ಉತ್ತರಪ್ರದೇಶ ಬಿಜೆಪಿ ಟ್ವಿಟರ್ ಕವರ್ ಫೋಟೊದಿಂದ ಮೋದಿ ಚಿತ್ರ ತೆರವು?

Update: 2021-06-07 09:52 GMT

ಲಕ್ನೋ: ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್‌ ನಡುವೆ ಶೀತಲ ಸಮರ ನಡೆಯುತ್ತಿದೆ ಎನ್ನುವುದರ ಕುರಿತಾದಂತೆ ಸಾಮಾಜಿಕ ತಾಣದಾದ್ಯಂತ ಚರ್ಚೆಗಳು ನಡೆಯುತ್ತಿವೆ. ಈ ನಡುವೆ ಪ್ರಧಾನಿ ನರೇಂದ್ರ ಮೋದಿಯವರು ಆದಿತ್ಯನಾಥ್‌ ಗೆ ಜೂನ್‌ ೫ರಂದು ಜನ್ಮದಿನ ಶುಭಾಶಯ ಸಲ್ಲಿಸಿಲ್ಲ ಎನ್ನುವುದರ ಕುರಿತು ಚರ್ಚೆಗಳು ನಡೆದಿತ್ತು. 

ಈ ನಡುವೆ ಇದೀಗ ಉತ್ತರಪ್ರದೇಶ ಬಿಜೆಪಿಯ ಟ್ವಿಟರ್‌ ಕವರ್‌  ಫೋಟೊದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಫೋಟೋವನ್ನು ತೆರವುಗೊಳಿಸಲಾಗಿದೆ ಎಂದು ಕಾಂಗ್ರೆಸ್‌ ಕಾರ್ಯಕರ್ತರು ಸಾಮಾಜಿಕ ತಾಣದಾದ್ಯಂತ ಚರ್ಚೆ ಪ್ರಾರಂಭಿಸಿದ್ದಾರೆ. ಕವರ್‌ ಫೋಟೊದಲ್ಲಿ ಅಮಿತ್‌ ಶಾ ಮತ್ತು ಜೆ.ಪಿ. ನಡ್ಡಾ ಫೋಟೊಗಳೂ ಇಲ್ಲ. ಉಪಮುಖ್ಯಮಂತ್ರಿಗಳಾದ ದಿನೇಶ್‌ ಶರ್ಮ,ಕೇಶವ ಪ್ರಸಾದ್‌ ಮೌರ್ಯ ಹಾಗೂ ಉತ್ತರಪ್ರದೇಶ ರಾಜ್ಯ ಬಿಜೆಪಿ ಅಧ್ಯಕ್ಷ ಸ್ವತಂತ್ರ ದೇವ್‌ ಸಿಂಗ್‌ ರ ಫೋಟೊಗಳನ್ನು ಕವರ್‌ ಫೋಟೊದಲ್ಲಿ ಹಾಕಲಾಗಿದೆ.

ಗುಜರಾತ್‌ ನ ಮಾಜಿ ಐಎಎಸ್‌ ಅಧಿಕಾರಿಯಾಗಿದ್ದ ಅರವಿಂದ್‌ ಶರ್ಮಾ ಪ್ರಧಾನಿ ನರೇಂದ್ರ ಮೋದಿಯ ಆಪ್ತರಾಗಿದ್ದು, ಅವರನ್ನು ಉತ್ತರಪ್ರದೇಶದ ಉಪಮುಖ್ಯಮಂತ್ರಿಯಾಗಿ ನೇಮಕ ಮಾಡಬೇಕೆಂದು ಪ್ರಧಾನಿ ಮೋದಿ ಬಯಸಿದ್ದರು. ಆದರೆ, ಈಗಿರುವ ಉಪಮುಖ್ಯಮಂತ್ರಿಯನ್ನು ಸ್ಥಾನದಿಂದ ತೆರವುಗೊಳಿಸಲು ಆದಿತ್ಯನಾಥ್‌ ನಿರಾಕರಿಸಿದ್ದಾರೆ. ಈ ಕಾರಣದಿಂದಾಗಿ ಇವರಿಬ್ಬರ ನಡುವೆ ಬಿರುಕುಂಟಾಗಿದ್ದು, ಇದನ್ನು ಶಮನಗೊಳಿಸುವ ಉದ್ದೇಶದಿಂದಲೇ ಆರೆಸ್ಸೆಸ್‌ ನೇತೃತ್ವದಲ್ಲಿ ಸಭೆಗಳನ್ನು ಜೂನ್‌ 3ರಂದು ನಡೆಸಲಾಗಿತ್ತು ಎಂದು ಎರಡು ದಿನಗಳ ಹಿಂದೆ thewire.in ವರದಿ ಮಾಡಿತ್ತು.

ಪ್ರಧಾನಿ ಮೋದಿ ಮತ್ತು ಆದಿತ್ಯನಾಥ್‌ ನಡುವಿನ ಶೀತಲ ಸಮರದ ಕುರಿತಾದಂತೆ ಮಾತನಾಡಿದ ಉತ್ತರಪ್ರದೇಶ ರಾಜ್ಯ ಬಿಜೆಪಿ ಉಸ್ತುವಾರಿ ರಾಧಾ ಮೋಹನ್‌ ಸಿಂಗ್‌ ಇವುಗಳು ವದಂತಿಗಳಾಗಿವೆ ಎಂದು  ಹೇಳಿದ್ದಾರೆ. "ಪ್ರಧಾನಿ ಮೋದಿಯ ಕನಸುಗಳನ್ನು ಉತ್ತರಪ್ರದೇಶದಲ್ಲಿ ಸಾಕಾರಗೊಳಿಸಲು ಆದಿತ್ಯನಾಥ್‌ ಸಮರ್ಥ ವ್ಯಕ್ತಿ" ಎಂದು ಅವರು ಹೇಳಿದ್ದಾರೆ.

"ಉತ್ತರಪ್ರದೇಶದಲ್ಲಿರುವ ಬಿಜೆಪಿಯ ಶಾಖೆಯು ಅತ್ಯಂತ ಬಲಿಷ್ಠವಾಗಿದ್ದು, ಉತ್ತರಪ್ರದೇಶ ಸರಕಾರವು ರಾಷ್ಟ್ರಾದ್ಯಂತ ಜನಪ್ರಿಯತೆ ಹೊಂದಿದೆ. ನಾವು ಈಗ ಜಿಲ್ಲಾ ಪಂಚಾಯತ್‌ ಚುನಾವಣೆಗಳಿಗೆ ಗಮನ ಹರಿಸುತ್ತಿದ್ದೇವೆ" ಎಂದು ಅವರು ಹೇಳಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News