ಕೋವಿಡ್‌ನಿಂದ ಮೃತಪಟ್ಟಿದ್ದಾರೆಂದು ಭಾವಿಸಿದ ವೃದ್ಧೆ 18 ದಿನಗಳ ಬಳಿಕ ಜೀವಂತವಾಗಿ ಮನೆಗೆ ವಾಪಸ್
ಹೈದರಾಬಾದ್,ಜೂ.12: ಕೋವಿಡ್‌ನಿಂದ ಸಾವನ್ನಪ್ಪಿದ್ದಾರೆಂದು ಭಾವಿಸಲಾದ ಮಹಿಳೆ ಜೀವಂತವಾಗಿ ಹದಿನೆಂಟು ದಿನಗಳ ಬಳಿಕ ಮನೆಗೆ ಬಂದ ಘಟನೆ ಆಂಧ್ರಪ್ರದೇಶದ ಕೃಷ್ಣ ಜಿಲ್ಲೆಯಲ್ಲಿ ವರದಿಯಾಗಿದೆ.
ಮುತ್ತಾಲಗದ್ದಯ್ಯ ಎಂಬುವ ಪತ್ನಿ ಗಿರಿಜಮ್ಮ ಕೋವಿಡ್19ನಿಂದ ಮೃತಪಟ್ಟಿದ್ದಾರೆಂದು ಹೇಳಿಕೊಂಡು ಆಂಧ್ರದ ವಿಜಯವಾಡ ಆಸ್ಪತ್ರೆಯ ಸಿಬ್ಬಂದಿ,ಪಿಪಿಇ ಕಿಟ್ ಹೊದಿಸಲಾದ ಮೃತದೇಹವನ್ನು ಮೇ 15ರಂದು ಪತಿಗೆ ಹಸ್ತಾಂತರಿಸಿದ್ದರು. ಆತ ಶವವನ್ನು ದಫನಮಾಡಿದ್ದ. ಜೂನ್ 1ರಂದು ಆಕೆಯ ನೆನಪಿಗಾಗಿ ಪ್ರಾರ್ಥನಾ ಕಾರ್ಯಕ್ರಮ ವನ್ನು ಕುಟುಂಬಿಕರು ಆಯೋಜಿಸಿದ್ದರು.
ಮಾರನೆಯ ದಿನ 70 ವರ್ಷದ ಆ ಮಹಿಳೆ ಮನೆಗೆ ವಾಪಾಸಾದಾಗ ಇಡೀ ಕುಟುಂಬವೇ ದಿಗ್ಭ್ರಮೆಗೊಂಡಿತು.
ಆಂಧ್ರದ ಕೃಷ್ಣಾಜಿಲ್ಲೆಯ ಜಗ್ಗಯ್ಯಪೇಟೆ ಮಂಡಲದ ಕ್ರಿಶ್ಚಿಯನ್‌ಪೇಟ್ ಗ್ರಾಮದಲ್ಲಿ ಈ ವಿಚಿತ್ರ ಘಟನೆ ನಡೆದಿದೆ.
ಮುತ್ತಾಲಗದ್ದಯ್ಯನ ವಯೋವೃದ್ಧ ಪತ್ನಿ ಕೋವಿಡ್ ಸೋಂಕು ತಗಲಿದ ಹಿನ್ನೆಲೆಯಲ್ಲಿ ಅವರನ್ನು ವಿಜಯವಾಡದ ಸರಕಾರಿ ಆಸ್ಪತ್ರೆಗೆ ಮೇ 12ರಂದು ದಾಖಲಿಸಲಾಗಿತ್ತು. ಗದ್ದಯ್ಯ ನಿಯಮಿತವಾಗಿ ಆಕೆಯನ್ನು ಭೇಟಿಯಾಗಲು ಆಸ್ಪತ್ರೆಗೆ ತೆರಳಿದ್ದ. ಆದರೆ ಮೇ ಹದಿನೈದರಂದು ಕೋವಿಡ್ ವಾರ್ಡ್‌ನಲ್ಲಿ ಅವರು ಕಾಣಿಸಲಿಲ್ಲ. ಇತರ ವಾರ್ಡ್‌ಗಳಲ್ಲೂ ಆತ ಹುಡುಕಾಡಿದರೂ ಪತ್ನಿಯ ಪತ್ತೆಯಾಗಲಿಲ್ಲ.
ಆನಂತರ ಆಸ್ಪತ್ರೆಯ ನರ್ಸ್‌ಗಳು ಆತನ ಪತ್ನಿ ಸಾವನ್ನಪ್ಪಿರಬಹುದೆಂದು ತಿಳಿಸಿದ್ದು. ಆಸ್ಪತ್ರೆಯ ಶವಾಗಾರದಿಂದ ಅವರಿಗೆ ಪಿಪಿಇ ಕಿಟ್ ಹೊದಿಸಲ್ಪಟ್ಟ ವೃದ್ಧಮಹಿಳೆಯ ಮೃತದೇಹವನ್ನು ಹಸ್ತಾಂತರಿಸಲ್ಪಟ್ಟಿತ್ತು. ದುಃಖತಪ್ಪ ಮುತ್ತಯ್ಯ ಮೃತದೇಹವನ್ನು ತನ್ನ ಗ್ರಾಮಕ್ಕೆ ಕೊಂಡೊಯ್ದು ಅಂತ್ಯಸಂಸ್ಕಾರ ನೆರವೇರಿಸಿದ್ದರು.
ಮೇ 23ರಂದು ಆತನ ಪುತ್ರ ಮುತ್ಯಾಲ ರಮೇಶ್ ಕೂಡಾ ಕಮ್ಮಂ ಜಿಲ್ಲೆಯ ಆಸ್ಪತ್ರೆಯೊಂದರಲ್ಲಿ ಕೋವಿಡ್‌ನಿಂದ ಸಾವನ್ನಪ್ಪಿದ ವಾರ್ತೆ ಕುಟುಂಬಕ್ಕೆ ದೊರೆಯಿತು.
ದುಃಖತಪ್ತ ಕುಟುಂಬವು ಗಿರಿಜಮ್ಮ ಹಾಗೂ ರಮೇಶ್ ಅವರ ಉತ್ತರಕ್ರಿಯೆ ಕಾರ್ಯಕ್ರಮವನ್ನು ನೆರವೇರಿಸಿತ್ತು. ಆದರೆ ಮರುದಿನ ಗಿರಿಜಮ್ಮ ಮನೆಗೆ ಬಂದುದು ಕುಟುಂಬಿಕರಲ್ಲಿ ಆಶ್ಚರ್ಯವನ್ನು ಮೂಡಿಸಿತ್ತು. ಕೋವಿಡ್ ಸೋಂಕಿನ ಭೀತಿಯಿಂದಾಗಿ ಶವಕ್ಕೆ ಹೊದಿಸಲ್ಪಟ್ಟ ಪಿಪಿಇ ಕಿಟ್ ಅನ್ನು ತೆಗೆಯದೆ ದಫನ ಮಾಡಿರುವುದಾಗಿ ಕುಟುಂಬಿಕರು ತಿಳಿಸಿದ್ದಾರೆ.
ತಾನು ಕೋವಿಡ್‌ನಿಂದ ಚೇತರಿಸಿಕೊಂಡ ಬಳಿಕ ತನ್ನನ್ನು ಕರೆದೊಯ್ಯಲು ಯಾರೂ ಆಸ್ಪತ್ರೆಗೆ ಬಾರದೆ ಇರುವುದು ಆಕೆಗೆ ಬೇಸರ ತಂದಿತ್ತು. ಮನೆಗೆ ವಾಪಸಾಗಲು ಆಸ್ಪತ್ರೆ 3 ಸಾವಿರ ರೂ. ನೀಡಿತ್ತು.ಆದರೆ ದಫನ ಮಾಡಿದ ಶವ ಯಾರದ್ದೆಂದು ಇನ್ನೂ ಪತ್ತೆಯಾಗಿಲ್ಲ.