×
Ad

ಇಬ್ಬರು ರೈತರಿಗೆ ಜಾಮೀನು: ಹರ್ಯಾಣದ ಪೊಲೀಸ್ ಠಾಣೆಯಲ್ಲಿ ಪ್ರತಿಭಟನೆ ಕೈಬಿಟ್ಟ ರೈತ ಸಂಘ

Update: 2021-06-07 23:35 IST

ಚಂಡೀಗಢ, ಜೂ.7: ಬಂಧಿತ ಇಬ್ಬರು ರೈತರನ್ನು ಸೋಮವಾರ ಜಾಮೀನಿನ ಮೇಲೆ ಬಿಡುಗಡೆಗೊಳಿಸಿರುವುದರಿಂದ ಹರ್ಯಾಣದ ಎಲ್ಲಾ ಪೊಲೀಸ್ ಠಾಣೆಗಳ ಆವರಣದಲ್ಲಿ ಪ್ರತಿಭಟನೆ ನಡೆಸುವ ನಿರ್ಧಾರವನ್ನು ಕೈಬಿಡಲಾಗಿದೆ. ಆದರೆ ಮತ್ತೊಬ್ಬ ರೈತ ಇನ್ನೂ ಬಂಧನದಲ್ಲಿರುವುದರಿಂದ ಸದರ್ ಪೊಲೀಸ್ ಠಾಣೆ ಆವರಣದಲ್ಲಿ  ಧರಣಿ ಪ್ರತಿಭಟನೆ ಮುಂದುವರಿಯಲಿದೆ ಎಂದು ಸಂಯುಕ್ತ ಕಿಸಾನ್ ಮೋರ್ಛಾ ಹೇಳಿದೆ.  

ಕಳೆದ ವಾರ ಜೆಜೆಪಿ ಶಾಸಕ ದೇವೇಂದ್ರ ಸಿಂಗ್ ಬಾಬ್ಲಿಯ ಮನೆಗೆ ಘೇರಾವೊ ಹಾಕಲು ಪ್ರಯತ್ನಿಸಿದ ಆರೋಪದಲ್ಲಿ ರವಿ ಆಝಾದ್ ಮತ್ತು ವಿಕಾಸ್ ಸಿಸಾರ್ ಎಂಬ ಇಬ್ಬರು ರೈತರನ್ನು ಬಂಧಿಸಲಾಗಿತ್ತು. ಇದನ್ನು ವಿರೋಧಿಸಿ ರಾಜ್ಯದಾದ್ಯಂತದ ಪೊಲೀಸ್ ಠಾಣೆಗೆ ಘೆರಾವೊ ಹಾಕಿ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿತ್ತು. ಆದರೆ ಸೋಮವಾರ ಇಬ್ಬರನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸಿರುವುದರಿಂದ ಪ್ರತಿಭಟನೆ ಕೈಬಿಡಲಾಗಿದೆ. ಆದರೆ ಸದರ್ ಠಾಣೆಯಲ್ಲಿ ಮತ್ತೊಬ್ಬ ರೈತ ಬಂಧನದಲ್ಲಿರುವುದರಿಂದ ಅಲ್ಲಿ ಪ್ರತಿಭಟನೆ ಮುಂದುವರಿಯಲಿದೆ ಎಂದು ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ಮುಖಂಡ ಜೋಗಿಂದರ್ ಘಾಸಿ ರಾಮ್ನಾರಾಯಣ್ ಹೇಳಿದ್ದಾರೆ.

ಅಲ್ಲದೆ ಶಾಸಕರ ಮನೆಗೆ ಘೆರಾವೊ ಹಾಕಿದ ಆರೋಪದಲ್ಲಿ ರೈತರ ವಿರುದ್ಧ ದಾಖಲಾಗಿರುವ ಎಲ್ಲಾ ಪ್ರಕರಣಗಳನ್ನೂ ರದ್ದುಗೊಳಿಸುವಂತೆ ಅವರು ಆಗ್ರಹಿಸಿದ್ದಾರೆ. ಶಾಸಕರು ಕ್ಷಮೆ ಯಾಚಿಸಿ ಪ್ರಕರಣ ವಾಪಾಸು ಪಡೆದಿರುವುದರಿಂದ ಎಲ್ಲಾ ಪ್ರಕರಣಗಳನ್ನೂ ಕೈಬಿಡಬೇಕು ಎಂದವರು ಒತ್ತಾಯಿಸಿದ್ದಾರೆ.

ಬಿಕೆಯು ಮುಖಂಡ ರಾಕೇಶ್ ಟಿಕಾಯತ್ ನೇತೃತ್ವದಲ್ಲಿ ರೈತರ ಒಂದು ಗುಂಪು ಫತೇಬಾದ್ನ ಸದರ್ ಪೊಲೀಸ್ ಠಾಣೆಯ ಕಂಪೌಂಡ್ನಲ್ಲಿ ಶನಿವಾರದಿಂದ ಪ್ರತಿಭಟನೆ ನಡೆಸುತ್ತಿದೆ. ಬಂಧಿತ ರೈತರ ಬಿಡುಗಡೆ ಜೊತೆಗೆ ರೈತರ ವಿರುದ್ಧ ದಾಖಲಿಸಿರುವ ಕ್ರಿಮಿನಲ್ ಪ್ರಕರಣ ಕೈಬಿಡಬೇಕೆಂದು ಅವರು ಆಗ್ರಹಿಸುತ್ತಿದ್ದಾರೆ.

ಶಾಸಕ ಬಾಬ್ಲಿ ರೈತರ ವಿರುದ್ಧ ಅವಮಾನಕರ ಭಾಷೆ ಬಳಸಿ ನಿಂದಿಸಿರುವುದರಿಂದ ಅವರ ವಿರುದ್ಧ ಪ್ರಕರಣ ದಾಖಲಿಸಬೇಕೆಂದು ಆಗ್ರಹಿಸಿ ಕಳೆದ ಬುಧವಾರ ರಾತ್ರಿ ರೈತರ ಗುಂಪೊಂದು ಶಾಸಕರ ಮನೆಗೆ ಮುತ್ತಿಗೆ ಹಾಕಿತ್ತು. ಈ ಘಟನೆಗೆ ಸಂಬಂಧಿಸಿ 3 ರೈತರನ್ನು ಬಂಧಿಸಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ. ಬಳಿಕ , ರೈತರ ವಿರುದ್ಧ ಸೂಕ್ತವಲ್ಲದ ಪದ ಬಳಸಿದ್ದಕ್ಕೆ ಶಾಸಕರು ಕ್ಷಮೆ ಯಾಚಿಸಿದ್ದರು ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News