ಉತ್ತರಪ್ರದೇಶ: ದಲಿತ ಯುವತಿಯನ್ನು ದ್ವಿಚಕ್ರ ವಾಹನದಿಂದ ಎಳೆದು ಸಾಮೂಹಿಕ ಅತ್ಯಾಚಾರ
ಹೊಸದಿಲ್ಲಿ: ಉತ್ತರ ಪ್ರದೇಶದ ಬರೇಲಿಯ ಭಗವಾನ್ಪುರ್ ಧಿಮ್ರಿ ಗ್ರಾಮದಲ್ಲಿ ತನ್ನ ಸ್ಕೂಟಿ ಚಲಾಯಿಸುತ್ತಿದ್ದ 19 ವರ್ಷದ ದಲಿತ ಯುವತಿಯನ್ನು ಆರು ಮಂದಿ ದುಷ್ಕರ್ಮಿಗಳು ವಾಹನದಿಂದೆಳೆದು ಹಲ್ಲೆಗೈದು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರಗೈದ ಘಟನೆ ಮೇ 31ರಂದು ನಡೆದಿದೆ. ಘಟನೆ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು thewire.in ವರದಿ ಮಾಡಿದೆ.
ತನ್ನ ಶಾಲೆಯ ಸ್ನೇಹಿತೆಯರೊಂದಿಗೆ ಸ್ಕೂಟಿಯಲ್ಲಿ ಆಕೆ ತೆರಳುತ್ತಿದ್ದ ವೇಳೆಗೆ ದುಷ್ಕರ್ಮಿಗಳು ಅಡ್ಡಗಟ್ಟಿದ್ದರು. ಆಕೆ ಈ ಘಟನೆ ಕುರಿತು ತನ್ನ ಕುಟುಂಬದ ಬಳಿ ಜೂನ್ 5ರಂದು ಬಾಯ್ಬಿಟ್ಟಿದ್ದಳು ಎನ್ನಲಾಗಿದೆ. ಪೊಲೀಸ್ ದೂರು ನೀಡಿದರೆ ಕೊಲೆ ನಡೆಸುವ ಬೆದರಿಕೆಯನ್ನು ಸಂತ್ರಸ್ತೆಗೆ ಆರೋಪಿಗಳು ಒಡ್ಡಿದ್ದರು ಎಂದು ಆಕೆಯ ಹಿರಿಯ ಸಹೋದರ ತಿಳಿಸಿದ್ದು ಆಕೆ ಈಗ ಆಘಾತ ಸ್ಥಿತಿಯಲ್ಲಿದ್ದು ಆಕೆಗೆ ಗಾಯಗಳೂ ಆಗಿವೆ ಎಂದು ಆತ ತಿಳಿಸಿದ್ದಾರೆ.
ಘಟನೆ ಕುರಿತು ಜೂನ್ 5ರಂದು ದೂರು ದಾಖಲಾದ ನಂತರ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ.
ಆಕೆ ನೀಡಿದ ದೂರಿನ ಪ್ರಕಾರ ಮೂವರು ಆರೋಪಿಗಳು ಆಕೆಯನ್ನು ವಾಹನದಿಂದೆಳೆದರೆ ಇತರ ಮೂವರು ಆಕೆಯ ಸ್ನೇಹಿತೆಯರ ಮೇಲೆ ಹಲ್ಲೆಗೈದಿದ್ದರು. ಆಕೆಯ ಒಬ್ಬ ಸ್ನೇಹಿತೆ ತಪ್ಪಿಸಿಕೊಳ್ಳಲು ಯಶಸ್ವಿಯಾದರೆ ಇನ್ನೊಬ್ಬಾಕೆ ಬಿದ್ದು ಪ್ರಜ್ಞಾಶೂನ್ಯಳಾದಳು ಎಂದು ಆರೋಪಿಸಲಾಗಿದೆ.
ಘಟನೆ ಸಂಬಂಧ ವಿಶಾಲ್ ಪಟೇಲ್ (22) ಹಾಗೂ ಅನುಜ್ ಪಟೇಲ್ (23) ಎಂಬವರನ್ನು ರವಿವಾರ ಬಂಧಿಸಲಾಗಿದೆ. ಅವರಲ್ಲೊಬ್ಬಾತನ ಕಾಲಿಗೆ ಗುಂಡೇಟು ಹೊಡೆದ ನಂತರ ಆತನನ್ನು ಬಂಧಿಸಲಾಯಿತು. ಸಂತ್ರಸ್ತೆಯನ್ನು ವೈದ್ಯಕೀಯ ತಪಾಸಣೆಗೊಳಪಡಿಸಲಾಗಿದೆ.