂದು ತಮ್ಮನ್ನು ಸೇವೆಯಿಂದ ವಜಾಗೊಳಿಸಿ ಹೊರಡಿಸಿದ್ದ ಆದೇಶ ಹಾಗೂ ಆಗಸ್ಟ್ 7ರಂದು ತಮ್ಮ ಸೇವೆಯನ್ನು ಅಂತ್ಯಗೊಳಿಸಿ ಹೊರಡಿಸಲಾದ ಆದೇಶ ರದ್ದುಗೊಳಿಸಬೇಕೆಂದು ಕೋರಿದ್ದರು.

ಕಳೆದ ವರ್ಷದ ಲಾಕ್ ಡೌನ್ ಸಂದರ್ಭ ಸಂಸ್ಥೆಯ ಶೇ90ರಷ್ಟು ಪೈಲಟ್‍ಗಳು ಮನೆಯಲ್ಲಿದ್ದರು ಹಾಗೂ  ವಿಮಾನ ಹಾರಾಟವಿಲ್ಲದೆ ಸಂಸ್ಥೆ ರೂ 1,300 ಕೋಟಿ ನಷ್ಟ ಅನುಭವಿಸಿತ್ತು ಎಂದು ಏರ್ ಇಂಡಿಯಾ ಹೇಳಿಕೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News