ಭೂ ಕಳ್ಳರು ಕಾನೂನಿನ ಆಶ್ರಯ ಪಡೆಯಲು ಸಾಧ್ಯವಿಲ್ಲ: ಸುಪ್ರೀಂಕೋರ್ಟ್

Update: 2021-06-07 18:22 GMT

ಹೊಸದಿಲ್ಲಿ, ಜೂ.7: ಫರೀದಾಬಾದ್ ಜಿಲ್ಲೆಯ ಲಖರ್ಪುರ ಖೋರಿ ಗ್ರಾಮದಲ್ಲಿ ಅರಾವಳಿ ಅರಣ್ಯಪ್ರದೇಶದ ಅಂಚಿನಲ್ಲಿ ನಡೆದಿರುವ ಎಲ್ಲಾ ಒತ್ತುವರಿಗಳನ್ನೂ 6 ವಾರದೊಳಗೆ ತೆಗೆದುಹಾಕುವಂತೆ ಸುಪ್ರೀಂಕೋರ್ಟ್ ಸೋಮವಾರ ಹರ್ಯಾನ ಮತ್ತು ಫರೀದಾಬಾದ್ ನಗರಪಾಲಿಕೆಗಳಿಗೆ ಸೂಚಿಸಿದೆ.

ಒತ್ತುವರಿಗಳನ್ನು ತೆರವುಗೊಳಿಸುವ ಮುನ್ನ, ಅಲ್ಲಿ ವಾಸಿಸುತ್ತಿರುವವರಿಗೆ ಪುನರ್ವಸತಿ ವ್ಯವಸ್ಥೆ ಮಾಡಬೇಕು ಎಂಬ ಅರ್ಜಿದಾರರ ಮನವಿಗೆ ಉತ್ತರಿಸಿದ ನ್ಯಾಯಮೂರ್ತಿಗಳಾದ ಎಎಂ ಕಾನ್ವಿಲ್ಕರ್ ಮತ್ತು ದಿನೇಶ್ ಮಹೇಶ್ವರಿ ಅವರಿದ್ದ ರಜಾಕಾಲೀನ ನ್ಯಾಯಪೀಠ , ಅರಾವಳಿ ಅರಣ್ಯದ ಅಂಚಿನಲ್ಲಿ ಸುಮಾರು 10,00 ವಸತಿಗಳನ್ನು ನಿರ್ಮಿಸಲಾಗಿದೆ. ಭೂಕಳ್ಳರು ಕಾನೂನಿನ ರಕ್ಷಣೆ ಪಡೆಯಲು ಸಾಧ್ಯವಿಲ್ಲ ಎಂದು ಹೇಳಿದೆ.

ಮೊದಲು ಅಕ್ರಮ ಒತ್ತುವರಿ ತೆರವಾಗಲಿ. ಆ ಬಳಿಕ ಅಲ್ಲಿದ್ದವರಿಗೆ ಪುನರ್ವಸತಿ ಒದಗಿಸುವ ಪ್ರಶ್ನೆಯನ್ನು ರಾಜ್ಯ ಸರಕಾರ ನಿರ್ವಹಿಸುತ್ತದೆ  ಎಂದ ನ್ಯಾಯಪೀಠ, ತೆರವು ಕಾರ್ಯಾಚರಣೆಗೆ ಅಗತ್ಯವಿರುವ ಪೊಲೀಸ್ ಬಂದೋಬಸ್ತ್ ಏರ್ಪಡಿಸುವ ಜವಾಬ್ದಾರಿ ಫರೀದಾಬಾದ್ ಪೊಲೀಸ್ ಉಪಾಯುಕ್ತರದ್ದು ಎಂದಿದೆ.

ಒತ್ತುವರಿ ತೆರವುಗೊಳಿಸುವಂತೆ 2020ರ ಫೆಬ್ರವರಿಯಲ್ಲಿ ನೀಡಿದ ಆದೇಶ ಪಾಲನೆಯಾಗದ ಬಗ್ಗೆ ನಗರಪಾಲಿಕೆಗಳು ಉತ್ತರಿಸಬೇಕು. ಅರಣ್ಯಪ್ರದೇಶದ ವಿಷಯದಲ್ಲಿ ಯಾವುದೇ ವಿನಾಯಿತಿ ನೀಡಲಾಗದು. ಕೊರೋನ ಸೋಂಕಿನ ಕಾರಣವನ್ನೂ ನೀಡಬಾರದು  ಎಂದು ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ನಡೆಸಿದ ವಿಚಾರಣೆ ಸಂದರ್ಭ ಸುಪ್ರೀಂಕೋರ್ಟ್ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News