ಪುಣೆ: ಸ್ಯಾನಿಟೈಝರ್ ತಯಾರಿಕಾ ಕಂಪೆನಿಯಲ್ಲಿ ಅಗ್ನಿ ಅನಾಹುತ; 18 ಮಂದಿ ಮೃತ್ಯು
ಪುಣೆ.ಜೂ.7: ಪುಣೆ ಜಿಲ್ಲೆಯ ಪಿರಂಗುಟ ಗ್ರಾಮದ ಸಣ್ಣ ಕೈಗಾರಿಕಾ ಪ್ರದೇಶದಲ್ಲಿರುವ ಸ್ಯಾನಿಟೈಸರ್ ತಯಾರಿಸುವ ಎಸ್ವಿಸಿ ಲಿ. ಖಾಸಗಿ ಕಂಪನಿಯಲ್ಲಿ ಸೋಮವಾರ ಅಪರಾಹ್ನ ಸಂಭವಿಸಿದ ಭಾರೀ ಬೆಂಕಿ ಅವಘಡದಲ್ಲಿ ಕನಿಷ್ಠ 18 ಜನರು ಸಜೀವ ದಹನಗೊಂಡಿದ್ದಾರೆ ಎಂದು ndtv.com ವರದಿ ತಿಳಿಸಿದೆ.
ಸುಮಾರು 10 ಕಾರ್ಮಿಕರು ನಾಪತ್ತೆಯಾಗಿದ್ದು ಅವಶೇಷಗಳಡಿ ಸಿಕ್ಕಿಕೊಂಡಿರುವ ಭೀತಿ ವ್ಯಕ್ತವಾಗಿದೆ. ಮೃತರಲ್ಲಿ ಹೆಚ್ಚಿನವರು ಮಹಿಳೆಯರಾಗಿದ್ದಾರೆ.
ಅಪರಾಹ್ನ ಮೂರು ಗಂಟೆಯ ಸುಮಾರಿಗೆ ಕಾಣಿಸಿಕೊಂಡ ಬೆಂಕಿ ಕ್ಷಣಾರ್ಧದಲ್ಲಿ ಇಡೀ ಕಟ್ಟಡವನ್ನು ಅವರಿಸಿತ್ತು. ಹೆಚ್ಚಿನ ಪುರುಷ ಕಾರ್ಮಿಕರು ಬೆಂಕಿಯ ಜ್ವಾಲೆ ಮತ್ತು ಹೊಗೆಯ ನಡುವೆಯೇ ಹೊರಗೋಡಿ ಜೀವವನ್ನುಳಿಸಿಕೊಂಡಿದ್ದಾರೆ. ಅಗ್ನಿಶಾಮಕ ಸಿಬ್ಬಂದಿಗಳು ಸಂಜೆಯ ವೇಳೆಗೆ ಬೆಂಕಿಯನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮೃತರ ಶವಗಳು ಸುಟ್ಟು ಕರಕಲಾಗಿದ್ದು,ಗುರುತು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ,ಮೃತರು ಗಂಡೋ ಹೆಣ್ಣೋ ಎನ್ನುವುದೂ ಗೊತ್ತಾಗುತ್ತಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು. ಆದರೆ ಮೃತರಲ್ಲಿ 12ಕ್ಕೂ ಹೆಚ್ಚು ಮಹಿಳೆಯರಿದ್ದಾರೆ ಎಂದು ಸಹಕಾರ್ಮಿಕರು ಅಂದಾಜಿಸಿದ್ದಾರೆ.
#BREAKING | Five dead in fire at chemical plant in Pune district: Fire brigade officials (PTI) pic.twitter.com/DGzPk9o9tg
— NDTV (@ndtv) June 7, 2021