ಅಕ್ರಮ ಪ್ರವೇಶ ಪ್ರಕರಣ: ಮೆಹುಲ್ ಚೋಕ್ಸಿಗೆ ಜಾಮೀನು ನಿರಾಕರಿಸಿದ ಡೊಮಿನಿಕಾ ನ್ಯಾಯಾಲಯ

Update: 2021-06-03 05:40 GMT

ಹೊಸದಿಲ್ಲಿ: ಆ್ಯಂಟಿಗಾದಿಂದ ಕೆರಿಬಿಯನ್ ದ್ವೀಪ ರಾಷ್ಟ್ರಕ್ಕೆ ಅಕ್ರಮವಾಗಿ ಪ್ರವೇಶಿಸಿದ ಪ್ರಕರಣದಲ್ಲಿ ಭಾರತದಲ್ಲಿ 13,500 ಕೋಟಿ ರೂ. ಬ್ಯಾಂಕ್ ಸಾಲ ವಂಚನೆ ಆರೋಪಿ,  ವಜ್ರ ವ್ಯಾಪಾರಿ ಮೆಹುಲ್ ಚೋಕ್ಸಿಗೆ ಡೊಮಿನಿಕಾ ನ್ಯಾಯಾಲಯ ಇಂದು ಜಾಮೀನು ನಿರಾಕರಿಸಿದೆ.

ಗಾಲಿ ಕುರ್ಚಿಯ ಮೇಲೆ ಕುಳಿತು ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರಾದ ಚೋಕ್ಸಿ, ನಾನು ಯಾವುದೇ  ಅಪರಾಧ ಮಾಡಿಲ್ಲ. ನನ್ನನ್ನು ಡೊಮಿನಿಕಾ ದ್ವೀಪಕ್ಕೆ ಅಪಹರಿಸಲಾಗಿತ್ತು ಎಂದು ನ್ಯಾಯಾಲಯದ ಮುಂದೆ ಹೇಳಿದರು.

"ಡೊಮಿನಿಕಾದಲ್ಲಿ ವಿದೇಶಿಗರು ಇದೇ ರೀತಿಯ ವಿಷಯಗಳಿಗಾಗಿ ಜಾಮೀನಿನಲ್ಲಿದ್ದಾರೆ. ಆದ್ದರಿಂದ ನಮ್ಮ ಕ್ಲೈಂಟ್‌ಗೆ ಜಾಮೀನು ನೀಡಬಹುದು ಎಂಬ ಅಭಿಪ್ರಾಯ ನಮ್ಮದು. ಅಕ್ರಮ ಪ್ರವೇಶಕ್ಕಾಗಿ ಜಾಮೀನು ಮೊತ್ತವು 10,000 ಡಾಲರ್  ಗರಿಷ್ಠ ದಂಡ  ಸೇರಿದಂತೆ ಷರತ್ತಿನ ಮೇಲೆ ಜಾಮೀನು ನೀಡಿ’’ ಎಂದು ಚೋಕ್ಸಿ ವಕೀಲರು ನ್ಯಾಯಾಲಯದಲ್ಲಿ ವಾದಿಸಿದರು.

ಡೊಮಿನಿಕನ್ ಸರಕಾರವು ಚೋಕ್ಸಿಗೆ ಜಾಮೀನು ನೀಡಬಾರದು ಎಂದು ವಾದಿಸಿತು.

"ಚೋಕ್ಸಿಗೆ ಡೊಮಿನಿಕಾದಲ್ಲಿ ಯಾವುದೇ ಸಂಬಂಧವಿಲ್ಲ, ಭಾರತದಲ್ಲಿ 11 ಅಪರಾಧಗಳಿಗೆ ಸಂಬಂಧಿಸಿದಂತೆ ಆರೋಪಗಳನ್ನು ಎದುರಿಸುತ್ತಿರುವ ಕಾರಣ ಚೋಕ್ಸಿ ವಿರುದ್ಧ ಇಂಟರ್ ಪೋಲ್ ರೆಡ್ ನೋಟಿಸ್ ಇದೆ" ಎಂದು ಡೊಮಿನಿಕನ್ ಸರಕಾರ ನ್ಯಾಯಾಲಯಕ್ಕೆ ತಿಳಿಸಿದೆ .

ಎರಡೂ ಕಡೆಯ ವಾದವನ್ನು ಆಲಿಸಿದ ಮ್ಯಾಜಿಸ್ಟ್ರೇಟ್ ಚೋಕ್ಸಿಯ ಜಾಮೀನು ಅರ್ಜಿಯನ್ನು ತಿರಸ್ಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News