ಗುಂಪು ಹತ್ಯೆ ಆರೋಪಿಗಳನ್ನು ಬೆಂಬಲಿಸಿ ಕರ್ಣಿ ಸೇನಾ ಮುಖ್ಯಸ್ಥನ ದ್ವೇಷ ಭಾಷಣದ ವೀಡಿಯೋ ಕುರಿತು ಪೊಲೀಸರಿಂದ ತನಿಖೆ
ಚಂಡೀಗಢ: ರಾಜಪುತ್ ಕರ್ಣಿ ಸೇನಾ ಮುಖ್ಯಸ್ಥ ಕುನ್ವರ್ ಸೂರಜ್ ಪಾಲ್ ಅಮು, ರಾಜ್ಯದಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬನನ್ನು ಥಳಿಸಿ ಹತ್ಯೆಗೈದ ಪ್ರಕರಣದಲ್ಲಿ ಬಂಧಿತರ ಪರ ನಿಲುವು ತಾಳಿ ಮಾಡಿದ್ದಾನೆನ್ನಲಾದ ದ್ವೇಷದ ಭಾಷಣದ ವೈರಲ್ ವೀಡಿಯೋದ ಸತ್ಯಾಸತ್ಯತೆಯನ್ನು ಹರ್ಯಾಣ ಪೊಲೀಸರು ಪರಿಶೀಲಿಸುತ್ತಿದ್ದಾರೆ ಎಂದು ವರದಿಯಾಗಿದೆ.
ಮೇ 30ರಂದು ಇಂದ್ರಿ ಗ್ರಾಮದಲ್ಲಿ ನಡೆದ ಮಹಾಪಂಚಾಯತ್ ನಲ್ಲಿ ಅಮು ಮೇಲಿನ ಮಾತುಗಳನ್ನು ಆಡಿದ್ದಾನೆನ್ನಲಾಗಿದೆ. ಕೋವಿಡ್ ನಿರ್ಬಂಧಗಳ ಹೊರತಾಗಿಯೂ ಸುಮಾರು 50,000 ಮಂದಿ ಭಾಗವಹಿಸಿದ್ದ ಈ ಮಹಾಪಂಚಾಯತ್‍ನಲ್ಲಿ ಸ್ಥಳೀಯ ಬಿಜೆಪಿ ನಾಯಕರು ಹಾಗೂ ಕರ್ಣಿ ಸೇನಾ ಮತ್ತು ಭಾರತ್ ಮಾತಾ ವಾಹಿನಿಯ ಸದಸ್ಯರು ಭಾಗವಹಿಸಿದ್ದರೆನ್ನಲಾಗಿದೆ.
ವೈರಲ್ ವೀಡಿಯೋ ಕುರಿತು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಥಳಿತ ಪ್ರಕರಣದ ಆರೋಪಿಗಳನ್ನು ಬೆಂಬಲಿಸಿ ಹಾಗೂ ಅವರ ಬಿಡುಗಡೆಗೆ ಒತ್ತಾಯಿಸಿ ಹಲವು ಮಹಾಪಂಚಾಯತ್‍ಗಳು ನಡೆದಿದ್ದು ಮುಸ್ಲಿಂ ರಕ್ಷಾ ದಳ ಅವುಗಳ ವಿರುದ್ಧ ಈಗಾಗಲೇ ದೂರು ನೀಡಿದೆ.
ಹರ್ಯಾಣಾದ ನುಹ್ ಜಿಲ್ಲೆಯ ಖೇರಾ ಖಲೀಲ್ಪುರ್ ಗ್ರಾಮದ ನಿವಾಸಿ 27 ವರ್ಷದ ಆಸಿಫ್ ಹುಸೈನ್ ಖಾನ್ ಎಂಬಾತ ಮೇ 16ರಂದು ಔಷಧಿ ಖರೀದಿಗೆಂದು ಸೋದರ ಸಂಬಂಧಿ ಹಾಗೂ ಸ್ನೇಹಿತನೊಬ್ಬನ ಜತೆ ಸೊಹ್ನಾಗೆ ತೆರಳಿದ್ದ ಸಂದರ್ಭ ಅವರ ಕಾರನ್ನು ಮನೆಯಿಂದ ಸುಮಾರು 15 ಕಿಮೀ ದೂರದ ಸ್ಥಳದಲ್ಲಿ ತಡೆದಿದ್ದ ಗುಂಪು ಆಸಿಫ್‍ನನ್ನು ಕಾರಿನಿಂದ ಹೊರಗೆಳೆದು ಥಳಿಸಿ ಸಾಯಿಸಿತ್ತು. ಜಿಮ್ ತರಬೇತಿದಾರನಾಗಿದ್ದ ಆಸಿಫ್‍ಗೆ ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದಾರೆ.
ಆಸಿಫ್ ಜತೆಗಿದ್ದ ಇತರ ಇಬ್ಬರಿಗೂ ಗುಂಪು ಥಳಿಸಿತ್ತಲ್ಲದೆ ಅವರನ್ನು ಬಿಟ್ಟುಬಿಡುವುದಿಲ್ಲ ಜೈ ಶ್ರೀ ರಾಮ್ ಹೇಳುವಂತೆ ಮಾಡಲಾಗುವುದು ಎಂದು ಬೊಬ್ಬಿಟ್ಟಿತ್ತು ಎಂದು ಬದುಕುಳಿದ ಇಬ್ಬರು ಹೇಳಿದ್ದಾರೆ.
ಆಸಿಫ್ ಕುಟುಂಬ ದೂರು ದಾಖಲಿಸಿದ ನಂತರ ಆರು ಮಂದಿಯನ್ನು ಬಂಧಿಸಲಾಗಿದೆ. ಎಫ್‍ಐಆರ್‍ನಲ್ಲಿ ಒಟ್ಟು 14 ಮಂದಿಯ ಹೆಸರುಗಳು ಉಲ್ಲೇಖಗೊಂಡಿದ್ದು ಇತರರಿಗಾಗಿ ಶೋಧಿಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
ಇದೊಂದು ದ್ವೇಷದ ಕೃತ್ಯ ಎಂದು ಆಸಿಫ್ ಕುಟುಂಬ ಆರೋಪಿಸಿದ್ದರೆ ಪೊಲೀಸರು ಮಾತ್ರ ಇದರಲ್ಲಿ ಧರ್ಮದ ವಿಚಾರವಿಲ್ಲ, ಎರಡು ಗುಂಪುಗಳ ನಡುವಿನ ವೈಷಮ್ಯದಿಂದ ಕೊಲೆ ನಡೆದಿದೆ ಎನ್ನುತ್ತಿದ್ದಾರೆ.