×
Ad

ಎನ್‌ಎಚ್‌ಆರ್‌ಸಿ ಅಧ್ಯಕ್ಷರಾಗಿ ನ್ಯಾ.ಎ.ಕೆ.ಮಿಶ್ರಾ ನೇಮಕ ರದ್ದುಗೊಳಿಸಲು ಮಾನವ ಹಕ್ಕು ಕಾರ್ಯಕರ್ತರ ಆಗ್ರಹ

Update: 2021-06-03 22:23 IST

ಹೊಸದಿಲ್ಲಿ,ಜೂ.3: ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ)ದ ಅಧ್ಯಕ್ಷರನ್ನಾಗಿ ಸರ್ವೋಚ್ಚ ನ್ಯಾಯಾಲಯದ ಮಾಜಿ ನ್ಯಾಯಾಧೀಶ ಅರುಣ್ ಕುಮಾರ್ ಮಿಶ್ರಾ ಅವರ ನೇಮಕಾತಿಯನ್ನು ರದ್ದುಗೊಳಿಸುವಂತೆ ಮಾನವ ಹಕ್ಕುಗಳು ಸಂಸ್ಥೆಗಳು ಮತ್ತು ಕಾರ್ಯಕರ್ತರು ಹಾಗೂ ರಾಜಕಾರಣಿಗಳು ಕೇಂದ್ರವನ್ನು ಆಗ್ರಹಿಸಿದ್ದಾರೆ. ಮಿಶ್ರಾ ನೇಮಕವು ಕೇಂದ್ರ ಸರಕಾರದಿಂದ ಸಂವಿಧಾನದ ಮೇಲೆ ‘ಲಜ್ಜೆಗೇಡಿ ಮತ್ತು ಉದ್ದೇಶಪೂರ್ವಕ ’ದಾಳಿಯಾಗಿದೆ ಎಂದು ಅವರು ಬಣ್ಣಿಸಿದ್ದಾರೆ.

 ನರೇಂದ್ರ ಮೋದಿ ನೇತೃತ್ವದ ಸರಕಾರದ ನಿರ್ಧಾರವು ಲಜ್ಜೆಗೇಡಿ ದುರಹಂಕಾರವನ್ನು ಮತ್ತು ಸಾರ್ವಜನಿಕ ಅಭಿಪ್ರಾಯದ ಕಡೆಗಣನೆಯನ್ನು ತೋರಿಸುತ್ತಿದೆ ಹಾಗೂ ಪ್ರಜಾಸತ್ತಾತ್ಮಕ ನಿಯಮಗಳು ಮತ್ತು ಸಂವಿಧಾನಕ್ಕೆ ಸರಕಾರದ ಸಿನಿಕತನದ ತಿರಸ್ಕಾರವನ್ನು ಮತ್ತೊಮ್ಮೆ ಬಿಂಬಿಸಿದೆ ಎಂದು ದೇಶಾದ್ಯಂತದ 68 ಮಾನವ ಹಕ್ಕು ಕಾರ್ಯಕರ್ತರು, ವಕೀಲರು,ಲೇಖಕರು ಮತ್ತು ಪತ್ರಕರ್ತರು ಸಹಿ ಹಾಕಿರುವ ಜಂಟಿ ಹೇಳಿಕೆಯಲ್ಲಿ ತಿಳಿಸಲಾಗಿದೆ. ನಿವೃತ್ತ ಐಎಎಸ್ ಅಧಿಕಾರಿ ಎಂ.ಜಿ.ದೇವಸಹಾಯಂ,ಪಿಯುಸಿಎಲ್ ಪ್ರಧಾನ ಕಾರ್ಯದರ್ಶಿ ಡಾ.ವಿ.ಸುರೇಶ ಮತ್ತು ಪೀಪಲ್ಸ್ ವಾಚ್‌ನ ಹೆನ್ರಿ ತಿಫಾನೆ ಅವರು ಸಹಿ ಹಾಕಿದವರಲ್ಲಿ ಸೇರಿದ್ದಾರೆ.

 ಲೋಕಸಭೆಯಲ್ಲಿ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಆಕ್ಷೇಪದ ಹೊರತಾಗಿಯೂ ನ್ಯಾ.ಮಿಶ್ರಾರನ್ನು ನೇಮಕ ಮಾಡಲಾಗಿದೆ. ಶೋಷಿತ ಸಮುದಾಯಕ್ಕೆ ಸೇರಿದವರನ್ನು ಎನ್‌ಎಚ್‌ಆರ್‌ಸಿ ಅಧ್ಯಕ್ಷರನ್ನಾಗಿ ನೇಮಕಗೊಳಿಸುವಂತೆ ಖರ್ಗೆ ಸೂಚಿಸಿದ್ದರು.

  ಮೊದಲ ಆದ್ಯತೆಯನ್ನು ನಿವೃತ್ತ ಭಾರತದ ಮುಖ್ಯ ನ್ಯಾಯಾಧೀಶ(ಸಿಜೆಐ)ರಿಗೆ ನೀಡಬೇಕು ಎಂದು ಎನ್‌ಎಚ್‌ಆರ್‌ಸಿ ನಿಯಮಗಳು ಸ್ಪಷ್ಟಪಡಿಸಿವೆ, ಮೂವರು ಮಾಜಿ ಸಿಜೆಐಗಳಿದ್ದರೂ ಪ್ರಧಾನಿ ಉಪಸ್ಥಿತಿಯಲ್ಲಿಯೇ ಅವರನ್ನು ವಾಚಾಮಗೋಚರವಾಗಿ ಹೊಗಳಿದ್ದ ನ್ಯಾ.ಮಿಶ್ರಾರನ್ನು ನೇಮಕಗೊಳಿಸಲಾಗಿದೆ ಎಂದು ಜಂಟಿ ಹೇಳಿಕೆಯು ಬೆ ಟ್ಟು ಮಾಡಿದೆ.

ಪ್ರಕರಣದ ವಿಚಾರಣೆಗಳಲ್ಲಿ ನ್ಯಾ.ಮಿಶ್ರಾ ಸರಕಾರದ ಪರ ಅಥವಾ ಸರಕಾರದ ಕೆಲವು ಹಿರಿಯ ನಾಯಕರ ಬಗ್ಗೆ ಒಲವು ತೋರಿಸುತ್ತಿದ್ದರು ಎಂದಿರುವ ಹೇಳಿಕೆಯು,ಅಂತಹ ಕೆಲವು ಪ್ರಕರಣಗಳ ನಿದರ್ಶನಗಳನ್ನೂ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News