ಕೊರೋನ ದತ್ತಾಂಶವನ್ನು ಪ್ರಚಾರಕ್ಕೆ ಬಳಸುತ್ತಿರುವ ಕೇಂದ್ರ: ಪ್ರಿಯಾಂಕಾ ಗಾಂಧಿ

Update: 2021-06-07 18:06 GMT

ಹೊಸದಿಲ್ಲಿ, ಜೂ. 7: ಕೊರೋನ ಸಾಂಕ್ರಾಮಿಕ ರೋಗಕ್ಕೆ ಸಂಬಂಧಿಸಿದ ದತ್ತಾಂಶವನ್ನು ಕೇಂದ್ರ ಸರಕಾರ ನಿಗ್ರಹಿಸುತ್ತಿದೆ ಎಂದು ಸೋಮವಾರ ಆರೋಪಿಸಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ, ಪ್ರಧಾನಿ ಮೋದಿ ಸರಕಾರ ಜೀವ ಉಳಿಸುವ ಕುರಿತ ಪ್ರಚಾರಕ್ಕೆ ಒತ್ತು ನೀಡಿರುವುದರಿಂದ ಅಪಾರ ಹಾನಿ ಉಂಟಾಗಿದೆ ಎಂದಿದ್ದಾರೆ.

ಸಾಂಕ್ರಾಮಿಕ ರೋಗವನ್ನು ನಿರ್ವಹಿಸುವ ಕುರಿತು ಸರಕಾರವನ್ನು ಪ್ರಶ್ನಿಸುವ ತನ್ನ ‘‘ಜವಾಬ್ದಾರರು ಯಾರು’’ ಅಭಿಯಾನ ಮುಂದುವರಿಸಿರುವ ಅವರು, ಸರಕಾರ ಬಿಡುಗಡೆ ಮಾಡಿದ ಕೊರೋನಕ್ಕೆ ಸಂಬಂಧಿಸಿದ ದತ್ತಾಂಶಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ.

 ಭಾರತೀಯರ ಜೀವ ಉಳಿಸುವ ಬದಲು ಪ್ರಧಾನಿ ಅವರನ್ನು ಉಳಿಸುವುದು ಹೆಚ್ಚು ಮುಖ್ಯವಾದುದೇ ಎಂದು ಫೇಸ್ಬುಕ್ ಪೋಸ್ಟ್, ಟ್ವಿಟ್ಟರ್ ಹಾಗೂ ಇನ್ಸ್ಟಾಗ್ರಾಮ್ನಲ್ಲಿ ಪ್ರಶ್ನಿಸಿರುವ ಅವರು, ಕೇಂದ್ರ ಸರಕಾರ ಕೊರೋನ ದತ್ತಾಂಶವನ್ನು ‘‘ಪ್ರಚಾರದ ಸಾಧನ’’ವಾಗಿ ಬಳಕೆ ಮಾಡುತ್ತಿದೆ ಎಂದು ಆರೋಪಿಸಿದರು.

ಸಾಂಕ್ರಾಮಿಕ ರೋಗದ ಆರಂಭದಲ್ಲೇ ಮೋದಿ ಸರಕಾರ ದತ್ತಾಂಶವನ್ನು ಕೊರೋನದ ವಿರುದ್ಧ ಹೋರಾಡುವ ಅಮೂಲ್ಯ ಅಸ್ತ್ರವನ್ನಾಗಿಸುವ ಬದಲು ಪ್ರಚಾರದ ಸಾಧನವಾಗಿ ಬಳಸಿಕೊಳ್ಳುವ ಉದ್ದೇಶ ಹೊಂದಿತ್ತು ಎಂದು ಪ್ರಿಯಾಂಕಾ ಗಾಂಧಿ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News