ಫುಟ್ಬಾಲ್: ವಿಶ್ವಕಪ್ ಅರ್ಹತೆ ಗಳಿಸಲು ಭಾರತ ವಿಫಲ

Update: 2021-06-04 04:00 GMT
Phoro credit: twitter @IndianFootball

ಚೆನ್ನೈ, ಜೂ.4: ಕತರ್ ವಿರುದ್ಧ 0-1 ಅಂತರದ ಸೋಲು ಅನುಭವಿಸುವ ಮೂಲಕ ಭಾರತ ಫುಟ್ಬಾಲ್ ತಂಡದ ವಿಶ್ವಕಪ್‌ಗೆ ಅರ್ಹತೆ ಪಡೆಯುವ ಕನಸು ಭಗ್ನಗೊಂಡಿದೆ.

ದೋಹಾದಲ್ಲಿ ನಡೆದ ಅರ್ಹತಾ ಸುತ್ತಿನ ಪಂದ್ಯದಲ್ಲಿ ಏಷ್ಯನ್ ಚಾಂಪಿಯನ್ ವಿರುದ್ಧ ಸುಮಾರು 70 ನಿಮಿಷಗಳ ಕಾಲ 10 ಆಟಗಾರರೊಂದಿಗೆ ಆಡಬೇಕಾಗಿ ಬಂದ ಭಾರತ ನಿರೀಕ್ಷಿತ ಸೋಲು ಕಾಣಬೇಕಾಯಿತು. ಇದರೊಂದಿಗೆ ಭಾರತ ಇ ಗುಂಪಿನಲ್ಲಿ ಮೂರು ಅಂಕಗಳೊಂದಿಗೆ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು.

ಎರಡು ಹಳದಿ ಕಾರ್ಡ್‌ಗಳನ್ನು ಪಡೆದ ಭಾರತದ ಬಲ ಹಿಂಬದಿ ಆಟಗಾರ ರಾಹುಲ್ ಭೆಕೆ 17ನೇ ನಿಮಿಷದಲ್ಲೇ ಮೈದಾನದಿಂದ ನಿರ್ಗಮಿಸಬೇಕಾಯಿತು. ಭೆಕೆ ಒಂಭತ್ತನೇ ನಿಮಿಷದಲ್ಲಿ ಮೊದಲ ಹಾಗೂ ಮತ್ತೆ ಎಂಟು ನಿಮಿಷದಲ್ಲಿ ಎರಡನೇ ಹಳದಿ ಕಾರ್ಡ್ ಪಡೆದು ಪಂದ್ಯದಿಂದ ಹೊರಗೆ ಉಳಿಯಬೇಕಾಯಿತು.

ಭೆಕೆ ಅವರ ನಿರ್ಗಮನ ಭಾರತ ತಂಡದ ಅಲ್ಪಸ್ವಲ್ಪ ಆಸೆಯನ್ನೂ ಮಣ್ಣುಪಾಲು ಮಾಡಿತು. ಗೋಲು ಗಳಿಸುವ ಹಲವು ಅವಕಾಶಗಳನ್ನು ಪಡೆದ ಕತರ್ 33ನೇ ನಿಮಿಷದಲ್ಲಿ ಪಂದ್ಯದ ಏಕೈಕ ಗೋಲು ಸಾಧಿಸಿತು. ಅಬ್ದುಲ್‌ ಅಝೀಝ್ ಹತೆಮ್ ಎಡಗಾಲಿನಲ್ಲಿ ಒದ್ದ ಚೆಂಡು ಭಾರತದ ಗೋಲ್‌ಕೀಪರ್ ಗುರುಪ್ರೀತ್ ಸಿಂಗ್ ಸಂಧು ಅವರನ್ನು ವಂಚಿಸಿ ಗೋಲುಪೆಟ್ಟಿಗೆ ಸೇರಿತು.

ನಿರೀಕ್ಷೆಯಂತೆ ಪಂದ್ಯದುದ್ದಕ್ಕೂ ಭಾರತದ ರಕ್ಷಣಾ ಕೋಟೆಯನ್ನು ಭೇದಿಸಿದ ಕತರ್ ತಂಡ, ದಾಳಿಯ ಮೇಲೆ ದಾಳಿ ಮಾಡುವ ಮೂಲಕ ಭಾರತ ತಂಡದ ಮೇಲೆ ಒತ್ತಡ ಹೇರಿತು. ಪಂದ್ಯದಲ್ಲಿ ಕತರ್ ಪ್ರಾಬಲ್ಯ ಎಷ್ಟಿತ್ತು ಎಂದರೆ ಮೊದಲ 45 ನಿಮಿಷಗಳಲ್ಲಿ ಚೆಂಡು ಒಮ್ಮೆಯೂ ಕತರ್ ಆಟಗಾರರ ಅರ್ಧಭಾಗವನ್ನು ತಲುಪಲಿಲ್ಲ.

ಭಾರತಕ್ಕೆ ದೊರಕಿದ ಏಕೈಕ ಅವಕಾಶವೆಂದರೆ 30ನೇ ನಿಮಿಷದಲ್ಲಿ ಆಶಿಕ್ ಕುರುನಿಯನ್ ಎಡಬದಿಯಿಂದ ಹೊಡೆದ ಚೆಂಡು ಬಹುತೇಕ ಮನ್ವೀರ್ ಸಿಂಗ್ ಅವರ ಬಲಗಾಲಿನತ್ತ ಬಂದರೂ, ಸಕಾಲಿಕವಾಗಿ ಕತರ್‌ನ ಬೌಲೆಮ್ ಖೌಕಿ ಅದನ್ನು ತಡೆದು ತಂಡಕ್ಕೆ ಎದುರಾಗಿದ್ದ ಅಪರೂಪದ ಅಪಾಯದ ಕ್ಷಣದಿಂದ ತಂಡವನ್ನು ಪಾರು ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News