ದಮಾಮ್ : ಸಂಕಷ್ಟದಲ್ಲಿದ್ದ ಯುವಕನಿಗೆ ತಾಯ್ನಾಡಿಗೆ ಹೋಗಲು ಐ.ಎಸ್.ಎಫ್ ಸಹಾಯ

Update: 2021-06-02 11:32 GMT

ದಮಾಮ್ : ಪ್ರಾಯೋಜಕರ ಕಿರುಕುಳ ಆರೋಪಿಸಿ ಸೌದಿ ಅರೇಬಿಯಾದಿಂದ ತವರಿಗೆ ಮರಳಲಾಗದೆ ಆತ್ಮಹತ್ಯೆಯೇ ದಾರಿಯೆಂದು ಹೇಳುತ್ತಿದ್ದ ಯುವಕನೊಬ್ಬನನ್ನು ಇಂಡಿಯನ್ ಸೋಶಿಯಲ್ ಫೋರಂ ದಮಾಮ್ ಘಟಕ ಸೌದಿ ಕಾರ್ಮಿಕ ನ್ಯಾಯಾಲಯದ ಅನುಮತಿಯಲ್ಲಿ ತಾಯ್ನಾಡಿಗೆ ಕಳುಹಿಸಲು ಯಶಸ್ವಿಯಾಗಿದೆ.

ತುಮಕೂರಿನ 37ರ ಹರೆಯದ ಜಂಶೀರ್‌ ಅಹ್ಮದ್ ಮೇ 31ರಂದು ತವರು ತಲುಪಿದ್ದಾರೆ. ಜಂಶೀರ್ 9 ವರ್ಷಗಳಿಂದ ವಿವಿಧ ರೆಸ್ಟಾರೆಂಟ್ ಗಳಲ್ಲಿ ಕೆಲಸ ಮಾಡುತ್ತಿದ್ದು ಕಳೆದ ಎರಡೂವರೆ ವರ್ಷಗಳಿಂದ ಖತೀಫ್ ನ ಯಾಸ್ಮೀನ್ ಶಮಿ ರೆಸ್ಟೋರೆಂಟ್ ನಲ್ಲಿ ಕೆಲಸ ಮಾಡುತ್ತಿದ್ದರು. 

ಐದೂವರೆ ವರ್ಷಗಳಿಂದ ಅವರು ತಾಯ್ನಾಡಿಗೆ ಹೋಗಿರಲಿಲ್ಲ ಎನ್ನಲಾಗಿದ್ದು, ಇದೀಗ ನಾಲ್ಕು ತಿಂಗಳುಗಳಿಂದ ಅವರ ತಾಯಿ ತೀವ್ರ ಕಾಯಿಲೆ ಪೀಡಿತರಾಗಿ ಆಸ್ಪತ್ರೆಯಲ್ಲಿದ್ದು, ಅವರ ಪ್ರಾಯೋಜಕರು ತವರಿಗೆ ಮರಳಲು ಎಕ್ಸಿಟ್ ವೀಸಾ ನೀಡದೆ ಸತಾಯಿಸುತ್ತಿದ್ದರು ಎಂದು ದೂರಲಾಗಿತ್ತು.

ತವರಿನಿಂದ ವೈದ್ಯರು ಮತ್ತು ಕುಟುಂಬಸ್ಥರು ಕರೆ ಮಾಡಿದರೂ ಪ್ರಾಯೋಜಕ ಈ ಬಗ್ಗೆ ಗಮನ ಕೊಡುತ್ತಿರಲಿಲ್ಲ. ಜಂಶೀರ್ ಇಕಾಮ ಕಳೆದ ನಾಲ್ಕು ತಿಂಗಳುಗಳ ಹಿಂದೆ ಅವಧಿ ಮುಗಿದಿದ್ದು ಪ್ರಾಯೋಜಕನು ನವೀಕರಿಸಿರಲಿಲ್ಲ. ಅತ್ತ  ಜೀವನ್ಮರಣ ಹೋರಾಟದ ನಡುವೆ ಯಿದ್ದ ತಾಯಿಯನ್ನು ಕಾಣಲು ತವರಿಗೆ ಮರಳಲಾಗದ ಜಂಶೀರ್ ಅಂತಿಮವಾಗಿ ತನ್ನ ದಯನೀಯ ಪಾಡನ್ನು ವಿವರಿಸಿ ವಾಟ್ಸಪ್ ನಲ್ಲಿ ಕಣ್ಣೀರಿಟ್ಟು ಆತ್ಮಹತ್ಯೆಯೇ ದಾರಿಯೆಂದು ವೀಡಿಯೊ ಬಿಟ್ಟಿದ್ದರು. 

ಈ ಬಗ್ಗೆ  ಜಂಶೀರ್‌ ಅವರ ದಯನೀಯ ಸ್ಥಿತಿಯನ್ನು ಅರಿತ ಇಂಡಿಯನ್ ಸೋಶಿಯಲ್ ಫೋರಂ ಕೂಡಲೇ ಕಾರ್ಯಪ್ರವೃತವಾಗಿ ಜಂಶೀರ್‌  ರನ್ನು ಪತ್ತೆಹಚ್ಚಿ, ಪ್ರಾಯೋಜಕನನ್ನು ಸಂಪರ್ಕಿಸಿ ಜಂಶೀರ್ ನನ್ನು ತವರಿಗೆ ಕಳುಹಿಸುವಂತೆ ಮನವೊಲಿಸಲು ಪ್ರಯತ್ನಿಸಿದರೂ ಆತ ಅನುಮತಿ ನೀಡಲಿಲ್ಲ ಎನ್ನಲಾಗಿದ್ದು, ನಂತರ ಐ.ಎಸ್.ಎಫ್ ಕಾರ್ಮಿಕ ನ್ಯಾಯಾಲಯಕ್ಕೆ ದೂರು ನೀಡಿತ್ತು.

ಐ.ಎಸ್‌.ಎಫ್, ದಮಾಮ್, ಕರ್ನಾಟಕ ಘಟಕದ ಕಮ್ಯುನಿಟಿ ಡೆವೆಲಪ್ ಮೆಂಟ್ ಡಿಪಾರ್ಟ್ ಮೆಂಟ್ ನ  ಯಾಸೀನ್ ತುಮಕೂರು ಮತ್ತು  ಇಬ್ರಾಹೀಂ ಕೃಷ್ಣಾಪುರ ಅವರು ಕಾರ್ಮಿಕ ನ್ಯಾಯಾಲಯದಲ್ಲಿ ದೂರು ನೀಡಿದ್ದು, ಮೊದಲು ಅಲ್ ಖೋಬರ್ ಕಾರ್ಮಿಕ ನ್ಯಾಯಾಲಯವನ್ನು ಸಂಪರ್ಕಿಸಿದ್ದು ನಂತರ ಆತನ ಪ್ರಾಯೋಜಕನ ಊರಾದ ಜುಬೈಲ್ ಗೆ ತೆರಳಿ ಅಲ್ಲಿನ ಐ.ಎಸ್.ಎಫ್ ಮುಖಂಡ ನಝೀರ್ ತುಂಬೆ ನೆರವಿನೊಂದಿಗೆ ಕಾರ್ಮಿಕ ನ್ಯಾಯಾಲಯದಲ್ಲಿ ಕೇಸು ಹೂಡಿದ್ದರು. ಕಾರ್ಮಿಕ ನ್ಯಾಯಾಲಯದಲ್ಲಿ ಯುವಕನಿಗೆ ನ್ಯಾಯ ದೊರಕಿದ್ದು ನಂತರ ತವರಿಗೆ ಮರಳಿಸಲು ಜವಾಝಾತ್ ನಲ್ಲಿ ಸಂಬಂಧಿಸಿದ ದಾಖಲೆ ಪತ್ರಗಳ ಪ್ರಕ್ರಿಯೆಯನ್ನು ಐ.ಎಸ್.ಎಫ್‌ ಪೂರೈಸಿತು.

ದಾನಿಗಳ ನೆರವಿನಿಂದ  ತವರಿಗೆ ಮರಳಲು ಬೇಕಾದ ಟಿಕೆಟ್  ಒದಗಿಸಿತು ಮತ್ತು ಝಕಾತ್ ಹಣವನ್ನು ಸಂಗ್ರಹಿಸಿ ಆತನಿಗೆ ನೀಡುವ ಮೂಲಕ ನೆರವಾಯಿತು. ತವರು ಸೇರಿರುವ ಜಂಶೀರ್ ಮತ್ತು ಆತನ‌ ಕುಟುಂಬ ಐ.ಎಸ್.ಎಫ್ ಗೆ ಕೃತಜ್ಞತೆ ಸಲ್ಲಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News