ಜಮ್ಮುಕಾಶ್ಮೀರ: ವೀಡಿಯೊದಲ್ಲಿ ಅಧ್ಯಾಪಕರಿಗೆ ವೇತನ ನಿರಾಕರಣೆ ಉಲ್ಲೇಖಿಸಿ ಯುವಕ ಆತ್ಮಹತ್ಯೆ

Update: 2021-06-01 15:07 GMT
ಫೋಟೊ ಕೃಪೆ: ndtv

ಶ್ರೀನಗರ, ಜೂ. 1: ಶನಿವಾರ ಆತ್ಮಹತ್ಯೆ ಮಾಡಿಕೊಂಡ ಕಾಶ್ಮೀರದ ವಿದ್ಯಾರ್ಥಿ ಶೋಹಿಬ್ ಬಶೀರ್ ಅವರ ಕೊನೆಯ ವೀಡಿಯೊ ಸಂದೇಶ ಕಾಶ್ಮೀರದ ಸರಕಾರಿ ಶಾಲೆಯ ಅಧ್ಯಾಪಕರ ಸಂಕಷ್ಟದತ್ತ ಗಮನ ಸೆಳೆಯುವಂತೆ ಮಾಡಿದೆ. ಮನಃಶಾಸ್ತ್ರ ಸ್ನಾತಕೋತ್ತರ ಪದವಿ ಕೋರ್ಸ್ ಗೆ ಶುಲ್ಕ ಪಾವತಿಸಲು ವಿಫಲವಾದ ಹಿನ್ನೆಲೆಯಲ್ಲಿ ಸರಕಾರಿ ಶಾಲೆಯ ಅಧ್ಯಾಪಕರ ಪುತ್ರರಾಗಿರುವ ಶೋಹಿಬ್ ಬಶೀರ್ ಆತ್ಮಹತ್ಯೆಗೆ ಶರಣಾಗಿದ್ದಾರೆ. 

‘‘ನನ್ನ ತಂದೆಗೆ ಕಳೆದ 2 ವರ್ಷಗಳಿಂದ ವೇತನ ಪಾವತಿಸದೇ ಇರುವುದೇ ನಾನು ಆತ್ಮಹತ್ಯೆ ಮಾಡಿಕೊಳ್ಳಲು ಕಾರಣ. ಇದು ನಮ್ಮ ಬದುಕನ್ನು ವರ್ಣಿಸಲು ಅಸಾಧ್ಯವಾದ ಕರುಣಾಜನಕ ಸ್ಥಿತಿಗೆ ತಳ್ಳಿದೆ’’ ಎಂದು ಶೋಹಿಬ್ ಬಶೀರ್ ವೀಡಿಯೊದಲ್ಲಿ ಹೇಳುವುದು ಕೇಳಿ ಬಂದಿದೆ. ಶೋಹಿಬ್ ಬಶೀರ್ ಅವರ ತಂದೆ ಬಶೀರ್ ಅಹ್ಮದ್ ಮಿರ್ ಗೆ 2019 ಮಾರ್ಚ್ ತಿಂಗಳ ವೇತನ ಪಾವತಿಯಾಗಿಲ್ಲ. ಪೊಲೀಸ್ ಪರಿಶೀಲನೆಯ ವರದಿ ಉಲ್ಲೇಖಿಸಿ ಆಡಳಿತ ನಿಂದ ಅವರ ವೇತನವನ್ನು ತಡೆ ಹಿಡಿದಿದೆ. 

ಭಯೋತ್ಪಾದಕ ಸಂಘಟನೆಗೆ ಸೇರಿದ್ದಾರೆ ಎಂದು ಆರೋಪಿಸಿ 1990ರಲ್ಲಿ 51ರ ಹರೆಯದ ಬಶೀರ್ ಅಹ್ಮದ್ ಮಿರ್ ಅವರನ್ನು ಬಂಧಿಸಲಾಗಿತ್ತು. ಅನಂತರ ಸ್ಥಳೀಯ ನ್ಯಾಯಾಲಯ ಅವರನ್ನು ಎಲ್ಲಾ ಆರೋಪಗಳಿಂದ ಖುಲಾಸೆಗೊಳಿಸಿತ್ತು. ಅಲ್ಲದೆ, ವೇತನ ಬಿಡುಗಡೆಗೊಳಿಸುವಂತೆ ಆದೇಶಿಸಿತ್ತು. ಎನ್ಡಿಟಿವಿಯೊಂದಿಗೆ ಮಾತನಾಡಿರುವ ಮಿರ್, ತನ್ನ ಪುತ್ರ ಸೂಕ್ಷ ವ್ಯಕ್ತಿ. ತಂದೆ ಅಧ್ಯಾಪಕರಾಗಿದ್ದರೂ ಶಿಕ್ಷಣದ ಶುಲ್ಕ ಪಾವತಿಸಲು ಸಾಧ್ಯವಾಗಿಲ್ಲವಲ್ಲ ಎಂಬ ಬೇಸರ ಅವನಲ್ಲಿ ಇತ್ತು ಎಂದು ಹೇಳಿದ್ದಾರೆ. 

‘ವೀಡಿಯೊದಲ್ಲಿ ಆತ ಹೇಳುವುದನ್ನು ನೀವು ಕಾಣಬಹುದು. ಕಳೆದ ಎರಡು ವರ್ಷಗಳಿಂದ ವೇತನ ಸಿಗದ ಕಾರಣದಿಂದ ತೊಂದರೆ ಅನುಭವಿಸುತ್ತಿರುವ ಎಲ್ಲ ಅಧ್ಯಾಪಕರಿಗಾಗಿ ನಾನು ನನ್ನ ಬದುಕನ್ನು ತ್ಯಾಗಮಾಡುತ್ತೇನೆ ಎಂದು ಆತ ಹೇಳಿದ್ದಾನೆ’’ ಎಂದು ಅವರು ತಿಳಿಸಿದ್ದಾರೆ.

ಕಾಶ್ಮೀರದಲ್ಲಿ 2019 ಮಾರ್ಚ್ ನಿಂದ ಸುಮಾರು 140 ಅಧ್ಯಾಪಕರಿಗೆ ವೇತನ ದೊರೆತಿಲ್ಲ. ಎಲ್ಲರೂ ಕೆಲವು ತಿಂಗಳ ಹಿಂದೆ ವರ್ಗಾವಣೆಯಾಗಿರುವ ಶಾಲಾ ಶಿಕ್ಷಣದ ಮಾಜಿ ನಿರ್ದೇಶಕ ಯೂನಿಸ್ ಮಲಿಕ್ ಅವರನ್ನು ದೂರುತ್ತಿದ್ದಾರೆ. ಶೋಹಿಬ್ ಬಶೀರ್ ವೀಡಿಯೊ ವ್ಯಾಪಕವಾಗಿ ಪ್ರಸರಣವಾದ ಬಳಿಕ ಅಧಿಕಾರಿಗಳು ಕೆಲವು ಕ್ರಮಗಳನ್ನು ಆರಂಭಿಸಿದ್ದಾರೆ. ಶಾಲಾ ಶಿಕ್ಷಣದ ಪ್ರಸಕ್ತ ನಿರ್ದೇಶಕ ತಸದುಕ್ ಮಿರ್, ಸರಕಾರಕ್ಕೆ ವರದಿ ಸಲ್ಲಿಸಲಾಗಿದೆ. ಇದು ಶೀಘ್ರ ನಿರ್ಧಾರವಾಗುವ ಸಾಧ್ಯತೆ ಇದೆ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News