2ಸಾವಿರ ಎಕ್ರೆ ಹಡಿಲು ಭೂಮಿ ಕೃಷಿ ಕಾರ್ಯಕ್ಕೆ ಜೂ.5ಕ್ಕೆ ಚಾಲನೆ

Update: 2021-06-02 15:57 GMT

ಬ್ರಹ್ಮಾವರ ಜೂ 2: ಉಡುಪಿಯ ಕೇದಾರೋತ್ಥಾನ ಟ್ರಸ್ಟ್ ಹಡಿಲು ಭೂಮಿ ಕೃಷಿ ಯೋಜನೆಯಡಿ ಉಡುಪಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 2000 ಎಕರೆಗೂ ಅಧಿಕ ಹಡಿಲು ಕೃಷಿ ಭೂಮಿಯಲ್ಲಿ ನಾಟಿ ಕಾರ್ಯಕ್ಕೆ ಜೂ.5ರ ವಿಶ್ವ ಪರಿಸರ ದಿನಾಚರಣೆಯ ದಿನದಂದು ಕಡೆಕಾರ್ ಗ್ರಾಪಂ ವ್ಯಾಪ್ತಿಯ ಕುತ್ಪಾಡಿಯಲ್ಲಿ ಚಾಲನೆ ನೀಡಲಾಗುವುದು ಎಂದು ಟ್ರಸ್ಟ್ ಅಧ್ಯಕ್ಷ ಹಾಗೂ ಉಡುಪಿ ಶಾಸಕ ಕೆ.ರಘುಪತಿ ಭಟ್ ತಿಳಿಸಿದ್ದಾರೆ.

ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದಲ್ಲಿ ಬುಧವಾರ ನಾಟಿಗೆ ಸಿದ್ಧವಾದ ಚಾಪೆ ನೇಜಿ ವೀಕ್ಷಿಸಿದ ಬಳಿಕ ನಡೆದ ಪತ್ರಿಕಾಗೋಷ್ಟಿಯಲ್ಲಿ ಅವರು ಈ ಕುರಿತು ಮಾಹಿತಿ ನೀಡಿದರು.

ಸುಮಾರು 5 ಕೋಟಿ ರೂ. ವೆಚ್ಚದಲ್ಲಿ ಈ ಯೋಜನೆ ರೂಪಿಸಿದ್ದು, ಈಗಾ ಗಲೇ 250ರಿಂದ 300ಕಿ.ಮೀ ಉದ್ದದ ತೋಡುಗಳ ಹೂಳನ್ನು ತೆಗೆಯಲಾಗಿದೆ. ಇದಲ್ಲದೇ ನಾಟಿ, ಕಟಾವಿಗಾಗಿ ತಮಿಳುನಾಡಿನಿಂದ ಐದು ಮತ್ತು ಇತರೆ ಕಡೆ ಸೇರಿದಂತೆ ಒಟ್ಟು 13 ಯಂತ್ರಗಳನ್ನು ಬಳಸಿಕೊಂಡು ನಾಟಿ ಕಾರ್ಯ ಮಾಡ ಲಾಗುವುದು ಎಂದರು.

ಜಿಲ್ಲೆಯಲ್ಲಿ 5 ಸಾವಿರ ಎಕರೆಗಿಂತಲೂ ಅಧಿಕ ಹಡಿಲು ಭೂಮಿ ಇದ್ದು, ಮುಂದಿನ ವರ್ಷಗಳಲ್ಲಿ ಈ ಎಲ್ಲ ಭಾಗದಲ್ಲಿಯೂ ಈ ಯೋಜನೆಯ ಮೂಲಕ ಕೃಷಿ ಕಾರ್ಯ ಮಾಡಲು ಪ್ರಯತ್ನಿಸಲಾಗುವುದು. ಒಂದು ಎಕರೆಗೆ ಸುಮಾರು 25 ಸಾವಿರ ರೂ. ಖರ್ಚು ತಗುಲುವ ಅಂದಾಜು ಹಾಕಲಾಗಿದೆ. ಈ ವರ್ಷ 2 ಸಾವಿರ ಎಕರೆಯಿಂದ ಸುಮಾರು 24 ಲಕ್ಷ ಕೆ.ಜಿ ಭತ್ತ ಉತ್ಪಾದನೆ ಆಗಲಿದೆ ಎಂದು ಅಂದಾಜಿಸಲಾಗಿದೆ. ಇದರಿಂದ ಕುಚ್ಚಲಕ್ಕಿ ಮಾಡಿ ಮಾರಾಟ ಮಾಡುವ ಯೋಜನೆ ರೂಪಿಸಲಾಗಿದೆ ಎಂದು ಅವರು ಹೇಳಿದರು.

ಕಾಡು ಪ್ರಾಣಿಗಳ ಹಾವಳಿ, ನೀರಿನ ಸಮಸ್ಯೆಗೆ ಪರಿಹಾರದ ಕುರಿತು ಸಂಬಂಧಪಟ್ಟ ಸಚಿವರಲ್ಲಿ ಚರ್ಚಿಸಿ ಕ್ರಮ ತೆಗೆದು ಕೊಳ್ಳಲಾಗುವುದು. ಮುಂದಿನ ವರ್ಷದಲ್ಲಿ ಜಿಲ್ಲೆಯಲ್ಲಿ ಕೃಷಿ ಕಾರ್ಯಕ್ಕೆ ಅನುಕೂಲವಾಗುವಂತೆ ಫಾರ್ಮ್ ಮಿಷನರಿ ಬ್ಯಾಂಕ್ ಪ್ರಾರಂಭಿಸಲಾಗುವುದು. ಇದರಿಂದ ನಾಟಿ ಕಾರ್ಯಕ್ಕೆ ಕೃಷಿ ಯಂತ್ರೋಕರಣಗಳನ್ನು ರೈತರು ಬಾಡಿಗೆಯಲ್ಲಿ ಪಡೆಯಲು ಸಾಧ್ಯವಾಗಲಿದೆ ಎಂದು ಅವರು ತಿಳಿಸಿದರು.

ಇದಕ್ಕೂ ಮುನ್ನ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ.ಶಂಕರ್ ಚಾಪೆ ನೇಜಿ ತಯಾರಿ ಮತ್ತು ನಾಟಿ ಕಾರ್ಯವನ್ನು ಪ್ರಾತ್ಯಕ್ಷಿಕೆ ಮೂಲಕ ತಿಳಿಸಿದರು. ಈ ಸಂದರ್ಭದಲ್ಲಿ ಕೃಷಿ ಇಲಾಖೆಯ ಉಪನಿರ್ದೇಶಕ ಕೆಂಪೇಗೌಡ, ವಲಯ ಕೃಷಿ ತೋಟಗಾರಿಕೆ ಸಂಶೋಧನಾ ಕೇಂದ್ರದ ಡಾ.ಲಕ್ಷ್ಮಣ್, ಕೆ.ವಿ.ಕೆಯ ಮುಖ್ಯಸ್ಥ ಡಾ.ಧನಂಜಯ, ಜಿಪಂ ಮಾಜಿ ಅಧ್ಯಕ್ಷ ದಿನಕರ ಬಾಬು, ಕೇದಾರೋತ್ಥಾನ ಟ್ರಸ್ಟ್‌ನ ಕಾರ್ಯದರ್ಶಿ ಮುರಳಿ ಕಡೇಕಾರ್, ಪ್ರತಾಪ್ ಹೆಗ್ಡೆ ಮಾರಾಳಿ, ರಾಘವೇಂದ್ರ ಕಿಣಿ, ಕೃಷಿ ಯಂತ್ರೋ ಪಕರಣಗಳ ಮಾರಾಟಗಾರ ಶ್ರೀಕಾಂತ್ ಭಟ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News