ಟ್ವಿಟರ್ ನಲ್ಲಿ ಜನಾಂಗೀಯ, ಅಶ್ಲೀಲ ಸಂದೇಶ: ಇಂಗ್ಲೆಂಡ್ ವೇಗದ ಬೌಲರ್ ರಾಬಿನ್ಸನ್ ಅಮಾನತು

Update: 2021-06-07 04:53 GMT

ಲಂಡನ್: ಜನಾಂಗೀಯ ಹಾಗೂ  ಅಶ್ಲೀಲ ಟ್ವಿಟರ್ ಸಂದೇಶಗಳ ಕಳುಹಿಸಿದ್ದ ಬಗ್ಗೆ ತನಿಖೆ ಬಾಕಿ ಇರುವ ಕಾರಣ  ಇಂಗ್ಲೆಂಡ್ ಯುವ ವೇಗದ ಬೌಲರ್ ಒಲ್ಲಿ ರಾಬಿನ್ಸನ್ ಎಲ್ಲಾ ಅಂತರ್ ರಾಷ್ಟ್ರೀಯ ಕ್ರಿಕೆಟ್‌ನಿಂದ ಅಮಾನತುಗೊಳಿಸಲಾಗಿದೆ. ರಾಬಿನ್ಸನ್ ಮುಂದಿನ ವಾರ ಎಡ್ಜ್‌ಬಾಸ್ಟನ್‌ನಲ್ಲಿ ನಡೆಯಲಿರುವ ನ್ಯೂಝಿಲ್ಯಾಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಿಂದ ವಂಚಿತರಾಗಲಿದ್ದಾರೆ ಎಂದು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ರವಿವಾರ ಪ್ರಕಟಿಸಿದೆ.

ಲಾರ್ಡ್ಸ್ ನಲ್ಲಿ ರವಿವಾರ  ಮುಕ್ತಾಯವಾದ ಮೊದಲ ಟೆಸ್ಟ್ ಪಂದ್ಯದಲ್ಲಿ ಸಸೆಕ್ಸ್ ವೇಗದ ಬೌಲರ್  ರಾಬಿನ್ಸನ್ ಇಂಗ್ಲೆಂಡ್‌  ಪರ ಆಡಿದ್ದ ಪಾದಾರ್ಪಣೆ ಪಂದ್ಯದಲ್ಲಿ ಪರಿಣಾಮಕಾರಿ ಪ್ರದರ್ಶನ ನೀಡಿದ್ದರು. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ಮಿಂಚಿದ್ದರು.

ಆದರೆ, 27ರ ಹರೆಯದ ರಾಬಿನ್ಸನ್ 2012 ಹಾಗೂ  2013 ರಲ್ಲಿ ಪೋಸ್ಟ್ ಮಾಡಿದ್ದ ಜನಾಂಗೀಯ ಹಾಗೂ ಅಶ್ಲೀಲ ಸೋಷಿಯಲ್ ಮೀಡಿಯಾ ಸಂದೇಶಗಳ ಕುರಿತ ತನಿಖೆ ಮತ್ತೆ ಆರಂಭವಾಗಿರುವುದು ಅವರ ಅಮಾನತಿಗೆ ಕಾರಣವಾಗಿದೆ.

"ಇಂಗ್ಲೆಂಡ್ ಬೌಲರ್ ಒಲ್ಲಿ ರಾಬಿನ್ಸನ್ ಅವರನ್ನು 2012 ಹಾಗೂ  2013 ರಲ್ಲಿ ಪೋಸ್ಟ್ ಮಾಡಿದ್ದ ಟ್ವೀಟ್ ಗಳ ನಂತರ ಶಿಸ್ತಿನ ತನಿಖೆಯ ಫಲಿತಾಂಶ ಬಾಕಿ ಉಳಿದಿದೆ. ಹೀಗಾಗಿ ರಾಬಿನ್ಸನ್ ಅವರನ್ನು  ಎಲ್ಲಾ ಅಂತರ್ ರಾಷ್ಟ್ರೀಯ ಕ್ರಿಕೆಟ್ ನಿಂದ ಅಮಾನತುಗೊಳಿಸಲಾಗಿದೆ" ಎಂದು ಇಸಿಬಿ ಹೇಳಿಕೆಯೊಂದರಲ್ಲಿ  ತಿಳಿಸಿದೆ.

"ಜೂನ್ 10 ರ ಗುರುವಾರ ಎಡ್ಜ್‌ಬಾಸ್ಟನ್‌ನಲ್ಲಿ ಪ್ರಾರಂಭವಾಗುವ ನ್ಯೂಜಿಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಆಯ್ಕೆಗೆ ಅವರು ಲಭ್ಯವಿರುವುದಿಲ್ಲ. ರಾಬಿನ್ಸನ್ ಇಂಗ್ಲೆಂಡ್ ಶಿಬಿರವನ್ನು ತೊರೆದು ತನ್ನ ಕೌಂಟಿಗೆ ಮರಳಲಿದ್ದಾರೆ" ಎಂದು ಇಸಿಬಿ ತಿಳಿಸಿದೆ.

ರಾಬಿನ್ಸನ್ ಲಾರ್ಡ್ಸ್‌ನಲ್ಲಿ ನಡೆದ ಮೊದಲ ಟೆಸ್ಟ್ ನ ಮೊದಲ ಇನ್ನಿಂಗ್ಸ್‌ನಲ್ಲಿ 75 ರನ್ ಗೆ 4 ವಿಕೆಟ್  ಪಡೆದು   ಇಂಗ್ಲೆಂಡ್‌ನ ದಾಳಿಯನ್ನು ಮುನ್ನಡೆಸಿದ್ದರು ಹಾಗೂ ಎರಡನೆಯ ಇನಿಂಗ್ಸ್ ನಲ್ಲಿ 26 ರನ್ ಗೆ 3 ವಿಕೆಟ್ ಪಡೆದಿದ್ದರು. ಬ್ಯಾಟಿಂಗ್  ನಲ್ಲಿ  ಉಪಯುಕ್ತ 42 ರನ್ ಗಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News