ಪುತ್ರಿಯ ಮದುವೆಯ ಔತಣಕೂಟದಲ್ಲಿ ನಿಯಮ ಉಲ್ಲಂಘನೆ: ಬಿಜೆಪಿ ಶಾಸಕನ ವಿರುದ್ಧ ಪ್ರಕರಣ ದಾಖಲು
ಮುಂಬೈ, ಜೂ.1: ಮಗಳ ಮದುವೆಗೆ ಪೂರ್ವಭಾವಿಯಾಗಿ ಭರ್ಜರಿ ಔತಣಕೂಟವನ್ನು ಹಮ್ಮಿಕೊಂಡು ಕೋವಿಡ್ ನಿಯಮಾವಳಿಯನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಬಿಜೆಪಿ ಶಾಸಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಮದುವೆಗೆ ಪೂರ್ವಭಾವಿಯಾಗಿ ನಡೆದ ಔತಣಕೂಟದಲ್ಲಿ ಭಾರೀ ಸಂಖ್ಯೆಯಲ್ಲಿ ಅತಿಥಿಗಳು ಸೇರಿರುವುದು ಹಾಗೂ ಬಿಜೆಪಿ ಶಾಸಕ ಮಹೇಶ್ ಲಾಂಡ್ಗೆ(45 ವರ್ಷ) ಕುಟುಂಬದ ಸದಸ್ಯರೊಂದಿಗೆ ನರ್ತಿಸುತ್ತಿರುವ ದೃಶ್ಯದ ವೀಡಿಯೊ ವೈರಲ್ ಆದ ಬಳಿಕ ಪೊಲೀಸರು ಶಾಸಕ ಮಹೇಶ್ ಹಾಗೂ ಇತರ 60 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ವರದಿಯಾಗಿದೆ.
ಸಮಾರಂಭದಲ್ಲಿ ಪಾಲ್ಗೊಂಡವರು ಮಾಸ್ಕ್ ಧರಿಸಿರಲಿಲ್ಲ, ಸುರಕ್ಷಿತ ಅಂತರದ ನಿಯಮ ಮರೆತಿದ್ದಾರೆ ಮತ್ತು ಜಿಲ್ಲಾಡಳಿತದ ಅನುಮತಿ ಪಡೆಯದೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಕೊರೋನ ಸೋಂಕಿನ ಪ್ರಕರಣ ಹೆಚ್ಚಿರುವ ಮಹಾರಾಷ್ಟ್ರದಲ್ಲಿ ಮದುವೆ ಹಾಗೂ ಇತರ ಸಮಾರಂಭಗಳಲ್ಲಿ ಕೇವಲ 25 ಜನ ಮಾತ್ರ ಪಾಲ್ಗೊಳ್ಳಲು ಅವಕಾಶವಿದೆ.