ಜಮ್ಮು-ಕಾಶ್ಮೀರ: ಕೋವಿಡ್ ಲಸಿಕೆ ಪಡೆದ 124ರ ಹಿರಿಯಜ್ಜಿ!
ಶ್ರೀನಗರ, ಜೂ.3: ಜಮ್ಮು ಮತ್ತು ಕಾಶ್ಮೀರದಲ್ಲಿ ಬುಧವಾರ 124 ವರ್ಷದ ವೃದ್ಧೆಯೊಬ್ಬರಿಗೆ ಕೋವಿಡ್-19 ಲಸಿಕೆ ನೀಡಲಾಗಿದೆ ಎಂದು ಆಡಳಿತವರ್ಗ ಪ್ರಕಟಿಸಿದೆ. ಆದರೆ ವೃದ್ಧೆಯ ವಯಸ್ಸಿನ ಪುರಾವೆ ಬಗ್ಗೆ ಯಾವುದೇ ದಾಖಲೆ ಬಹಿರಂಗಪಡಿಸಿಲ್ಲ.
ಕೇಂದ್ರಾಡಳಿತ ಪ್ರದೇಶವಾಗಿರುವ ಜಮ್ಮು ಮತ್ತು ಕಾಶ್ಮೀರದ 20 ಜಿಲ್ಲೆಗಳಲ್ಲಿ ಬುಧವಾರ ಆರೋಗ್ಯ ಮತ್ತು ಮುಂಚೂಣಿ ಕಾರ್ಯಕರ್ತರು ಸೇರಿದಂತೆ ಒಟ್ಟು 9289 ಮಂದಿಗೆ ಲಸಿಕೆ ನೀಡಲಾಗಿದೆ. ಇದುವರೆಗೆ ಇಲ್ಲಿ 33.58 ಲಕ್ಷ ಲಸಿಕೆ ವಿತರಿಸಲಾಗಿದೆ. ಬುಧವಾರ ಲಸಿಕೆ ಪಡೆದವರಲ್ಲಿ ಬಾರಾಮುಲ್ಲಾ ಜಿಲ್ಲೆಯ 124 ವರ್ಷದ ಮಹಿಳೆ ಸೇರಿದ್ದಾರೆ ಎಂದು ಸರ್ಕಾರ ಪ್ರಕಟಿಸಿದೆ.
ಜಮ್ಮು ಕಾಶ್ಮೀರದ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಈ ಬಗ್ಗೆ ಟ್ವೀಟ್ ಮಾಡಿದೆ. ಲಸಿಕೆ ನೀಡಿಕೆಯ ಮನೆ ಮನೆ ಅಭಿಯಾನದಲ್ಲಿ ಬಾರಾಮುಲ್ಲಾ ಜಿಲ್ಲೆಯ ಶ್ರಕ್ವಾರಾದ 124 ವರ್ಷ ವಯಸ್ಸಿನ ರೆಹ್ತಿ ಬೇಗಂ ಲಸಿಕೆ ಪಡೆದಿದ್ದರೆ ಎಂದು ಟ್ವೀಟ್ ಮಾಡಿರುವ ಇಲಾಖೆ, ಮಹಿಳೆಯ ಫೋಟೊವನ್ನೂ ಪ್ರಕಟಿಸಿದೆ.
ಅಧಿಕೃತ ಹೇಳಿಕೆಗಳನ್ನು ನಂಬುವುದಾದರೆ, ಇವರು ವಿಶ್ವದ ಅತ್ಯಂತ ಹಿರಿಯ ಮಹಿಳೆ. ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಪ್ರಕಾರ, 118 ವರ್ಷ ವಯಸ್ಸಿನ ಜಪಾನಿ ಮಹಿಳೆ ಕೆನ್ ತಾನಕ ವಿಶ್ವದ ಅತ್ಯಂತ ವೃದ್ಧ ಮಹಿಳೆ. ಇದುವರೆಗೆ ಅತ್ಯಂತ ದೀರ್ಘಕಾಲ ಬದುಕಿದ್ದ ದಾಖಲೆ 1875ರ ಫೆಬ್ರವರಿ 21ರಂದು ಜನಿಸಿದ ಫ್ರಾನ್ಸ್‌ನ ಜೀನ್ ಲೂಯಿಸ್ ಕಾಲ್ಮೆಂಟ್ ಅವರ ಹೆಸರಿನಲ್ಲಿದೆ. ಇವರು 122 ವರ್ಷ 164 ದಿನಗಳಲ್ಲಿ ಕೊನೆಯುಸಿರೆಳೆದಿದ್ದರು.
ರೆಹ್ತಿ ಬೇಗಂ ಅವರ ಮಗನ ರೇಷನ್ ಕಾರ್ಡ್‌ನಲ್ಲಿ ಮಹಿಳೆಯ ವಯಸ್ಸು 124 ಎಂದು ದಾಖಲಿಸಲಾಗಿದೆ. ಆದರೆ ಇದಕ್ಕೆ ತಾಳೆಯಾಗುವ ಯಾವುದೇ ಪುರಾವೆಯನ್ನು ಕುಟುಂಬ ಅಥವಾ ಅಧಿಕಾರಿಗಳು ಒದಗಿಸಿಲ್ಲ. ಮಹಿಳೆಯ ನೈಜ ವಯಸ್ಸನ್ನು ದೃಢೀಕರಿಸಲು ಸಾಧ್ಯವಿಲ್ಲ ಎಂದು ಲಸಿಕೆ ತಂಡದ ಮುಖ್ಯಸ್ಥ ಬಿಡಿಓ ಅಬ್ದುಲ್ ರಶೀದ್ ಗನಿ ಹೇಳಿದ್ದಾರೆ.