ಕೇಂದ್ರ ಸಚಿವ ಅಶ್ವನಿ ಚೌಬೆ ವಿರುದ್ಧ ವರದಿ ಪ್ರಕಟ: ಬಿಹಾರದ ಪತ್ರಕರ್ತನ ವಿರುದ್ಧ ಎಫ್ಐಆರ್ ದಾಖಲು

Update: 2021-06-01 17:21 GMT

ಪಾಟ್ನಾ (ಬಿಹಾರ), ಜೂ. 1: ಕೇಂದ್ರ ಸಚಿವ ಅಶ್ವನಿ ಚೌಬೆ ಅವರು ಹೊಸ ಪೋಸ್ಟರ್ ನೊಂದಿಗೆ ಹಳೆಯ ಆ್ಯಂಬುಲೆನ್ಸ್ ಅನ್ನು ಮರು ಲೋಕಾರ್ಪಣೆಗೊಳಿಸಿದ್ದಾರೆ ಎಂದು ಆರೋಪಿಸಿ ಸುದ್ದಿ ಪ್ರಕಟಿಸಿದ ಬಕ್ಸಾರ್ ಮೂಲದ ಪತ್ರಕರ್ತ ಉಮೇಶ್ ಪಾಂಡೆ ಅವರು ಬೆದರಿಕೆ ಹಾಗೂ ಪೊಲೀಸ್ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಇಂತಹ ಸುದ್ದಿಯನ್ನು ಭವಿಷ್ಯದಲ್ಲಿ ಪ್ರಕಟಿಸದಂತೆ ತನಗೆ ಹಾಗೂ ತನ್ನ ಕುಟುಂಬಕ್ಕೆ ಬಿಜೆಪಿ ನಾಯಕ ಅಶ್ವನಿ ಚೌಬೆ ಬೆದರಿಕೆ ಒಡ್ಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಅಲ್ಲದೆ, ತನ್ನ ವಿರುದ್ಧ ಮಾನಹಾನಿ ಹಾಗೂ ಬೆದರಿಕೆ ಹಾಗೂ ಇತರ ಪ್ರಕರಣಗಳನ್ನು ಪೊಲೀಸರು ದಾಖಲಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ. 

40ರ ಹರೆಯದ ಪಾಂಡೆ ಅವರು ರಾಮೋಜಿ ಸಮೂಹದ ಸುದ್ದಿ ಪೋರ್ಟಲ್ ಇಟಿವಿ ಭಾರತ್ ನ ಬಕ್ಸಾರ್ ವರದಿಗಾರನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರು 2018 ಜುಲೈಯಿಂದ ಇಟಿವಿಯ ವರದಿಗಾರನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಬಕ್ಸಾರ್ ನ ಸಂಸದ ಹಾಗೂ ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಖಾತೆಯ ಸಹಾಯಕ ಸಚಿವ ಅಶ್ವನಿ ಚೌಬೆ ಅವರು ಹೊಸ ಪೋಸ್ಟರ್ ಗಳೊಂದಿಗೆ ಹಳೆ ಆ್ಯಂಬುಲೆನ್ಸ್ ಅನ್ನು ಮರು ಲೋಕಾರ್ಪಣೆಗೊಳಿಸಿದ ಕಾರ್ಯಕ್ರಮದ ಭಾಗವಾಗಿದ್ದುದನ್ನು ಬಹಿರಂಗಪಡಿಸಿ ಪಾಂಡೆ ಅವರು ಸರಣಿ ವರದಿಗಳನ್ನು ಪ್ರಕಟಿಸಿದ್ದರು. 

ಒಂದೇ ಆ್ಯಂಬುಲೆನ್ಸ್ ಅನ್ನು ಬೇರೆ ಬೇರೆ ಕಡೆಗಳಲ್ಲಿ ಹಲವು ಬಾರಿ ಉದ್ಘಾಟಿಸಲಾಗಿದೆ. ಚೌಬೆ ಅವರು ತನ್ನ ಜಿಲ್ಲೆಯಾದ ಬಾಗಲ್ಪುರಕ್ಕೆ ಕೂಡ ಆ ಆ್ಯಂಬುಲೆನ್ಸ್ ಅನ್ನು ಕಳುಹಿಸಿದ್ದರು. ಅವರು ಒಂದೇ ಆ್ಯಂಬುಲೆನ್ಸ್ ಅನ್ನು ನಾಲ್ಕು ಬಾರಿ ಉದ್ಘಾಟಿಸಿದ್ದರು ಎಂದು ಕೂಡ ಪಾಂಡೆ ವರದಿಯಲ್ಲಿ ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News