"ಉಮರ್ ಖಾಲಿದ್, ಖಾಲಿದ್ ಸೈಫಿ ಗ್ಯಾಂಗ್ ಸ್ಟರ್ ಗಳಲ್ಲ, ಕೈಕೋಳ ತೊಡಿಸಿ ಕೋರ್ಟ್ ಗೆ ಹಾಜರುಪಡಿಸಬೇಕೆಂದಿಲ್ಲ"
ಹೊಸದಿಲ್ಲಿ: ʼಅಪಾಯಕಾರಿ ಕೈದಿಗಳುʼ ಎಂಬ ಆಧಾರದಲ್ಲಿ ಹೋರಾಟಗಾರರಾದ ಉಮರ್ ಖಾಲಿದ್ ಮತ್ತು ಖಾಲಿದ್ ಸೈಫಿ ಅವರನ್ನು ಕೈಕೋಳ ತೊಡಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಬೇಕೆಂಬ ಅಪೀಲನ್ನು ದಿಲ್ಲಿಯ ನ್ಯಾಯಾಲಯವು ತಿರಸ್ಕರಿಸಿದೆ. ʼಆರೋಪಿಗಳು ಈ ಹಿಂದೆ ಯಾವುದೇ ಪ್ರಕರಣದಲ್ಲಿ ಅಪರಾಧಿಗಳೆಂದು ಘೋಷಿತರಾಗಿಲ್ಲ ಹಾಗೂ ಗ್ಯಾಂಗ್‍ಸ್ಟರ್‍ಗಳೂ ಅಲ್ಲ, ಸರಿಯಾಗಿ ಪರಾಮರ್ಶಿಸದೆ ದಿಲ್ಲಿ ಪೊಲೀಸರು ಮತ್ತು ಜೈಲಿನ ಅಧಿಕಾರಿಗಳು ಈ ಅಪೀಲು ಸಲ್ಲಿಸಿದ್ದಾರೆ" ಎಂದು ಹೆಚ್ಚುವರಿ ಸೆಶನ್ಸ್ ನ್ಯಾಯಾಧೀಶ ವಿನೋದ್ ಯಾದವ್ ಹೇಳಿದ್ದಾರೆ ಎಂದು scroll.in ವರದಿ ಮಾಡಿದೆ.
ಕೋವಿಡ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಆರೋಪಿಗಳನ್ನು ನ್ಯಾಯಾಲಯಕ್ಕೆ ಖುದ್ದಾಗಿ ಹಾಜರು ಪಡಿಸಲಾಗುತ್ತಿಲ್ಲವಾದುದರಿಂದ ಈ ಅಪೀಲು ಈ ಹಂತದಲ್ಲಿ ಅಗತ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.
ಕಳೆದ ಬಾರಿ ವಿಚಾರಣೆ ಎಪ್ರಿಲ್ 22ರಂದು ವಿಚಾರಣೆ ನಡೆದಾಗ ಈ ಅಪೀಲಿನ ಕುರಿತು ದಿಲ್ಲಿ ಪೊಲೀಸರ ವಿಶೇಷ ಸೆಲ್ ಹಾಗೂ ಜೈಲ್ ಅಧೀಕ್ಷಕರಿಂದ ವರದಿಯನ್ನು ನ್ಯಾಯಾಲಯ ಕೇಳಿತ್ತು.
ಮೇ 6ರಂದು ವರದಿ ಸಲ್ಲಿಸಿದ್ದ ವಿಶೇಷ ಸೆಲ್ ಹೆಚ್ಚುವರಿ ಡಿಸಿಪಿ, ಯಾವುದೇ ನ್ಯಾಯಾಲಯದ ಮುಂದೆ ಇಂತಹ ಅಪೀಲು ಮಾಡಲಾಗಿಲ್ಲ ಎಂದು ಹೇಳಿದ್ದರು.
ಆದರೆ ಎಪ್ರಿಲ್ 26ರಂದು ಮಾಹಿತಿ ನೀಡಿದ ಡಿಸಿಪಿ, ಜಿಟಿಬಿ ಆಸ್ಪತ್ರೆಯಲ್ಲಿ ಸಶಸ್ತ್ರ ದುಷ್ಕರ್ಮಿಗಳು ವಿಚಾರಣಾಧೀನ ಕೈದಿಯೋರ್ವನೊಂದಿಗೆ ಪರಾರಿಯಾಗಲು ಯತ್ನಿಸಿದ ಘಟನೆಯ ಬಳಿಕ ಖಾಲಿದ್ ಮತ್ತು ಸೈಫಿಯನ್ನು ಕೈಕೋಳ ತೊಡಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲು ನಿರ್ಧರಿಸಲಾಯಿತು ಎಂದು ಹೇಳಿದ್ದರು.
"ಆದರೆ ಕೈಕೋಳ ತೊಡಿಸಿ ಹಾಜರುಪಡಿಸಬೇಕೆಂಬ ಅಪೀಲಿನಲ್ಲಿ ಯಾವುದೇ ಹುರುಳಿಲ್ಲ, ದಿಲ್ಲಿ ಬಂದೀಖಾನೆ ನಿಯಮಗಳೂ ಈ ಕುರಿತು ಏನನ್ನೂ ಹೇಳಿಲ್ಲ" ಎಂದು ಹೇಳಿ ನ್ಯಾಯಾಲಯ ಅಪೀಲನ್ನು ವಜಾಗೊಳಿಸಿದೆ.