ಕೊವ್ಯಾಕ್ಸಿನ್ ಗಿಂತ ಕೋವಿಶೀಲ್ಡ್‌ ನಿಂದ ಅಧಿಕ ಪ್ರತಿಕಾಯ ಉತ್ಪಾದನೆ: ಅಧ್ಯಯನ ವರದಿಯಲ್ಲಿ ಉಲ್ಲೇಖ

Update: 2021-06-07 17:08 GMT

ಹೊಸದಿಲ್ಲಿ, ಜೂ.7: ಕೊವ್ಯಾಕ್ಸಿನ್ ಗೆ ಹೋಲಿಸಿದರೆ  ಕೋವಿಶೀಲ್ಡ್ ಲಸಿಕೆ ಹೆಚ್ಚು ಪ್ರತಿಕಾಯ(ಆ್ಯಂಟಿಬಾಡಿ)ಗಳನ್ನು ಉತ್ಪಾದಿಸುತ್ತದೆ ಎಂದು ಇತ್ತೀಚೆಗೆ ನಡೆದ ಅಧ್ಯಯನದಿಂದ ತಿಳಿದುಬಂದಿದೆ.

ಎರಡೂ ಲಸಿಕೆಗಳು ಕೊರೋನ ಸೋಂಕಿನ ವಿರುದ್ಧದ ಪ್ರತಿಕಾಯ ಉತ್ಪಾದಿಸುತ್ತವೆ. ಆದರೆ ಕೊವ್ಯಾಕ್ಸಿನ್ಗೆ ಹೋಲಿಸಿದರೆ ಕೋವಿಶೀಲ್ಡ್ ಲಸಿಕೆ ತೆಗೆದುಕೊಂಡವರಲ್ಲಿ ಪೊಸಿಟಿವಿಟಿ ಪ್ರಮಾಣ ಹೆಚ್ಚಿರುತ್ತದೆ ಎಂದು ವರದಿ ತಿಳಿಸಿದೆ.

ಕೊವ್ಯಾಕ್ಸಿನ್ ಅಥವಾ ಕೋವಿಶೀಲ್ಡ್ ಲಸಿಕೆಗಳ ಎರಡೂ ಡೋಸ್ ಪಡೆದಿರುವ ಆರೋಗ್ಯ ಕಾರ್ಯಕರ್ತರನ್ನು ಒಳಗೊಂಡಿರುವ ಅಧ್ಯಯನವನ್ನು ಕೊರೋನವೈರಸ್ ವ್ಯಾಸಿನ್ ಇಂಡ್ಯೂಸ್ಡ್ ಆ್ಯಂಟಿಬಾಡಿ ಟಿಟರ್(ಕೊವ್ಯಾಟ್) ನಡೆಸಿದೆ. ಕೊವ್ಯಾಕ್ಸಿನ್ ಲಸಿಕೆಯ ಪ್ರಥಮ ಡೋಸ್ ಪಡೆದವರಿಗಿಂತ  ಕೋವಿಶೀಲ್ಡ್ ಲಸಿಕೆ ಪಡೆದವರ ದೇಹದಲ್ಲಿ ಪ್ರತಿರೋಧಕ ಶಕ್ತಿ ಹೆಚ್ಚು ವೇಗವಾಗಿ ವರ್ಧಿಸಿರುವುದು ತಿಳಿದುಬಂದಿದೆ. ಈ ಅಧ್ಯಯನದ ವರದಿಯ ವಿಸ್ತೃತ ಪರಿಶೀಲನೆಯ ಅಗತ್ಯವಿರುವುದರಿಂದ ಇದನ್ನು ವೈದ್ಯಕೀಯ ಪ್ರಕ್ರಿಯೆಯಲ್ಲಿ ಮಾರ್ಗಸೂಚಿಯಂತೆ ಬಳಸಬಾರದು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಅಧ್ಯಯನ ನಡೆಸಿದ 552 ಆರೋಗ್ಯ ಕಾರ್ಯಕರ್ತರಲ್ಲಿ (325 ಪುರುಷರು, 227 ಮಹಿಳೆಯರು) 456 ಮಂದಿ ಕೋವಿಶೀಲ್ಡ್, 96 ಮಂದಿ ಕೊವ್ಯಾಕ್ಸಿನ್ ಪ್ರಥಮ ಡೋಸ್ ಪಡೆದಿದ್ದಾರೆ. ಇದರಲ್ಲಿ ಕೋವಿಶೀಲ್ಡ್ ಡೋಸ್ ಪಡೆದವರಲ್ಲಿ ಪೊಸಿಟಿವಿಟಿ ಪ್ರಮಾಣದಲ್ಲಿ 86.8% ಹೆಚ್ಚಿದ್ದರೆ ಕೊವ್ಯಾಕ್ಸಿನ್ ಡೋಸ್ ಪಡೆದವರಲ್ಲಿ ಈ ಪ್ರಮಾಣ 43.8%. ಅಲ್ಲದೆ ಪ್ರತಿಕಾಯ ಹೆಚ್ಚಳದ ಪ್ರಮಾಣ ಕೋವಿಶೀಲ್ಡ್ ಡೋಸ್ ಪಡೆವರಲ್ಲಿ 61.5% ಆಗಿದ್ದರೆ ಕೊವ್ಯಾಕ್ಸಿನ್ ಡೋಸ್ ಪಡೆದವರಲ್ಲಿ 6% ಆಗಿದೆ.

ಅಧ್ಯಯನಕ್ಕೆ ಒಳಪಟ್ಟವರಲ್ಲಿ ಈ ಹಿಂದೆ ಸಾರ್ಸ್-ಸಿಒವಿ-2 ಸೋಂಕುಬಾಧಿತರು ಹಾಗೂ ಸೋಂಕುರಹಿತರು ಸೇರಿದ್ದರು. ಪ್ರಥಮ ಲಸಿಕೆ ಪಡೆದ 21 ದಿನದ ಬಳಿಕ ಹಾಗೂ ಎರಡನೇ ಡೋಸ್ ಪಡೆದ 6 ತಿಂಗಳ ಬಳಿಕ ಪ್ರತಿಕಾಯ ಉತ್ಪಾದನೆಯ ಪ್ರಮಾಣವನ್ನು ಪರಿಶೀಲಿಸಲಾಗಿದೆ.

ಆದರೆ ಎರಡೂ ಲಸಿಕೆಗಳು ಉತ್ತಮ ರೋಗನಿರೋಧಕ ಪ್ರತಿಕ್ರಿಯೆಯನ್ನು ಹೊರಹೊಮ್ಮಿಸಿದೆ ಎಂದು ಅಧ್ಯಯನ ವರದಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News