ಕೊರೋನದಿಂದ ಅನಾಥರಾದ ಮಕ್ಕಳ ಕಾನೂನುಬಾಹಿರ ದತ್ತು ನಿಲ್ಲಿಸಲು ಸುಪ್ರೀಂ ಕೋರ್ಟ್ ಆಗ್ರಹ

Update: 2021-06-07 18:09 GMT

ಹೊಸದಿಲ್ಲಿ, ಜೂ. 7: ಕೊರೋನ ಸೋಂಕಿನಿಂದ ಹೆತ್ತವರನ್ನು ಕಳೆದುಕೊಂಡು ಅನಾಥರಾದ ಮಕ್ಕಳನ್ನು ಖಾಸಗಿ ವ್ಯಕ್ತಿಗಳು ಹಾಗೂ ಸಂಸ್ಥೆಗಳಿಂದ ಕಾನೂನು ಬಾಹಿರವಾಗಿ ದತ್ತು ಪಡೆಯುವುದನ್ನು ನಿಲ್ಲಿಸುವಂತೆ ಸುಪ್ರೀಂ ಕೋರ್ಟ್ ಸೋಮವಾರ ಆಗ್ರಹಿಸಿದೆ. ಕೊರೋನದಿಂದ ಹೆತ್ತವರನ್ನು ಕಳೆದುಕೊಂಡು ಅನಾಥರಾದ ಮಕ್ಕಳನ್ನು ಖಾಸಗಿ ವ್ಯಕ್ತಿಗಳು ಹಾಗೂ ಸಂಸ್ಥೆಗಳಿಂದ ಕಾನೂನು ಬಾಹಿರವಾಗಿ ದತ್ತು ತೆಗೆದುಕೊಳ್ಳುವ ಕುರಿತು ಹಲವು ದೂರುಗಳು ಬಂದಿವೆ ಎಂದು ರಾಷ್ಟ್ರೀಯ ಮಕ್ಕಳ ಹಕ್ಕು ರಕ್ಷಣಾ ಆಯೋಗ (ಎನ್ಸಿಪಿಸಿಆರ್) ಎಚ್ಚರಿಸಿದ ಬಳಿಕ ಇದರ ಮಧ್ಯೆ ಪ್ರವೇಶಿಸಲು ಸುಪ್ರೀಂ ಕೋರ್ಟ್ ಜೂನ್ 7ರಂದು ಒಪ್ಪಿಕೊಂಡಿದೆ.

ದತ್ತು ಪ್ರಕ್ರಿಯೆಯಲ್ಲಿ ಕುಟುಂಬಗಳಿಗೆ ಹಾಗೂ ಮಕ್ಕಳಿಗೆ ನೆರವು ನೀಡಲು ಬಯಸುತ್ತಿದ್ದೇವೆ ಎಂದು ಪ್ರತಿಪಾದಿಸಿ ಈ ಅನಾಥ ಮಕ್ಕಳ ದತ್ತಾಂಶವನ್ನು ಸಕ್ರಿಯವಾಗಿ ಸಂಗ್ರಹಿಸುವ ಖಾಸಗಿ ವ್ಯಕ್ತಿಗಳು ಹಾಗೂ ಸಂಸ್ಥೆಗಳ ಬಗ್ಗೆ ಹಲವು ದೂರುಗಳನ್ನು ಸ್ವೀಕರಿಸಲಾಗಿದೆ ಎಂದು ಎನ್ಸಿಪಿಸಿಆರ್ ನ್ಯಾಯಮೂರ್ತಿಗಳಾದ ಎಲ್. ನಾಗೇಶ್ವರ ರಾವ್ ಹಾಗೂ ಅನಿರುದ್ಧ ಬೋಸ್ ನೇತೃತ್ವದ ಪೀಠಕ್ಕೆ ಮಾಹಿತಿ ನೀಡಿತು.

‘‘ಮಕ್ಕಳು ದತ್ತು ಸ್ವೀಕಾರಕ್ಕೆ ಲಭ್ಯವಿವೆ ಎಂದು ಸಾಮಾಜಿಕ ಜಾಲ ತಾಣದಲ್ಲಿ ಪೋಸ್ಟ್ಗಳು ಪ್ರಸಾರವಾಗುತ್ತಿವೆ. ಇದು ಸಂಪೂರ್ಣವಾಗಿ ಕಾನೂನು ಬಾಹಿರ ಹಾಗೂ ಬಾಲ ನ್ಯಾಯ ಕಾಯ್ದೆಯ ಉಲ್ಲಂಘನೆ’’ ಎಂದು ಮೂರನೇ ವಾದಿ ಶೋಭಾ ಗುಪ್ತಾ ಪ್ರತಿಪಾದಿಸಿದರು.

‘‘ಬಾಲ ನ್ಯಾಯ ಕಾಯ್ದೆ-2015 ಅಡಿಯಲ್ಲಿ ನೀಡಲಾದ ದತ್ತು ಪ್ರಕ್ರಿಯೆಯನ್ನು ಅನುಸರಿಸಿದ ಹಾಗೂ ಸಂಬಂಧಿತ ಪ್ರಾಧಿಕಾರ ಮಂಜೂರು ಮಾಡಿದ ಅಂತಿಮ ದತ್ತು ಆದೇಶದ ಬಳಿಕ ಕಾನೂನುಬದ್ಧವಾಗಿ ಮಾತ್ರ ಅನಾಥ, ಪರಿತ್ಯಕ್ತ ಮಕ್ಕಳ ದತ್ತು ತೆಗೆದುಕೊಳ್ಳಬೇಕು’’ ಎಂದು ಎನ್ಸಿಪಿಆರ್ ಪರವಾಗಿ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎಂ. ನಟರಾಜ್ ಪ್ರತಿಪಾದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News