×
Ad

ಟಿಎಂಸಿ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಭಡ್ತಿ ಪಡೆದ ಅಭಿಷೇಕ್ ಬ್ಯಾನರ್ಜಿ

Update: 2021-06-05 20:06 IST
photo: Twitter

ಕೋಲ್ಕತಾ: ತೃಣಮೂಲ ಕಾಂಗ್ರೆಸ್ ಪಕ್ಷವು ಲೋಕಸಭಾ ಸಂಸದ ಅಭಿಷೇಕ್ ಬ್ಯಾನರ್ಜಿಯವರನ್ನು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಭಡ್ತಿ ನೀಡಿದೆ.  ಬಂಗಾಳದ ಆಡಳಿತ ಪಕ್ಷದ ಹಿರಿಯ ನಾಯಕರು ಕೋಲ್ಕತ್ತಾದಲ್ಲಿ ಸಾಂಸ್ಥಿಕ ಸಭೆ ನಡೆಸಿದ ನಂತರ ಶನಿವಾರ ಈ ಆಯ್ಕೆಯನ್ನು ಘೋಷಿಸಲಾಯಿತು.  ಎಪ್ರಿಲ್-ಮೇನಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧದ ನಿರ್ಣಾಯಕ ವಿಜಯದ ನಂತರ ನಡೆದ ಮೊದಲ ಸಭೆ ಇದಾಗಿತ್ತು.

ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಅವರು ಪಕ್ಷದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ವಿಶೇಷವಾಗಿ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಅವರನ್ನು ನೇಮಕ ಮಾಡುವಲ್ಲಿ ಅಭಿಷೇಕ್  ಪ್ರಮುಖ ಪಾತ್ರ ವಹಿಸಿದ್ದರು.

ಅಭಿಷೇಕ್ ನೇಮಕವು ಪಕ್ಷದೊಳಗೆ ಅವರ ಹೆಚ್ಚುತ್ತಿರುವ ಪ್ರಭಾವವನ್ನು ಸೂಚಿಸುತ್ತದೆ. ಮಮತಾ ಅವರ ಮಾಜಿ ಆಪ್ತ  ಸುವೇಂದು ಅಧಿಕಾರಿ ಸೇರಿದಂತೆ ತೃಣಮೂಲದ ಅನೇಕ ನಾಯಕರು ಮತದಾನಕ್ಕೆ ಮುಂಚಿತವಾಗಿ ಪಕ್ಷ ತ್ಯಜಿಸಲು ಅಭಿಷೇಕ್ ಅವರೊಂದಿಗೆ ಭಿನ್ನಾಭಿಪ್ರಾಯವು ಒಂದು ಕಾರಣ.

ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ  ಗೃಹ ಸಚಿವ ಅಮಿತ್ ಶಾ ಸೇರಿದಂತೆ ಹಿರಿಯ ಬಿಜೆಪಿ ನಾಯಕರು "ಸುಲಿಗೆ ಮಾಡುವ ಸೋದರಳಿಯ" ಎಂದು ಅಭಿಷೇಕ್ ಮೇಲೆ ವಾಗ್ದಾಳಿ ನಡೆಸಿದ್ದರು.

ತೃಣಮೂಲ ಪಕ್ಷವು ತನ್ನ ಮಹಿಳಾ ವಿಭಾಗದ ಅಧ್ಯಕ್ಷೆಯನ್ನಾಗಿ ಸಂಸದೆ ಕಾಕೋಲಿ ಘೋಷ್ ದಸ್ತಿದಾರ್ ಹಾಗೂ  ಕಳೆದ ತಿಂಗಳು ನಡೆದ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ನಟಿ   ಸಾಯೋನಿ ಘೋಷ್ ಅವರನ್ನು ಯುವ ವಿಭಾಗದ ಅಧ್ಯಕ್ಷೆಯನ್ನಾಗಿ ನೇಮಿಸಿದೆ.

ಈ ಹಿಂದೆ ಯುವ ವಿಭಾಗವನ್ನು ಮುನ್ನಡೆಸಿದ ಅಭಿಷೇಕ್ ಬ್ಯಾನರ್ಜಿ ಈಗ ಆ ಹುದ್ದೆಯಿಂದ ಕೆಳಗಿಳಿಯಲಿದ್ದಾರೆ, ಪಕ್ಷವು 'ಒಬ್ಬ ವ್ಯಕ್ತಿಗೆ ಒಂದು ಸ್ಥಾನ ಸೂತ್ರ' ವನ್ನು ಅನುಸರಿಸುತ್ತದೆ ಎಂದು ಹಿರಿಯ ನಾಯಕ ಪಾರ್ಥಾ ಚಟರ್ಜಿ ಹೇಳಿದರು.

ಪಕ್ಷದ ಸಂಸದೀಯ ನಾಯಕರಾಗಿ ಸುದೀಪ್ ಬಂದೋಪಾಧ್ಯಾಯ ಹಾಗೂ ಡೆರೆಕ್ ಒ'ಬ್ರಿಯಾನ್ ಅವರನ್ನು ಉಳಿಸಿಕೊಳ್ಳಲಾಗಿದೆ.

ಇಂದಿನ ಸಭೆಯಲ್ಲಿ ಕೋಲ್ಕತ್ತಾದ ಭವಾನಿಪುರ ಸ್ಥಾನಕ್ಕೆ ಚುನಾವಣೆ ಸೇರಿದಂತೆ ಮುಂಬರುವ ಉಪಚುನಾವಣೆಗಳ ಪಕ್ಷದ ಕಾರ್ಯತಂತ್ರದ ಬಗ್ಗೆ ಚರ್ಚಿಸಲಾಗಿದೆ. ಈ ಕ್ಷೇತ್ರದಿಂದ  ಮಮತಾ ಬ್ಯಾನರ್ಜಿ ಸ್ಪರ್ಧಿಸುವ ನಿರೀಕ್ಷೆಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News