ಚಂಡಮಾರುತ ಪರಿಹಾರ ಕಾರ್ಯಾಚರಣೆಯಲ್ಲಿ ಸಂಬಿತ್ ಪಾತ್ರಾ ಪಾಲ್ಗೊಂಡಿಲ್ಲ: ಒಡಿಶಾ ಬಿಜೆಪಿ ನಾಯಕರು

Update: 2021-06-02 13:44 GMT

ಭುವನೇಶ್ವರ,ಜೂ.2: ತಾನು ಒಡಿಶಾದಲ್ಲಿ ಯಾಸ್ ಚಂಡಮಾರುತ ಸಂಬಂಧಿ ಪರಿಹಾರ ಕಾರ್ಯಾಚರಣೆಗಳಲ್ಲಿ ವ್ಯಸ್ತನಾಗಿರುವುದರಿಂದ ಕಾಂಗ್ರೆಸ್ ‘ಟೂಲ್ಕಿಟ್’ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗಲು ಸಾಧ್ಯವಿಲ್ಲ ಎಂದು ಬಿಜೆಪಿಯ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರಾ ಅವರು ನೀಡಿದ್ದ ಕಾರಣವನ್ನು ರಾಜ್ಯದ ಬಿಜೆಪಿ ನಾಯಕರು ಅಲ್ಲಗಳೆದಿದ್ದಾರೆ. ಒಡಿಶಾದಲ್ಲಿ ತಳಮಟ್ಟದಲ್ಲಿ ಇಂತಹ ಯಾವುದೇ ಕಾರ್ಯಾಚರಣೆಯಲ್ಲಿ ಪಾತ್ರಾ ತೊಡಗಿಕೊಂಡಿಲ್ಲ ಎಂದು ಅವರು ಹೇಳಿದ್ದಾಗಿ thewire.in ವರದಿ ಮಾಡಿದೆ.

ಪಿಪಿಲಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿರುವ ಆಶ್ರಿತ ಪಟ್ಟನಾಯಕ ಅವರ ಪರ ಪ್ರಚಾರಕ್ಕಾಗಿ ಪಾತ್ರಾ ಕಳೆದ ಎಪ್ರಿಲ್ ನಲ್ಲಿ ರಾಜ್ಯಕ್ಕೆ ಭೇಟಿ ನೀಡಿದ್ದೇ ಕೊನೆ. ಆ ಬಳಿಕ ಅವರು ಒಡಿಶಾಕ್ಕೆ ಬಂದಿಲ್ಲ ಎಂದು ರಾಜ್ಯ ಬಿಜೆಪಿಯ ಮೂಲಗಳು ತಿಳಿಸಿವೆ. ಕೋವಿಡ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಉಪಚುನಾವಣೆಯನ್ನು ಚುನಾವಣಾ ಆಯೋಗವು ಮುಂದೂಡಿದೆ.

ಚಂಡಮಾರುತ ಸಂತ್ರಸ್ತರಿಗಾಗಿ ಪರಿಹಾರ ಯತ್ನಗಳನ್ನು ಸಂಘಟಿಸುವುದರಲ್ಲಿ ಅಥವಾ ರಾಜ್ಯದಲ್ಲಿ ಕೋವಿಡ್ ಸ್ಥಿತಿಯ ನಿರ್ವಹಣೆಯಲ್ಲಿ ಪಾತ್ರಾ ಯಾವುದೇ ಪಾತ್ರವನ್ನು ವಹಿಸಿಲ್ಲ ಎಂದು ಒಡಿಶಾದ ಹಿರಿಯ ಬಿಜೆಪಿ ನಾಯಕರು ಹೇಳಿದರು.

ಪಾತ್ರಾ ಚಂಡಮಾರುತ ಸಂಬಂಧಿತ ಯಾವುದೇ ಕಾರ್ಯದಲ್ಲಿ ತಳಮಟ್ಟದಲ್ಲಿ ಭಾಗಿಯಾಗಿದ್ದು ತಮ್ಮ ಗಮನಕ್ಕೆ ಬಂದಿಲ್ಲ ಎಂದು ಈ ನಾಯಕರು ಹೇಳಿದರು. ಚಂಡಮಾರುತದಿಂದಾಗಿ ಬಾಲಾಸೋರ ಮತ್ತು ಭದ್ರಕ್ ನಂತಹ ಜಿಲ್ಲೆಗಳಲ್ಲಿ ಅಪಾರ ಹಾನಿಯಾಗಿದೆ. ಪಾತ್ರಾ ಅವರ ಕ್ಷೇತ್ರ ಪುರಿಯಲ್ಲಿ ಯಾವುದೇ ದೊಡ್ಡಮಟ್ಟದ ಹಾನಿ ವರದಿಯಾಗಿಲ್ಲ, ಹೀಗಾಗಿ ಅಲ್ಲಿ ಹೇಳಿಕೊಳ್ಳುವಂತಹ ಪರಿಹಾರ ಮತ್ತು ಪುನರ್ವಸತಿ ಕಾರ್ಯಾಚರಣೆಗಳೇನೂ ನಡೆಯುತ್ತಿಲ್ಲ ಎಂದು ತಿಳಿಸಿದ ಹೆಸರು ಹೇಳಿಕೊಳ್ಳಲು ಬಯಸದ ಬಿಜೆಪಿ ನಾಯಕರೋರ್ವರು, ಪಾತ್ರಾ ದಿಲ್ಲಿಯಿಂದ ಯಾವುದೇ ರೀತಿಯಲ್ಲಿ ಪರಿಹಾರ ಪ್ರಯತ್ನಗಳನ್ನು ಸಮನ್ವಯಿಸುತ್ತಿದ್ದರೆ ತನಗೆ ಆ ಬಗ್ಗೆ ಮಾಹಿತಿಯಿಲ್ಲ ಎಂದರು.

ಪಾತ್ರಾ ಪಕ್ಷದಲ್ಲಿ ಉನ್ನತ ಸ್ಥಾನದಲ್ಲಿರುವ ನಾಯಕರಾಗಿರುವುದರಿಂದ ಅವರು ರಾಜ್ಯದಲ್ಲಿ ಪರಿಹಾರ ಕಾರ್ಯಾಚರಣೆ ನಡೆಸಿದ್ದರೆ ಅದು ಸಾರ್ವಜನಿಕರ ಗಮನಕ್ಕೆ ಬರುತ್ತಿತ್ತು ಎಂದು ರಾಜ್ಯ ಬಿಜೆಪಿ ನಾಯಕರು ತಿಳಿಸಿದರು.

ಪಾತ್ರಾ ಪರಿಹಾರ ಕಾರ್ಯಾಚರಣೆಗಳಲ್ಲಿ ವ್ಯಸ್ತರಾಗಿರುವದರಿಂದ ಅಲ್ಪಾವಧಿ ನೋಟಿಸ್ ನಲ್ಲಿ ಪೊಲೀಸರ ವಿಚಾರಣೆಗೆ, ವೀಡಿಯೊ ಕಾನ್ಫರೆನ್ಸ್ ಮೂಲಕವೂ ಹಾಜರಾಗಲು ಸಾಧ್ಯವಾಗುವುದಿಲ್ಲ ಎಂದು ಅವರ ಪರ ವಕೀಲರು ತಿಳಿಸಿದ್ದರು. ಅವರಿಗೆ ಕನಿಷ್ಠ ಒಂದು ವಾರ ಮೊದಲು ನೋಟಿಸ್ ನೀಡುವುದು ಅಗತ್ಯವಾಗಿದೆ ಎಂದಿದ್ದರು.
 
ಕಾಂಗ್ರೆಸ್ ನ ವಿದ್ಯಾರ್ಥಿ ಘಟಕದ ದೂರಿನ ಮೇರೆಗೆ ರಾಯಪುರ ಪೊಲೀಸರು ಪಾತ್ರಾ,ಛತ್ತೀಸ್ಗಡದ ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಬಿಜೆಪಿಯ ರಾಷ್ಟ್ರೀಯ ಉಪಾಧ್ಯಕ್ಷ ರಮಣ ಸಿಂಗ್ ಮತ್ತಿತರರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
 
ಮೋದಿ ಸರಕಾರದಿಂದ ಕೋವಿಡ್ ಬಿಕ್ಕಟ್ಟಿನ ಕೆಟ್ಟ ನಿರ್ವಹಣೆಯಿಂದ ಗಮನವನ್ನು ಬೇರೆಡೆಗೆ ಸೆಳೆಯಲು ಕೋಮುಹಿಂಸೆ,ದ್ವೇಷ ಮತ್ತು ಸುಳ್ಳುಸುದ್ದಿಗಳನ್ನು ಹರಡಲು ಈ ನಾಯಕರು ಕಪೋಲಕಲ್ಪಿತ ವಿಷಯಗಳನ್ನು ಶೇರ್ ಮಾಡಿಕೊಳ್ಳಲು ಫೋರ್ಜರಿ ಮಾಡಲಾದ ಕಾಂಗ್ರೆಸ್ ನ ಲೆಟರ್ ಹೆಡ್ ಬಳಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News