×
Ad

ಸಾಧ್ಯವಾದಷ್ಟು ಬೇಗ ಫಲಿತಾಂಶ ಘೋಷಣೆಗೆ ಪ್ರಯತ್ನ: ಸಿಬಿಎಸ್‌ಇ ಕಾರ್ಯದರ್ಶಿ

Update: 2021-06-03 22:54 IST

ಹೊಸದಿಲ್ಲಿ, ಜೂ.3: ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್(ಸಿಬಿಎಸ್‌ಇ) 12ನೇ ತರಗತಿ ಪರೀಕ್ಷೆ ರದ್ದಾಗಿರುವ ಹಿನ್ನೆಲೆಯಲ್ಲಿ ಆದಷ್ಟು ಬೇಗ ಫಲಿತಾಂಶ ಘೋಷಣೆಗೆ ಪ್ರಯತ್ನಿಸುತ್ತೇವೆ ಎಂದು ಸಿಬಿಎಸ್‌ಇ ಕಾರ್ಯದರ್ಶಿ ಅನುರಾಗ್ ತ್ರಿಪಾಠಿ ಗುರುವಾರ ಹೇಳಿದ್ದಾರೆ.

ಈಗಲೇ ದಿನಾಂಕ ನಿಗದಿಗೊಳಿಸಲು ಆಗದು. ಆದರೆ ಈ ಕಾರ್ಯ ಸಾಧ್ಯವಾದಷ್ಟು ಬೇಗ ನಡೆಯಬೇಕೆಂಬ ಅರಿವು ನಮಗಿದೆ. ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕೆ ಅಥವಾ ವಿದೇಶದಲ್ಲಿ ಶಿಕ್ಷಣ ಮುಂದುವರಿಸಲು ಫಲಿತಾಂಶದ ಅಗತ್ಯ ಇರುವುದರಿಂದ ಶೀಘ್ರದಲ್ಲೇ ಫಲಿತಾಂಶ ಘೋಷಿಸುತ್ತೇವೆ ಎಂದು ಪೋಷಕರಿಗೆ ವಿನಂತಿ ಮಾಡಿಕೊಳ್ಳುವುದಾಗಿ ತ್ರಿಪಾಠಿ ಹೇಳಿದರು.

12ನೇ ತರಗತಿಯ ಫಲಿತಾಂಶ ನಿರ್ಣಯಿಸಲು ಯಾವ ಮಾನದಂಡ ಅನುಸರಿಸಬೇಕು ಎಂಬ ಬಗ್ಗೆ 2 ವಾರದೊಳಗೆ ಸ್ಪಷ್ಟ ನಿರ್ಧಾರಕ್ಕೆ ಬರಲಾಗುವುದು. 14 ಲಕ್ಷ ವಿದ್ಯಾರ್ಥಿಗಳಿಗೆ ಸಂಬಂಧಿಸಿದ ವಿಷಯ ಇದಾಗಿರುವುದರಿಂದ ಸುದೀರ್ಘ ಸಮಾಲೋಚನೆ ಅಗತ್ಯವಿದೆ. ಫಲಿತಾಂಶದ ಬಗ್ಗೆ ವಿದ್ಯಾರ್ಥಿಗಳಿಗೆ ಅತೃಪ್ತಿ ಇದ್ದರೆ ಅವರಿಗೆ ಪ್ರತ್ಯೇಕವಾಗಿ ಪರೀಕ್ಷೆ ಬರೆಯುವ ಆಯ್ಕೆಯೂ ಇರುತ್ತದೆ. ಪರೀಕ್ಷೆ ರದ್ದಾಗಿರುವುದನ್ನು ಘೋಷಿಸಿದ ಸುತ್ತೋಲೆಯಲ್ಲೇ ಈ ಆಯ್ಕೆಯನ್ನು ಸ್ಪಷ್ಟಪಡಿಸಲಾಗಿದೆ ಎಂದು ತ್ರಿಪಾಠಿ ಹೇಳಿದ್ದಾರೆ.

ಕೊರೋನ ಸೋಂಕಿನ ಸಮಸ್ಯೆಯಿಂದ ಸಿಬಿಎಸ್‌ಇಯ 10ನೇ ತರಗತಿ ಪರೀಕ್ಷೆಯನ್ನು ಎಪ್ರಿಲ್ 14ರಂದು ರದ್ದುಗೊಳಿಸಿದ್ದರೆ, 12ನೇ ತರಗತಿ ಪರೀಕ್ಷೆಯನ್ನು ಜೂನ್ 1ರಂದು ರದ್ದುಗೊಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News