ನರೇಂದ್ರ ಮೋದಿ ಸರಕಾರದ 7 ವರ್ಷಗಳು - ಒಂದು ಸಮೀಕ್ಷೆ

Update: 2021-06-02 05:38 GMT

ಭಾಗ-6

ವರ್ಣಾಶ್ರಮ ಪದ್ಧತಿ ಹಿಂದೂ ಸಂಸ್ಕೃತಿಯ ಅವಿಭಾಜ್ಯ ಅಂಗ. ಹೀಗಾಗಿ ಪಂಚಮರು ಮತ್ತು ಶೂದ್ರವರ್ಗದವರು ಹಿಂದಿನಂತೆ ಮೇಲ್ವರ್ಗದವರ ಸೇವೆ ಮಾಡುತ್ತಿರಬೇಕು. ಮಲಹೊರುವುದು, ಒಳಚರಂಡಿಯನ್ನು ಶುದ್ಧೀಕರಿಸುವುದು, ಸತ್ತ ಗೋವುಗಳ ಕಳೇಬರಗಳನ್ನು ಹೊರುವುದು ಇತ್ಯಾದಿ ಕೈಂಕರ್ಯಗಳು ಅವರಿಗೆ ಅನಾದಿಕಾಲದಿಂದ ರೂಢಿಸಲ್ಪಟ್ಟ ವೃತ್ತಿಗಳು. ಇವನ್ನು ಅವರು ವಿಧೇಯರಾಗಿ ಒಪ್ಪಿಕೊಳ್ಳಬೇಕು. ಈ ರೂಢಿಯನ್ನು ಪ್ರಶ್ನಿಸಿದವರು ಸಮಾಜದ ಶಾಂತಿಯನ್ನು ಹಾಳುಗೆಡವುತ್ತಾರೆ - ಅವರ ಮೇಲೆ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕು ಎಂಬು ದು ಭಾಜಪದ ಇನ್ನೊಂದು ಸಿದ್ಧಾಂತ.

ಅಧಿಕಾರದ ಗದ್ದುಗೆಗೆ ಏರಿದ ಬಳಿಕ ತಮ್ಮ ಕಲ್ಪನೆಯನ್ನು ಅನುಷ್ಠಾನಗೊಳಿಸಲು 1930ರ ದಶಕದಲ್ಲಿ ಜರ್ಮನಿಯಲ್ಲಿ ಮಾಡಿದಂತೆ ಸಮಾಜವನ್ನು ಒಡೆಯಲು ಮೋದಿ ಮತ್ತವರ ತಂಡದವರು ಎರಡು ಪ್ರಮುಖ ಕ್ರಮಗಳನ್ನು ಕೈಗೊಂಡರು: ಒಂದು, ಬಾಹ್ಯ ಹಾಗೂ ಆಂತರಿಕ ವೈರಿಗಳ ಸೃಷ್ಟಿ. ಎರಡು, ಜಾತಿ ಮತ್ತು ಧರ್ಮದ ಆಧಾರದಲ್ಲಿ ಸಾಮಾಜಿಕ ಧ್ರುವೀಕರಣ.

ಹಿಂದೂ ಧರ್ಮಕ್ಕೆ ಮತ್ತು ಸಂಸ್ಕೃತಿಗೆ ಆಕ್ರಮಣಕಾರಿಗಳಾಗಿ ಬಂದು ಇಲ್ಲಿ ನೆಲೆಸಿದ ಮುಸ್ಲಿಮರಿಂದ ಅಪಾಯವಿದೆ. ಸರಕಾರದ ನೀತಿಯನ್ನು ಹಾಗೂ ಭಾರತದ ಅನಾದಿಕಾಲದ ಸಂಸ್ಕೃತಿಯನ್ನು ಟೀಕಿಸುವವರು ರಾಷ್ಟ್ರವಿರೋಧಿಗಳು. ಇವರಿಬ್ಬರೂ ದೇಶದ ಆಂತರಿಕ ವೈರಿಗಳು. ಪಾಕಿಸ್ತಾನವು ಅಖಂಡ ಭಾರತದ ವಿಭಜನೆಯಾಗಿ ಜನಿಸಿದ ದೇಶ. ಭಾರತದ ಏಳಿಗೆಗೆ ಅದು ಅಡ್ಡಬರುತ್ತಿದೆ. ಈ ಕಾರಣಕ್ಕೆ ಅದು ಭಾರತದ ಬಾಹ್ಯ ವೈರಿ. ದೇಶದ ವಿಕಾಸವಾಗಲು ಈ ಎರಡು ವೈರಿಗಳನ್ನು ಸದೆಬಡಿಯಬೇಕು. ಬಲಾಢ್ಯವಾದ ನರೇಂದ್ರ ಮೋದಿ ಸರಕಾರಕ್ಕೆ ಮಾತ್ರ ಆ ಸಾಮರ್ಥ್ಯವಿದೆ ಎಂದು ಭಾಜಪ ಬಿಂಬಿಸಿತು.

 ‘ಆಂತರಿಕ ವೈರಿ’ ಎಂಬ ಪದದ ವ್ಯಾಪ್ತಿ ಊಹೆಗೂ ನಿಲುಕದ್ದು! ಆಳುವ ಪಕ್ಷ ಮತ್ತು ಅದರ ಸಹವರ್ತಿಗಳ ನೀತಿಯನ್ನು ಟೀಕಿಸುವವರೆಲ್ಲರೂ ದೇಶದ ವೈರಿಗಳೆಂಬ ವ್ಯಾಖ್ಯಾನಕ್ಕೆ ಒಳಗಾಗುತ್ತಾರೆ-ಕಾಲೇಜು ಪ್ರೊಫೆಸರುಗಳು, ವಿದ್ಯಾರ್ಥಿ ನಾಯಕರು, ನ್ಯಾಯವಾದಿಗಳು, ಲೇಖಕರು, ಇತಿಹಾಸಕಾರರು, ಕಲಾವಿದರು, ಪತ್ರಕರ್ತರು, ಜನಪರ ಚಳವಳಿಯಲ್ಲಿ ಭಾಗಿಯಾಗುವವರು - ಹೀಗೆ ದೇಶದ್ರೋಹಿಗಳ ಪಟ್ಟಿ ಬೆಳೆಯುತ್ತಾ ಹೋಗುತ್ತ್ತದೆ.

ಸಂಘಪರಿವಾರದ ಪ್ರಕಾರ, ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ರಾಷ್ಟ್ರಪ್ರೇಮವಿಲ್ಲ, ಅವರಿಗೆ ಧರ್ಮವೇ ಪ್ರಧಾನ. ಮುಸ್ಲಿಮರಿಂದಾಗಿ ಹಿಂದೂ ಧರ್ಮ ಅವನತಿಯ ಹಾದಿ ಹಿಡಿದಿದೆ. ಕ್ರಮೇಣ ಮುಸ್ಲಿಮರ ಸಂಖ್ಯೆ ಹಿಂದೂಗಳಿಗಿಂತ ಹೆಚ್ಚಾಗಲಿದೆ. ವರ್ಣಾಶ್ರಮ ಪದ್ಧತಿ ಹಿಂದೂ ಸಂಸ್ಕೃತಿಯ ಅವಿಭಾಜ್ಯ ಅಂಗ. ಹೀಗಾಗಿ ಪಂಚಮರು ಮತ್ತು ಶೂದ್ರವರ್ಗದವರು ಹಿಂದಿನಂತೆ ಮೇಲ್ವರ್ಗದವರ ಸೇವೆ ಮಾಡುತ್ತಿರಬೇಕು. ಮಲಹೊರುವುದು, ಒಳಚರಂಡಿಯನ್ನು ಶುದ್ಧೀಕರಿಸುವುದು, ಸತ್ತ ಗೋವುಗಳ ಕಳೇಬರಗಳನ್ನು ಹೊರುವುದು ಇತ್ಯಾದಿ ಕೈಂಕರ್ಯಗಳು ಅವರಿಗೆ ಅನಾದಿಕಾಲದಿಂದ ರೂಢಿಸಲ್ಪಟ್ಟ ವೃತ್ತಿಗಳು. ಇವನ್ನು ಅವರು ವಿಧೇಯರಾಗಿ ಒಪ್ಪಿಕೊಳ್ಳಬೇಕು. ಈ ರೂಢಿಯನ್ನು ಪ್ರಶ್ನಿಸಿದವರು ಸಮಾಜದ ಶಾಂತಿಯನ್ನು ಹಾಳುಗೆಡವುತ್ತಾರೆ - ಅವರ ಮೇಲೆ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕು ಎಂಬು ದು ಭಾಜಪದ ಇನ್ನೊಂದು ಸಿದ್ಧಾಂತ.

ಭಾಜಪದ ಇನ್ನೊಂದು ನಿಲುವು ಕೂಡ ಉಲ್ಲೇಖನೀಯ. ಅದರ ಪ್ರಕಾರ, ಅಲ್ಪಸಂಖ್ಯಾಕರು ಮತ್ತು ಸಮಾಜದ ತಳವರ್ಗಗಳಿಗೆ ಒದಗಿಸಿದ ಸಂವಿಧಾನಾತ್ಮಕ ಸವಲತ್ತುಗಳು ಮತ್ತು ಹಕ್ಕುಗಳು ಅವರನ್ನು ಓಲೈಸಲು ಹಿಂದಿನ ಸರಕಾರಗಳು ಕೈಗೊಂಡ ಕ್ರಮಗಳು. ಇಂದು ದೇಶದ ವಿಕಾಸವಾಗುವಾಗ ಅವರ ಆರ್ಥಿಕ ಸ್ಥಿತಿಯೂ ಸುಧಾರಿಸಲಿದೆ, ಆ ಕಾರಣಕ್ಕಾಗಿ ಅವುಗಳನ್ನು ರದ್ದು ಮಾಡಬಹುದು.

ಪ್ರಚಾರಕ್ಕೆ ಆಧುನಿಕ ಮಾಹಿತಿ ತಂತ್ರಜ್ಞಾನದ ಗರಿಷ್ಠ ಬಳಕೆಗೆ ಬೇಕಾದಷ್ಟು ಸಂಪನ್ಮೂಲಗಳು ಭಾಜಪದಲ್ಲಿದ್ದವು. ಮಾತ್ರವಲ್ಲ ಅದರ ದೇಶವ್ಯಾಪಿ ಅಂಗಸಂಸ್ಥೆಗಳು ಮತ್ತು ಪೂರ್ಣಕಾಲಿಕ ಕಾರ್ಯಕರ್ತರು ಸಂಘದ ಕಲ್ಪನೆಯನ್ನು ದೇಶದಾದ್ಯಂತ ಬಿತ್ತರಿಸುವುದರಲ್ಲಿ ಯಶಸ್ವಿಯಾದರು. ಈ ಪ್ರಚಾರತಂತ್ರದ ಮಾಧ್ಯಮ ಮೂಲಭೂತವಾಗಿ ಸ್ವತಂತ್ರ ಯೋಚನಾಶಕ್ತಿ ಇಲ್ಲದ ಮಧ್ಯಮವರ್ಗದವರು. ಆಂತರಿಕ ಮತ್ತು ಬಾಹ್ಯ ವೈರಿಗಳ ಭಯ, ಧರ್ಮಕ್ಕೆ ಆಗಬಹುದಾದ ಹಾನಿ, ಹಿಂದಿನ ಸರಕಾರಗಳ ವೈಫಲ್ಯ - ಇವುಗಳೆಲ್ಲ ಈ ವರ್ಗದ ಮತದಾರರನ್ನು ಸೆಳೆಯಲು ಉಪಯೋಗಿಸಿದ ಯಶಸ್ವಿ ತಂತ್ರಗಳಾಗಿದ್ದವು.

 ಈ ಕಾಲಾವಧಿಯಲ್ಲಿ ಸಂಭವಿಸಿದ ಕೆಲವು ಘಟನೆಗಳನ್ನು ಈ ಬೆಳವಣಿಗೆಗಳಿಗೆ ನಿದರ್ಶನಗಳಾಗಿ ಇಲ್ಲಿ ಹೇಳಬೇಕು.

1.ಅಲ್ಪಸಂಖ್ಯಾಕರ ಮೇಲೆ ಗೋಕಳ್ಳತನದ, ಹಿಂದೂ ಯುವತಿಯರನ್ನು ‘ಲವ್ ಜಿಹಾದ್’ ಮೂಲಕ ಮತಾಂತರಿಸುವ, ಹಿಂದೂಗಳ ಆರಾಧನಾ ಸ್ಥಳಗಳನ್ನು ಅಪವಿತ್ರಗೊಳಿಸಿದರೆಂಬ ವಿಭಿನ್ನ ಆಪಾದನೆಗಳನ್ನು ಹೊರಿಸಿ, ಹಿಂಸಿಸಿದ, ಹತ್ಯೆ ಮಾಡಿದ ಘಟನೆಗಳು ಮತ್ತು ಅವುಗಳ ತಡೆಗೆಂದು ಗೋರಕ್ಷಕರ ತಂಡ ಮತ್ತು ‘ರೋಮಿಯೊ’ ನಿಗ್ರಹ ಪಡೆಗಳ ಸ್ಥಾಪನೆ ಹಾಗೂ ಹೊಸ ಕಾನೂನುಗಳ ಜಾರಿ.

 2. ಹಿಂದೂ ಧರ್ಮದ ಪರಂಪರೆಯಾದ ವರ್ಣಾಶ್ರಮ ಪದ್ಧತಿಯನ್ನು ಪ್ರಶ್ನಿಸಿದ ದಲಿತರ ಮೇಲೆ ದೇಶದ ವಿವಿಧೆಡೆಗಳಲ್ಲಿ ನಡೆದ ಅತ್ಯಾಚಾರಗಳು, ಅವರ ಅಸ್ಮಿತೆಗಳನ್ನು ಎತ್ತಿಹಿಡಿಯುವ ಸಮಾವೇಶಗಳ ಮೇಲೆ ಹಲ್ಲೆ ಮತ್ತು ಅವುಗಳಲ್ಲಿ ಭಾಗವಹಿಸಿದವರ ಮೇಲೆ ದೇಶದ್ರೋಹದ ಆರೋಪ.

 3. ಮೇಲ್ಜಾತಿಯ ಯುವತಿಯೊಬ್ಬಳು ಕೆಳಜಾತಿಯ ಯುವಕನನ್ನು ಪ್ರೀತಿಸಿ ವಿವಾಹವಾಗಲು ಬಯಸಿದರೆ, ಸ್ಥಳೀಯ ಖಾಪ್ ಪಂಚಾಯತುಗಳ ಅಥವಾ ಕುಟುಂಬದ ಹಿರಿಯರ ಆಕ್ರೋಶಕ್ಕೆ ಪಾತ್ರರಾಗಿ ಅವರಿಬ್ಬರೂ ಜೀವವನ್ನು ಕಳಕೊಂಡ ಘಟನೆಗಳು ಮತ್ತು ಮರ್ಯಾದಾ ಹತ್ಯೆಗಳು.

4. ಸರಕಾರದ ನೀತಿ ಮತ್ತು ನಿರ್ಧಾರಗಳನ್ನು ಪ್ರಶ್ನಿಸಿದವರನ್ನು ವಿಭಿನ್ನ ಕಾನೂನುಗಳ ಮೂಲಕ ದಮನಿಸುವ ಪ್ರಯತ್ನಗಳು.

5. ಜೈ ಶ್ರೀರಾಮ್ ಘೋಷಣೆಗೆ ವಿರೋಧ ವ್ಯಕ್ತಪಡಿಸಿದವರನ್ನು ವಾಗ್ದಂಡನೆ ಮತ್ತು ದೈಹಿಕ ಶಿಕ್ಷೆಗೆ ಗುರಿಪಡಿಸುವುದು.

6. ಹಿಂದಿಯನ್ನು ರಾಷ್ಟ್ರಭಾಷೆ ಎಂದು ಬಿಂಬಿಸಿ ಎಲ್ಲಾ ಹಂತಗಳಲ್ಲಿ ಉಪಯೋಗಿಸುವುದು. ತತ್ಪರಿಣಾಮವಾಗಿ ದೇಶದ ಇತರ ಭಾಷೆಗಳ ಅವಗಣನೆ.

► ಧ್ರುವೀಕರಣ ಮತ್ತು ಬಹುತ್ವಕ್ಕೆ ಹಾನಿ

ಸಂಘಪರಿವಾರದ ಈ ತಂತ್ರಗಾರಿಕೆಯಿಂದಾಗಿ ದೇಶದ ಸಾಮಾಜಿಕ ಸಾಮರಸ್ಯ, ಸಹಬಾಳ್ವೆಯ ಕಲ್ಪನೆ ಹಾಗೂ ಮತಸಹಿಷ್ಣುತೆಗಳಿಗೆ ತೀವ್ರವಾದ ಆಘಾತವಾಗುತ್ತಿದೆ. 20ನೇ ಶತಮಾನದಲ್ಲಿ ಮತ್ತು ಈ ಶತಮಾನದ ಆರಂಭದಲ್ಲಿ ವ್ಯಾಪಕವಾಗಿ ಬೆಳೆಯುತ್ತಿದ್ದ ವೈಜ್ಞಾನಿಕ ಮನೋಧರ್ಮ ನೇಪಥ್ಯಕ್ಕೆ ಸರಿದು ಅದರ ಸ್ಥಾನವನ್ನು ಅರೆವೈಜ್ಞಾನಿಕ ಚಿಂತನೆಗಳು, ಕಂದಾಚಾರಗಳು, ಮೌಢ್ಯಗಳು ಆಕ್ರಮಿಸುತ್ತಿವೆ. ಸಮಾಜದ ಹೊಸ ಪೀಳಿಗೆಯ ಯುವಕರ ಸಮಗ್ರ ಬೆಳವಣಿಗೆಗೆ ಅಗತ್ಯವಾದ ವಿಶ್ವವಿದ್ಯಾನಿಲಯಗಳು, ವೈಜ್ಞಾನಿಕ, ಸಾಮಾಜಿಕ ಮತ್ತು ಮಾನವಿಕ ಶಾಸ್ತ್ರ ಅಧ್ಯಯನ ಹಾಗೂ ಸಂಶೋಧನಾ ಸಂಸ್ಥೆಗಳು ಮತ್ತು ಬಹುಸಂಸ್ಕೃತಿಯನ್ನು ಬಿಂಬಿಸಿ ಪೊರೆಯುವ ಸ್ವಾಯತ್ತ ಸಂಸ್ಥೆಗಳು ಹೊಸ ಭಾರತದ ಕಲ್ಪನೆಯನ್ನು ಸಾಕಾರಗೊಳಿಸುವ ಸಾಂಸ್ಥಿಕ ವಾಹನಗಳಾಗಿ ಪರಿವರ್ತಿತವಾಗಿವೆ.

ದೇಶದ ದುರ್ದೈವವೆಂದರೆ, 21ನೇ ಶತಮಾನದ ಅಭಿವೃದ್ಧಿಶೀಲ ರಾಷ್ಟ್ರದ ನಾಯಕರಾದ ನರೇಂದ್ರ ಮೋದಿಯವರೇ ಅನೇಕ ಬಾರಿ ತಮ್ಮ ತೀರಾ ಅವೈಜ್ಞಾನಿಕವಾದ ಚಿಂತನೆಗಳನ್ನು ಸಾರ್ವಜನಿಕವಾಗಿ ಹಂಚಿಕೊಂಡಿದ್ದಾರೆ. ಆ ಮೂಲಕ ಮೌಢ್ಯಮೂಲವಾದ ವರ್ತೆಗಳಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ.

 ಆರೋಗ್ಯವಂತ ಸಮಾಜಕ್ಕೆ ಅಗತ್ಯವಾದ ಪ್ರಶ್ನಿಸುವ ಮನೋಭಾವಕ್ಕೆ ತೀವ್ರವಾದ ಹಿನ್ನಡೆ ಉಂಟಾಗುತ್ತಿದೆ. ಆಳುವ ಪಕ್ಷದ ದೃಷ್ಟಿಕೋನದಲ್ಲಿ ಹೊಸ ಧೋರಣೆಗಳು ಶ್ರೇಷ್ಠ ಭಾರತದ ನಿರ್ಮಾಣಕ್ಕಾಗಿ ರೂಪಿತವಾಗಿವೆ, ಹಾಗಾಗಿ ಸರಕಾರದ ನೀತಿ ನಿರ್ಧಾರಗಳನ್ನು ಪ್ರಶ್ನಿಸುವ ವಿಜ್ಞಾನಿಗಳು, ಸಮಾಜ ವಿಜ್ಞಾನಿಗಳು, ಇತಿಹಾಸಕಾರರು, ಸಂಶೋಧಕರು, ಕಾನೂನು ತಜ್ಞರು, ಪರಿಸರ ತಜ್ಞರು ಖಂಡನೆಗೆ ಅರ್ಹರಾಗುತ್ತಾರೆ. ಮಾತ್ರವಲ್ಲ, ಸದ್ಯದ ದೃಷ್ಟಿಕೋನದಲ್ಲಿ ದೇಶದ ‘ಅಧೋಗತಿ’ಗೆ ಕಾರಣರಾದ ಹಿಂದಿನ ರಾಜಕೀಯ ನಾಯಕರು, ಮುತ್ಸದ್ದಿಗಳು ಮತ್ತು ಸ್ವಾತಂತ್ರ್ಯ ಹೊೀರಾಟಗಾರರು ಗೌರವಕ್ಕೆ ಅರ್ಹರಲ್ಲ.

ಜೊತೆಗೇ ದೇಶದ ಚರಿತ್ರೆಯನ್ನು ಹೊಸ ಭಾರತದ ಕಲ್ಪನೆಗೆ ಪೂರಕವಾಗುವಂತೆ ಪುನಾರಚಿಸುವ ಅಗತ್ಯವೂ ಇದೆ ಎಂದು ಪ್ರಚಾರ ಮಾಡಲಾಗುತ್ತಿದೆ.

ದೇಶದಲ್ಲಿಂದು ಆಡಳಿತದ ಪರ ಮತ್ತು ವಿರೋಧವೆಂಬ ಎರಡು ವರ್ಗಗಳು ಮುನ್ನೆಲೆಗೆ ಬರುತ್ತಿವೆ. ಈ ಬೆಳವಣಿಗೆಯಿಂದಾಗಿ ಕಚೇರಿಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ, ಕಾರ್ಖಾನೆಗಳಲ್ಲಿ, ವಿದ್ಯಾಕೇಂದ್ರಗಳಲ್ಲಿ - ಮಾತ್ರವಲ್ಲ ಕುಟುಂಬಗಳಲ್ಲಿಯೂ-ಪರ-ವಿರೋಧವೆಂಬ ಮನಃಸ್ಥಿತಿ ಬೆಳೆಯುತ್ತಿದೆ. ಬ್ರಿಟಿಷರು ವಿಭಜಿಸಿ ಆಳುವ ನೀತಿಯನ್ನು ಅನುಸರಿಸಿ ಭಾರತವನ್ನು ಗೆದ್ದರೆ ಪ್ರಸಕ್ತ ನರೇಂದ್ರ ಮೋದಿಯವರ ನೇತೃತ್ವದ ಭಾಜಪ ಸರಕಾರ ಅದೇ ತಂತ್ರವನ್ನು ಮತ್ತೆ ಅನುಷ್ಠಾನಿಸಿ ಆಳುತ್ತಿದ್ದಾರೆ.

ಜಾತಿ ಮತ್ತು ಧರ್ಮದ ಹೆಸರಿನಲ್ಲಿ ಸಮಾಜದಲ್ಲಿ ನಡೆಯುತ್ತಿರುವ ಹಿಂಸೆಗಳ ಬಗ್ಗೆ ರಾಷ್ಟ್ರದ ನಾಯಕನ ನೆಲೆಯಲ್ಲಿ ಪ್ರಧಾನ ಮಂತ್ರಿ ದೃಢವಾದ ನಿಷ್ಪಕ್ಷ ನಿಲುವನ್ನು ಹೊಂದಿ ತಮ್ಮ ಬೆಂಬಲಿಗರಿಗೆ ಎಚ್ಚರಿಕೆ ನೀಡಬೇಕು, ಜೊತೆಗೆ ಹಿಂಸೆಗೆ ಗುರಿಯಾದ ನಾಗರಿಕರಿಗೆ ಸಾಂತ್ವನ ಹೇಳಿ ರಕ್ಷಣೆಯನ್ನು ಒದಗಿಸಬೇಕು. ಈ ಏಳು ವರ್ಷಗಳಲ್ಲಿ ಪ್ರಧಾನಿಯಾಗಿ ಮೋದಿಯವರು ಒಮ್ಮೆಯೂ ಅಲ್ಪಸಂಖ್ಯಾಕರ ಮೇಲೆ ಮತ್ತು ದಲಿತರ ಮೇಲೆ ಕ್ರೌರ್ಯ ನಡೆಸಿದ ಸಂಘಪರಿವಾರದವರನ್ನು ಖಂಡಿಸಿಲ್ಲ; ಬಂಧುಗಳನ್ನು ಮತ್ತು ಆಸ್ತಿ-ಪಾಸ್ತಿಗಳನ್ನು ಕಳಕೊಂಡ ನಾಗರಿಕರಿಗೆ ಸಾಂತ್ವನದ ಮಾತುಗಳನ್ನು ಹೇಳಿಲ್ಲ. ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರ ಭಾವಚಿತ್ರಕ್ಕೆ ಗುಂಡುಹೊಡೆದು 1948ರ ದುರಂತವನ್ನು ವೈಭವೀಕರಿಸಿದ ಸಂಘಪರಿವಾರದ ಸಾಧ್ವಿಯ ಮೇಲೆ ಕ್ರಮವನ್ನು ಕೈಗೊಳ್ಳಲಿಲ್ಲ.

 ಒಂದು ಮಹಾನ್ ದೇಶದ ನಾಯಕನು ತಾನು ಉದ್ಧರಿಸುವ ತತ್ವಗಳಿಗೆ ಬದ್ಧನೆಂದು ತನ್ನ ವರ್ತನೆಯಿಂದ ಭರವಸೆ ಹುಟ್ಟಿಸಬೇಕು. ಪ್ರಧಾನ ಮಂತ್ರಿ ಮೋದಿಯವರ ಎರಡು ಹೇಳಿಕೆಗಳು ಉಲ್ಲೇಖನೀಯ.

2016ರಲ್ಲಿ ಅಮೆರಿಕದ ಸಂಸತ್ತನ್ನು ಉದ್ದೇಶಿಸಿ ಮಾತನಾಡುತ್ತಾ ಮೋದಿ ಹೇಳಿದ್ದರು:

‘‘ನಮ್ಮ ಸಂವಿಧಾನಕರ್ತೃಗಳು, ಸ್ವಾತಂತ್ರ್ಯ, ಗಣತಂತ್ರ ಮತ್ತು ಸಮಾನತೆಯೇ ಆತ್ಮವಾಗಿರುವ ರಾಷ್ಟ್ರವನ್ನು ಕಲ್ಪಿಸಿದರು. ಅದರ ಜೊತೆಗೆ ಶತಮಾನಗಳಿಂದ ರೂಢಿಯಲ್ಲಿದ್ದ ವಿವಿಧತೆಯನ್ನು ಉಳಿಸಿಕೊಂಡರು. ಹಾಗಾಗಿ ಇಂದು ದೇಶದ ಬೀದಿಗಳಲ್ಲಿ, ಸಂಸ್ಥೆಗಳಲ್ಲಿ, ಹಳ್ಳಿಗಳಲ್ಲಿ, ನಗರಗಳಲ್ಲಿ ಎಲ್ಲಾ ಧರ್ಮ ಹಾಗೂ ಭಾಷೆಗಳಿಗೆ ಸಮಾನ ಗೌರವವಿದೆ, ಮಾತ್ರವಲ್ಲ, 125 ಕೋಟಿ ನಾಗರಿಕರು ಭೀತಿಮುಕ್ತರಾಗಿ, ತಮ್ಮ ಹಕ್ಕುಗಳನ್ನು ಚಾಯಿಸುವ ವಾತಾವರಣವು ಇದೆ.’’

ಈ ಭಾಷಣದ ಬಳಿಕದ ವರ್ಷಗಳಲ್ಲಿ ಅಲ್ಪಸಂಖ್ಯಾಕರು ಮತ್ತು ಸಮಾಜದ ಅಂಚಿನಲ್ಲಿರುವವರ ಮೇಲೆ ಸಂಭವಿಸಿದ ಯಾವುದೇ ದೌರ್ಜನ್ಯಗಳನ್ನು ಮೋದಿಯವರು ಖಂಡಿಸಲಿಲ್ಲ.

2019ರ ಗಾಂಧಿ ಜಯಂತಿಯ ಸಂದರ್ಭದಲ್ಲಿ ಗಾಂಧೀಜಿ ಯವರಿಗೆ ಅತ್ಯಂತ ಪ್ರಿಯವಾದ ‘ವೈಷ್ಣವ ಜನತೋ ತೇನೆ ಕಹಿಯೇ..’ ಗೀತೆಯನ್ನು ಉದ್ಧರಿಸಿ ಅಮೆರಿಕದ ಪ್ರಸಿದ್ಧ ದೈನಿಕ ‘ನ್ಯೂಯಾರ್ಕ್ ಟೈಮ್ಸ್’ನ ಸಂಪಾದಕೀಯ ಪುಟದ ತಮ್ಮ ಲೆೀಖನದಲ್ಲಿ ಮೋದಿ ಹೀಗೆ ಬರೆದಿದ್ದರು:

‘‘ಒಬ್ಬ ನೈಜ ಮಾನವನಾದವನು ಇನ್ನೊಬ್ಬನ ನೋವನ್ನು ಅನುಭವಿಸುತ್ತಾನೆ, ಅವನ ಸಂಕಷ್ಟವನ್ನು ನಿವಾರಿಸುವ ಪ್ರಯತ್ನವನ್ನು ಮಾಡುತ್ತಾನೆ. ಅವನು ಎಂದಿಗೂ ಅಹಂಕಾರಿಯಾಗಿರಲಾರ. ದ್ವೇಷ, ಹಿಂಸೆ ಮತ್ತು ನೋವುಗಳಿಂದ ಮಾನವ ಜನಾಂಗವನ್ನು ವಿಮುಕ್ತಿಗೊಳಿಸಿ ಜಗತ್ತಿನ ಏಳಿಗೆಗೆ ಜೊತೆಯಾಗಿ ದುಡಿಯೋಣ.’’

ಈ ಲೇಖನ ಬರೆದ ಕೆಲವೇ ತಿಂಗಳಲ್ಲಿ ದಿಲ್ಲಿಯಲ್ಲಿ ನಾಗರಿಕತ್ವದ ತಿದ್ದುಪಡಿ ಕಾನೂನಿನ ವಿರುದ್ಧ ಪ್ರತಿಭಟನಾ ನಿರತ ನಾಗರಿಕರ ಮೇಲೆ ತಮ್ಮದೇ ಸಚಿವರೊಬ್ಬರು ‘‘ದೇಶದ್ರೋಹಿಗಳನ್ನು ಗುಂಡು ಹೊಡೆದು ಕೊಲ್ಲಿ’’ ಎಂದಾಗ ಪ್ರಧಾನಿ ಮೋದಿಯವರು ದಿವ್ಯ ನಿರ್ಲಕ್ಷ್ಯ ತಾಳಿದ್ದರು. ಅನಂತರದ ದಂಗೆಯಲ್ಲಿ 50ಕ್ಕೂ ಅಧಿಕ ಮಂದಿ ಪ್ರಾಣ ಕಳಕೊಂಡರು. ಮೋದಿಯವರು ಆಗಲೂ ದಂಗೆಯನ್ನು ಖಂಡಿಸಲಿಲ್ಲ.

 ► ಎಚ್ಚರಿಕೆಯ ಗಂಟೆ:

ಉತ್ತಮವಾದ ಆಡಳಿತವನ್ನು ಪ್ರಜೆಗಳಿಗೆ ನೀಡುತ್ತೇವೆಂಬ ಆಶ್ವಾಸನೆ ನೀಡಿ ಗದ್ದುಗೆ ಏರಿದ ನರೇಂದ್ರ ಮೋದಿಯವರ ಸರಕಾರದ ಏಳು ವರ್ಷಗಳ ಅಧಿಕಾರಾವಧಿಯಲ್ಲಿ ಹಿಂದಿನ 70 ವರ್ಷಗಳಲ್ಲಿ ಅನುಭವಿಸಿರದ ಆರ್ಥಿಕ ಸಂಕಷ್ಟ, ಪ್ರಜಾತಂತ್ರದ ಮೌಲ್ಯಗಳ ಕುಸಿತ ಮತ್ತು ಸಮಾಜದಲ್ಲಿ ಆತಂಕಕಾರಿ ವಿಭಜನೆಗಳನ್ನು ಭಾರತವು ಕಂಡಿದೆ. ಸಮಾನತೆ, ಭ್ರಾತೃತ್ವ, ಸಹಿಷ್ಣುತೆ ಮತ್ತು ವೈಜ್ಞಾನಿಕ ಮನೋವೃತ್ತಿಯ ಸ್ಥಾನವನ್ನು ಅಸಮಾನತೆ, ವೈಷಮ್ಯ, ಅಸಹಿಷ್ಣುತೆ ಮತ್ತು ಮೌಢ್ಯಗಳು ಆಕ್ರಮಿಸುತ್ತಿವೆ.

 ಭದ್ರತೆಯ ಬದಲು ಸಮಾಜದ ವಿಭಿನ್ನ ಸ್ತರಗಳಲ್ಲಿ ಭಯ ಹೆಚ್ಚುತ್ತಿದೆ. ಕೊರೋನದಿಂದಾಗಿ ಇಡೀ ದೇಶದಲ್ಲಿ ಕಲ್ಪನಾತೀತ ಸಂಕಷ್ಟಗಳು ಉಂಟಾಗಿವೆ, ಪ್ರಜೆಗಳ ಕ್ಷೇಮ ಮರೀಚಿಕೆಯಾಗಿದೆ.


ಇದರ ಜೊತೆಗೆ ಮಹಾ ವಿಪತ್ತಿನಿಂದ ಕಂಗೆಟ್ಟಿರುವ ಪ್ರಜೆಗಳ ಸಮಸ್ಯೆಗಳಿಗೆ ಸ್ಪಂದಿಸಿ ಭರವಸೆ ನೀಡುವ ಸಂವೇದನಾಶೀಲತೆಯು ದೇಶದ ನಾಯಕರಲ್ಲಿಂದು ಕಾಣಸಿಗುತ್ತಿಲ್ಲ.

 ಈ ಗತಿವಿಧಿಗಳು ಗಮನಿಸಿದರೆ ಪುರಂದರ ದಾಸರ ‘ಉತ್ತಮ ಪ್ರಭುತ್ವ ಒಂದು ಲೊಳಲೊಟ್ಟೆ’ ಪದವು ಸಮಕಾಲೀನ ಆಡಳಿತವನ್ನು ಬಿಂಬಿಸುತ್ತವೆಂದು ಭಾಸವಾಗುತ್ತದೆ.

ಈ ಎಲ್ಲ ವೈಫಲ್ಯದ ಹಿನ್ನೆಲೆಯಲ್ಲಿ, ನರೇಂದ್ರ ಮೋದಿ ಸರಕಾರವು ತನ್ನ ಅಮೋಘವಾದ ಏಳು ವರ್ಷಗಳ ಸಾಧನೆಯನ್ನು ವಿಶೇಷ ಸಮಾರಂಭಗಳಿಲ್ಲದೆ ಆಚರಿಸಬೇಕಾದ ವೈಚಿತ್ರ್ಯವನ್ನು ನಾವಿಂದು ನೋಡುತ್ತಿದ್ದೇವೆ. ಈ ಬೆಳವಣಿಗೆ ಸಂಘಪರಿವಾರದ ಅಧ್ವರ್ಯುಗಳಿಗೂ ದೇಶದ ಪ್ರಜ್ಞಾವಂತ ನಾಗರಿಕರಿಗೂ ಪ್ರಕೃತಿ  ನೀಡಿರುವ ಎಚ್ಚರಿಕೆಯ ಗಂಟೆ.

Writer - ಟಿ.ಆರ್.ಭಟ್

contributor

Editor - ಟಿ.ಆರ್.ಭಟ್

contributor

Similar News