ಸ್ಟ್ಯಾನ್‌ಸ್ವಾಮಿ ಬಿಡುಗಡೆಗೆ ಜರ್ಮನಿಯ ಮಾನವಹಕ್ಕುಗಳ ಕಮೀಶ್ನರ್ ಆಗ್ರಹ
ಹೊಸದಿಲ್ಲಿ,ಜೂ.3: ಬಂಧಿತ ಬುಡಕಟ್ಟು ಹಕ್ಕುಗಳ ಹೋರಾಟಗಾರ ಸ್ಟ್ಯಾನ್ ಸ್ವಾಮಿ ಅವರ ಆರೋಗ್ಯ ಹದಗೆಡುತ್ತಿರುವ ಬಗ್ಗೆ ಜರ್ಮನಿಯ ಮಾನವಹಕ್ಕುಗಳ ನೀತಿ ಮತ್ತು ಮಾನವೀಯ ನೆರವಿಗಾಗಿನ ಕಮಿಶನರ್ ಬಾರ್ಬೆಲ್ ಕೊಫ್ಲರ್ ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಭಾರತದಲ್ಲಿ ಬುಡಕಟ್ಟು ಜನರ ಹಕ್ಕುಗಳ ಬಗ್ಗೆ ಪ್ರಬಲ ಪ್ರತಿಪಾದಕರಾದ ಫಾದರ್ ಸ್ಟ್ಯಾನ್ ಸ್ವಾಮಿ ಕಳೆದ ಅಕ್ಟೋಬರ್‌ನಿಂದ ಜೈಲಿನಲ್ಲಿದ್ದು ಅವರ ಆರೋಗ್ಯ ಹದಗೆಡುತ್ತಿರುವ ಕುರಿತಾದ ವರದಿಳಿಂದ ಆತಂಕಿತನಾಗಿದ್ದೇನೆ’’ ಎಂದು ಅವರು ಟ್ವೀಟ್ ಮಾಡಿದ್ದಾರೆ. ಅವರ ವಯಸ್ಸು ಹಾಗೂ ಆರೋಗ್ಯ ಪರಿಸ್ಥಿತಿಯನ್ನು ಪರಿಗಣಿಸಿ ಮಾನವೀಯ ನೆಲೆಯಲ್ಲಿ ಅವರನ್ನು ತುರ್ತಾಗಿ ಬಿಡುಗಡೆಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಆಕೆ ಮನವಿ ಮಾಡಿದ್ದಾರೆ.
ಆಕೆಯ ಮನವಿಯನ್ನು ಭಾರತದಲ್ಲಿನ ಜರ್ಮನಿ ರಾಯಭಾರಿ ಕಚೇರಿ ಮರುಟ್ವೀಟ್ ಮಾಡಿದೆ.
2018ರಲ್ಲಿ ನಡೆದ ಭೀಮಾಕೋರೆಗಾಂವ್ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿ ಸ್ಟ್ಯಾನ್ ಸ್ವಾಮಿ ಅವರನ್ನು 2020ರ ಅಕ್ಟೋಬರ್ 8ರಂದು ಬಂಧಿಸಲಾಗಿತ್ತು. 84 ವರ್ಷದ ಸ್ಟ್ಯಾನ್ ಸ್ವಾಮಿ ಅವರು ಪಾರ್ಕಿನ್‌ಸನ್ ಕಾಯಿಲೆಯಿಂದ ಬಳಲುತ್ತಿದ್ದಾರೆ.
ಕಳೆದ ವಾರ ಸ್ಟ್ಯಾನ್ ಸ್ವಾಮಿ ಅವರ ಆರೋಗ್ಯ ಹದೆಗಟ್ಟದ್ದರಿಂದ, ಅವರನ್ನು ಮುಂಬೈಯಲ್ಲಿನ ಹೋಲಿ ಫ್ಯಾಮಿಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರಿಗೆ ಕೊರೋನ ವೈರಸ್ ಸೋಂಕು ಕೂಡಾ ತಗಲಿರುವುದು ದೃಢಪಟ್ಟಿತ್ತು. ಮೇ 28ರಂದು ಬಾಂಬೆ ಹೈಕೋರ್ಟ್ ಆದೇಶವೊಂದನ್ನು ನೀಡಿ, ಸ್ಟ್ಯಾನ್ ಸ್ವಾಮಿ ಅವರನ್ನು ಹದಿನೈದು ದಿನಗಳ ಕಾಲ ಆಸ್ಪತ್ರೆಯಲ್ಲಿರಿಸುವಂತೆ ತಿಳಿಸಿತ್ತು.
ಮೇ 21ರಂದು ಸ್ಟ್ಯಾನ್ ಸ್ವಾಮಿ ಅವರು ಬಾಂಬೆ ಹೈಕೋರ್ಟ್‌ಗೆ ಸಲ್ಲಿಸಿದ ಮನವಿ ಅರ್ಜಿ ಸಲ್ಲಿಸಿ, ಆಸ್ಪತ್ರೆಗೆ ದಾಖಲಾಗಲು ತಾನು ಬಯಸುತ್ತಿಲ್ಲ. ಆದರ ಬದಲಿಗೆ ತನಗೆ ಮಧ್ಯಂತರ ಜಾಮೀನು ನೀಡುವಂತೆ ಕೋರಿದ್ದರು. ತನ್ನ ಆರೋಗ್ಯ ಹದಗೆಡುತ್ತಿದ್ದು, ನಾನು ರಾಂಚಿಯಲ್ಲಿರಲು ಬಯಸುತ್ತೇನೆ. ಆಸ್ಪತ್ರೆಗೆ ದಾಖಲಾಗುವುದರಿಂದ ತನ್ನ ಆರೋಗ್ಯ ಸುಧಾರಣೆಯಾದೀತೆಂದು ತಾನು ಭಾವಿಸುವುದಿಲ್ಲವೆಂದು ಅವರು ಅರ್ಜಿಯಲ್ಲಿ ತಿಳಿಸಿದ್ದರು.
ಆದಾಗ್ಯೂ ಕಳೆದ ವಾರ ಅವರ ಆರೋಗ್ಯ ತೀರಾ ಹದಗೆಟ್ಟಿತ್ತು. ಅವರ ವಕೀಲರಾದ ಮಿಹಿರ್‌ದಾಸ್ ಅವರ ದೂರವಾಣಿ ಮೂಲಕ ಸಮಾಲೋಚನೆ ನಡೆಸಿದ ಬಳಿಕ ಸ್ಟ್ಯಾನ್ ಸ್ವಾಮಿ ಆಸ್ಪತ್ರೆಗೆ ದಾಖಲಾಗಲು ಸಮ್ಮತಿಸಿದ್ದರು.