ಕೋವಿಡ್ 2ನೇ ಅಲೆಯಲ್ಲಿ 1 ಕೋಟಿ ಜನರು ಉದ್ಯೋಗ ಕಳೆದುಕೊಂಡಿದ್ದಾರೆ: ಸಿಎಂಐಇ

Update: 2021-06-01 17:56 GMT
ಸಾಂದರ್ಭಿಕ ಚಿತ್ರ 

ಮುಂಬೈ, ಜೂ.1: ಕೊರೋನ ಸೋಂಕಿನ 2ನೇ ಅಲೆಯಿಂದ ದೇಶದಲ್ಲಿ 1 ಕೋಟಿಗೂ ಹೆಚ್ಚಿನವರು ಉದ್ಯೋಗ ಕಳೆದುಕೊಂಡಿದ್ದು ಸುಮಾರು 97% ಕುಟುಂಬದ ಆದಾಯ ಕಡಿಮೆಯಾಗಿದೆ ಎಂದು ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಇಕಾನಮಿ(ಸಿಎಂಐಇ)ಯ ಸಿಇಒ ಮಹೇಶ್ ವ್ಯಾಸ್ ಹೇಳಿದ್ದಾರೆ. 

ನಿರುದ್ಯೋಗದ ಪ್ರಮಾಣ ಎಪ್ರಿಲ್ ಅಂತ್ಯಕ್ಕೆ 8% ಇದ್ದರೆ, ಮೇ ಅಂತ್ಯದ ವೇಳೆಗೆ 12%ಕ್ಕೆ ತಲುಪಿದೆ. ಇದಕ್ಕೆ ಕೊರೋನ ಸೋಂಕಿನ 2ನೇ ಅಲೆಯೇ ಪ್ರಮುಖ ಕಾರಣ. ಲಾಕ್ಡೌನ್, ನಿಬರ್ಂಧ ಅಂತ್ಯವಾಗಿ ಆರ್ಥಿಕ ಚಟುವಟಿಕೆಗೆ ಚಾಲನೆ ದೊರಕಿದರೂ ಸಮಸ್ಯೆ ಸಂಪೂರ್ಣ ಪರಿಹಾರವಾಗದು ಎಂದವರು ಹೇಳಿದ್ದಾರೆ.

ಕೆಲಸ ಕಳೆದುಕೊಂಡವರಿಗೆ ಮತ್ತೆ ಕೆಲಸ ಸಿಗುವುದು ಸುಲಭವಲ್ಲ. ಅಸಾಂಪ್ರದಾಯಿಕ ವಲಯದ ಕಾರ್ಮಿಕರಿಗೆ ತಕ್ಷಣ ಕೆಲಸಕ್ಕೆ ಮರಳಲು ಅವಕಾಶವಿದೆ. ಆದರೆ ಸಾಂಪ್ರದಾಯಿಕ ವಲಯ ಹಾಗೂ ಉತ್ತಮ ಉದ್ಯೋಗಾವಕಾಶ ನಿಧಾನವಾಗಿ ತೆರೆದುಕೊಳ್ಳಬಹುದು. ಮೇ 2020ರಲ್ಲಿ ರಾಷ್ಟ್ರವ್ಯಾಪಿ ಲಾಕ್ಡೌನ್ ನಿಂದಾಗಿ ನಿರುದ್ಯೋಗದ ಪ್ರಮಾಣ 23.5% ದಾಖಲೆ ಮಟ್ಟಕ್ಕೆ ತಲುಪಿತ್ತು. 

ಭಾರತೀಯ ಆರ್ಥಿಕತೆಗೆ ಸಂಬಂಧಿಸಿ, 3ರಿಂದ 4% ಪ್ರಮಾಣದ ನಿರುದ್ಯೋಗ ಸಹಜವಾಗಿದೆ ಎಂದು ವ್ಯಾಸ್ ಹೇಳಿದ್ದಾರೆ. ಎಪ್ರಿಲ್ ನಲ್ಲಿ 1.75 ಲಕ್ಷ ಕುಟುಂಬದವರನ್ನು ಸಮೀಕ್ಷೆಗೆ ಒಳಪಡಿಸಿ ಈ ಮಾಹಿತಿ ತಯಾರಿಸಲಾಗಿದೆ. ಸಮೀಕ್ಷೆಗೆ ಒಳಪಟ್ಟವರಲ್ಲಿ ಕೇವಲ 3% ಮಾತ್ರ ತಮ್ಮ ಆದಾಯ ಹೆಚ್ಚಳವಾಗಿದೆ ಎಂದಿದ್ದಾರೆ. 55% ಜನ ಆದಾಯ ಇಳಿಕೆಯಾಗಿದೆ ಎಂದಿದ್ದಾರೆ. ತಮ್ಮ ಆದಾಯದಲ್ಲಿ ವ್ಯತ್ಯಾಸವಾಗಿಲ್ಲ, ಒಂದು ವರ್ಷದ ಹಿಂದಿನಷ್ಟೇ ಇದೆ ಎಂದು 42% ಮಂದಿ ಉತ್ತರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News