ಯಾರೆಲ್ಲ ಸಾಯುತ್ತಾರೆಂದು ತಿಳಿಯಲು ನಾವೇ ಆಕ್ಸಿಜನ್‌ ನಿಲ್ಲಿಸಿದ್ದೆವು: ಆಸ್ಪತ್ರೆ ಮಾಲಕಿಯ ಆಡಿಯೊ ಕುರಿತು ತನಿಖೆ

Update: 2021-06-08 06:25 GMT
ಸಾಂದರ್ಭಿಕ ಚಿತ್ರ

ಆಗ್ರಾ: ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯ ವಿರುದ್ಧ ತನಿಖೆ ಕೈಗೊಳ್ಳುವುದಾಗಿ ಉತ್ತರಪ್ರದೇಶ ಸರಕಾರ ಮಂಗಳವಾರ ತಿಳಿಸಿದೆ. ಎಪ್ರಿಲ್‌ 27ರಂದು ಆಸ್ಪತ್ರೆಯು ತಾನೇ ಆಕ್ಸಿಜನ್‌ ಪೂರೈಕೆಯನ್ನು ʼಅಣಕು ಕಾರ್ಯಾಚರಣೆʼಯ ಸಲುವಾಗಿ ನಿಲ್ಲಿಸಿದ ಕುರಿತಾದಂತೆ ಆಡಿಯೋ ಒಂದು ವೈರಲ್‌ ಆಗುತ್ತಿರುವ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿದು ಬಂದಿದೆ.

ಆಡಿಯೋದಲ್ಲಿ, "ಮುಖ್ಯಮಂತ್ರಿಗಳಿಗೇ ಆಕ್ಸಿಜನ್‌ ಸಿಗುತ್ತಿಲ್ಲ. ಆದ್ದರಿಂದ ನೀವು ನಿಮ್ಮ ಪೇಷಂಟ್‌ ಗಳನ್ನು ಡಿಸ್ಚಾರ್ಜ್‌ ಮಾಡಿ ಎಂದು ನಮ್ಮೊಂದಿಗೆ ಹೇಳಲಾಯಿತು. ನಾವು ಅವರ ಕುಟುಂಬಸ್ಥರೊಂದಿಗೆ ಮಾತುಕತೆ ಪ್ರಾರಂಭಿಸಿದೆವು. ಕೆಲವರು ನಮ್ಮ ಮಾತು ಕೇಳಿದರು. ಇನ್ನು ಕೆಲವರು ಆಸ್ಪತ್ರೆಯಿಂದ ತೆರಳಲು ಒಪ್ಪಲಿಲ್ಲ. ಆಗ ನಾವು ʼಅಣಕು ಕಾರ್ಯಾಚರಣೆʼ ನಡೆಸಲು ಉದ್ದೇಶಿಸಿದೆವು. ಯಾರೆಲ್ಲ ಬದುಕುತ್ತಾರೆ, ಯಾರೆಲ್ಲ ಸಾಯುತ್ತಾರೆಂದು ತಿಳಿಯಲು ನಾವು ಬೆಳಗ್ಗೆ 7 ಗಂಟೆಗೆ ಕಾರ್ಯಾಚರಣೆ ನಡೆಸಿದೆವು. 5 ನಿಮಿಷ ಆಕ್ಸಿಜನ್‌ ತೆಗೆಯಲಾಯಿತು. 22 ಪೇಷಂಟ್‌ ಗಳನ್ನು ನಾವು ಗುರುತಿಸಿದೆವು. ಅವರು ಸಾಯುತ್ತಾರೆಂದು ತಿಳಿಯಿತು. ಅವರು ನೀಲಿ ಬಣ್ಣಕ್ಕೆ ತಿರುಗಿದ್ದರು" ಎಂದು ಹೇಳಲಾಗಿದೆ.

ಈ ಕುರಿತು ಮಾತನಾಡಿದ ಆಗ್ರಾ ಜಿಲ್ಲಾ ಮ್ಯಾಜಿಸ್ಟ್ರೇಟ್ ಪ್ರಭು ಎನ್‌ ಸಿಂಗ್, "ಆಡಿಯೋದಲ್ಲಿ ಆರೋಪಿಸಿರುವ ದಿನದಂದು ಆಕ್ಸಿಜನ್‌ ಕೊರತೆಯಿಂದ ಒಬ್ಬರೂ ಸಾಯಲಿಲ್ಲ. ಆದರೂ ಈ ಕುರಿತಾದಂತೆ ತನಿಖೆ ನಡೆಸಬೇಕು" ಎಂದು ಹೇಳಿದ್ದಾರೆ. "ಈ ಕುರಿತು ಆಡಿಯೋವನ್ನು ತಪ್ಪಾಗಿ ಅರ್ಥೈಸಲಾಗಿದೆ. ಅಣಕು ಕಾರ್ಯಾಚರಣೆ ಎಂದರೆ ಆಕ್ಸಿಜನ್‌ ಅನ್ನು ತೆಗೆಯುವುದಲ್ಲ. ನಾವು ಆಕ್ಸಿಜನ್‌ ಪೂರೈಕೆ ನಿಲ್ಲಿಸಿರಲಿಲ್ಲ" ಎಂದು ಆಸ್ಪತ್ರೆ ಮಾಲಕ ಜೈನ್‌ ಹೇಳಿದ್ದಾರೆ.

ಈ ಘಟನೆ ಕುರಿತಾದಂತೆ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.‌ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News