×
Ad

ಪಂಜಾಬ್‌:ಬಿಜೆಪಿ ನಾಯಕರ ನಿವಾಸಗಳ ಬಳಿ ಕೃಷಿ ಕಾನೂನುಗಳ ಪ್ರತಿಗಳನ್ನುಸುಟ್ಟು ಹಾಕಿದ ರೈತರು

Update: 2021-06-05 15:19 IST
photo: The New Indian Express

 ಚಂಡೀಗಢ: ಕೇಂದ್ರ ಸರಕಾರವು ಕೃಷಿ ಕಾಯ್ದೆಗಳನ್ನು ಅಧ್ಯಾದೇಶಗಳನ್ನಾಗಿ ಘೋಷಿಸಿ ಒಂದು ವರ್ಷವಾಗಿರುವ ಹಿನ್ನೆಲೆಯಲ್ಲಿ ಶನಿವಾರ 'ಸಂಪೂರ್ಣ ಕ್ರಾಂತಿ ದಿವಸ್' ಆಚರಿಸಿದ ರೈತರು  ಬಿಜೆಪಿ ನಾಯಕರ ನಿವಾಸಗಳ ಬಳಿ ಹಾಗೂ  ಪಂಜಾಬ್‌ನ ಇತರ ಸ್ಥಳಗಳಲ್ಲಿ ಶನಿವಾರ ರೈತರು ಕೃಷಿ ಕಾನೂನುಗಳ ಪ್ರತಿಗಳನ್ನು ಸುಟ್ಟುಹಾಕಿ ಸಾಂಕೇತಿಕ ಪ್ರತಿಭಟನೆ ನಡೆಸಿದರು.

ಕಪ್ಪು ಧ್ವಜಗಳನ್ನು ಹೊತ್ತ ರೈತರು ಕಾಯ್ದೆಗಳನ್ನು ರದ್ದುಗೊಳಿಸದ ಕಾರಣ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಈ ಕಾಯ್ದೆ ಕೃಷಿ ಸಮುದಾಯವನ್ನು "ನಾಶಪಡಿಸುತ್ತದೆ" ಎಂದು ಅವರು ಹೇಳಿದರು.

ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿ ಪ್ರತಿಭಟನಾ ಸ್ಥಳಗಳ ಬಳಿ ಬ್ಯಾರಿಕೇಡ್‌ಗಳನ್ನು ಹಾಕಲಾಯಿತು.

ಕೃಷಿ ಕಾನೂನುಗಳ ವಿರುದ್ಧದ ಆಂದೋಲನವನ್ನು ಮುನ್ನಡೆಸುತ್ತಿರುವ ಪ್ರತಿಭಟನ ನಿರತ ರೈತ ಸಂಘಗಳ ಸಂಸ್ಥೆಯಾದ ಸಂಯುಕ್ತಾ ಕಿಸಾನ್ ಮೋರ್ಚಾ ಶನಿವಾರ 'ಸಂಪೂರ್ಣ ಕ್ರಾಂತಿ ದಿವಸ್' ಆಚರಿಸಲು ಕರೆ ನೀಡಿತು.

ಫಾಗ್ವಾರಾದಲ್ಲಿ, ಅರ್ಬನ್ ಎಸ್ಟೇಟ್ ನಲ್ಲಿ ಕೇಂದ್ರ ಸಚಿವ ಸೋಮ್ ಪ್ರಕಾಶ್ ಅವರ ನಿವಾಸದ ಬಳಿ ರೈತರು ಕೃಷಿ ಕಾನೂನುಗಳ ಪ್ರತಿಗಳನ್ನು ಸುಟ್ಟುಹಾಕಿದರು. ಪ್ರತಿಭಟನಾಕಾರರು ಜಿಟಿ ರಸ್ತೆ ಬಳಿ ಜಮಾಯಿಸಿ ಸಚಿವರ ನಿವಾಸದ ಕಡೆಗೆ ಮೆರವಣಿಗೆ ನಡೆಸಿದರು.

ಪ್ರತಿಭಟನಾಕಾರರು ಅಲ್ಲಿಗೆ ಬರದಂತೆ ತಡೆಯಲು ಪೊಲೀಸರು ಸೋಮ್ ಪ್ರಕಾಶ್ ಅವರ ಮನೆಗೆ ಹೋಗುವ ರಸ್ತೆಯಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರತಿಭಟನೆಯ ಸಮಯದಲ್ಲಿ ಕೇಂದ್ರ ಸಚಿವರು ಮನೆಯಲ್ಲಿ ಇರಲಿಲ್ಲ.

ಆಕ್ರೋಶಗೊಂಡ ರೈತರು ಮೊಹಾಲಿ ಜಿಲ್ಲೆಯ ಪ್ರಕಾಶ್ ಅವರ ನಿವಾಸದ ಬಳಿ ಪ್ರತಿಭಟನೆ ನಡೆಸಿದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರನ್ನು ನಿಯೋಜಿಸಿ ಸಚಿವರ ಮನೆಯ ಹೊರಗೆ ಬ್ಯಾರಿಕೇಡ್‌ಗಳನ್ನು ನಿರ್ಮಿಸಲಾಯಿತು.

ಚಂಡೀಗಢ ದಲ್ಲಿ, ಕೃಷಿ ಕಾನೂನುಗಳನ್ನು ರದ್ದುಗೊಳಿಸದಿದ್ದಕ್ಕಾಗಿ ಕೇಂದ್ರದ ವಿರುದ್ಧ ಪ್ರತಿಭಟನೆ ನಡೆಸಲಾಯಿತು, ಇದು ಆಂದೋಲನ ನಡೆಸುವ ರೈತರ ಮುಖ್ಯ ಬೇಡಿಕೆಯಾಗಿದೆ.

ಕಳೆದ ವರ್ಷ ಈ ದಿನದಂದು ಅಧ್ಯಾದೇಶವನ್ನು  ಘೋಷಿಸಿದ ನಂತರ, ಕೃಷಿ ಕಾಯ್ದೆಗಳನ್ನು ಸೆಪ್ಟೆಂಬರ್‌ನಲ್ಲಿ ಸಂಸತ್ತು ಅಂಗೀಕರಿಸಿತು. ರಾಷ್ಟ್ರಪತಿಗಳು ಆ ತಿಂಗಳ ಕೊನೆಯಲ್ಲಿ ಮಸೂದೆಗಳಿಗೆ ತಮ್ಮ ಒಪ್ಪಿಗೆಯನ್ನು ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News