ಉಡುಪಿಯ ಉದ್ಯಮಿ ಭಾಸ್ಕರ ಶೆಟ್ಟಿ ಕೊಲೆ ಪ್ರರಣ: ಪತ್ನಿ, ಪುತ್ರ ಸಹಿತ ಮೂವರು ಆರೋಪಿಗಳಿಗೆ ಜೀವಿತಾವಧಿ ಜೈಲು ಶಿಕ್ಷೆ

Update: 2021-06-08 14:40 GMT
ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣದ ಆರೋಪಿಗಳು

ಉಡುಪಿ, ಜೂ.8: ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಉದ್ಯಮಿ, ಉಡುಪಿ ಇಂದ್ರಾಳಿಯ ಭಾಸ್ಕರ್ ಶೆಟ್ಟಿ (52)ಯನ್ನು ಕೊಲೆಗೈದು ಹೋಮಕುಂಡಲದಲ್ಲಿ ಸುಟ್ಟು ಹಾಕಿದ ಪ್ರಕರಣಕ್ಕೆ ಸಂಬಂಧಿಸಿ ಇಂದು ತೀರ್ಪು ಪ್ರಕಟಿಸಿದ ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಭಾಸ್ಕರ್ ಶೆಟ್ಟಿ ಪತ್ನಿ, ಮಗ ಸೇರಿದಂತೆ ಮೂವರು ಆರೋಪಿಗಳಿಗೆ ಜೀವಿತಾವಧಿ ಜೈಲು ಶಿಕ್ಷೆ ವಿಧಿಸಿ ಆದೇಶ ನೀಡಿದೆ.

ಭಾಸ್ಕರ ಶೆಟ್ಟಿಯ ಪತ್ನಿ ರಾಜೇಶ್ವರಿ ಶೆಟ್ಟಿ (53), ಪುತ್ರ ನವನೀತ್ ಶೆಟ್ಟಿ (30) ಹಾಗೂ ನಂದಳಿಕೆಯ ಜ್ಯೋತಿಷಿ ನಿರಂಜನ್ ಭಟ್(30) ಶಿಕ್ಷೆಗೆ ಗುರಿಯಾದ ಆರೋಪಿಗಳು. ಪ್ರಕರಣದ ಸಾಕ್ಷ್ಯನಾಶ ಆರೋಪಿ, ನಿರಂಜನ್ ಭಟ್ ಕಾರು ಚಾಲಕ ರಾಘವೇಂದ್ರನನ್ನು ನ್ಯಾಯಾಲಯ ಖುಲಾಸೆಗೊಳಿಸಿ ಆದೇಶ ನೀಡಿದೆ.

78 ಸಾಕ್ಷಿಗಳ ವಿಚಾರಣೆ

ಪ್ರಕರಣಕ್ಕೆ ಸಂಬಂಧಿಸಿ ಒಟ್ಟು 167 ಸಾಕ್ಷಿಗಳ ಪೈಕಿ 78 ಸಾಕ್ಷಿಗಳನ್ನು ವಿಚಾರಣೆಗೆ ಒಳಪಡಿಸಿ, 220 ದಾಖಲೆಗಳನ್ನು ಪರಿಶೀಲಿಸಲಾಗಿತ್ತು. ಅಂತಿಮ ತೀರ್ಪು ಲಾಕ್‌ ಡೌನ್ ಕಾರಣಕ್ಕೆ ಎರಡು ಬಾರಿ ಮುಂದೂಡಲ್ಪಟ್ಟು ಈ ದಿನಕ್ಕೆ ನಿಗದಿಯಾಗಿತ್ತು. ಅದರಂತೆ ಇಂದು ಬೆಳಗ್ಗೆ 11.30ಕ್ಕೆ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸುಬ್ರಹ್ಮಣ್ಯ ಜೆ.ಎನ್. ಮೂವರು ಆರೋಪಿಗಳನ್ನು ದೋಷಿ ಎಂದು ಘೋಷಿಸಿ, ಮಧ್ಯಾಹ್ನ ಶಿಕ್ಷೆಯ ಪ್ರಮಾಣ ಪ್ರಕಟಿಸುವುದಾಗಿ ತಿಳಿಸಿದರು. ನಂತರ ಮಧ್ಯಾಹ್ನ 12.30ಕ್ಕೆ ಮೂವರು ಆರೋಪಿಗಳಿಗೆ ಜೀವಿತಾವಧಿ ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ನೀಡಿದರು.

ಈ ವೇಳೆ ಆರೋಪಿಗಳಾದ ರಾಜೇಶ್ವರಿ ಶೆಟ್ಟಿ ಹಾಗೂ ರಾಘವೇಂದ್ರ ಹಾಜರಿದ್ದರು. ಬೆಂಗಳೂರು ಜೈಲಿನಲ್ಲಿರುವ ನವನೀತ್ ಶೆಟ್ಟಿ ಹಾಗೂ ನಿರಂಜನ್ ಭಟ್ ವಿಡಿಯೋ ಕಾನ್ಫರೆನ್ಸ್‌ನಲ್ಲಿದ್ದರು. ಇನ್ನೋರ್ವ ಸಾಕ್ಷಿನಾಶ ಆರೋಪಿ ನಿರಂಜನ್ ಭಟ್ ತಂದೆ ಶ್ರೀನಿವಾಸ ಭಟ್ ವಿಚಾರಣೆ ಮಧ್ಯೆ ಅನಾರೋಗ್ಯ ದಿಂದ ಮೃತಪಟ್ಟಿದ್ದಾರೆ. ಪ್ರಾಸಿಕ್ಯೂಶನ್ ಪರವಾಗಿ ವಿಶೇಷ ಸರಕಾರಿ ಅಭಿ ಯೋಜಕ ಶಾಂತರಾಮ್ ಶೆಟ್ಟಿ ವಾದ ಮಂಡಿಸಿದ್ದಾರೆ.

ಆರೋಪಿ ರಾಜೇಶ್ವರಿ ಹಾಗೂ ನವನೀತ್ ಪರ ವಕೀಲ ಪ್ರದೀಪ್ ಕುಮಾರ್ ಎಸ್.ಬಿ. ಹಾಜರಿದ್ದರು. ತೀರ್ಪಿನ ಹಿನ್ನೆಲೆಯಲ್ಲಿ ಕೋರ್ಟ್ ಆವರಣದಲ್ಲಿ ಹೆಚ್ಚುವರಿ ಎಸ್ಪಿ ಕುಮಾರ ಚಂದ್ರ, ಡಿವೈಎಸ್ಪಿ ಶಿವಾನಂದ ನಾಯಕ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು.

ಕೊಲೆ ಪ್ರಕರಣದ ಹಿನ್ನೆಲೆ

ಸೌದಿ ಅರೇಬಿಯಾದಲ್ಲಿ ಉದ್ಯಮಿಯಾಗಿದ್ದ ಭಾಸ್ಕರ್ ಶೆಟ್ಟಿ ಉಡುಪಿಯಲ್ಲಿ ಕೋಟ್ಯಂತರ ರೂ. ವೌಲ್ಯದ ಆಸ್ತಿಯನ್ನು ಹೊಂದಿದ್ದರು. ಆಸ್ತಿ ಹಾಗೂ ಅನೈತಿಕ ಸಂಬಂಧದ ವಿಚಾರದಲ್ಲಿ ಭಾಸ್ಕರ್ ಶೆಟ್ಟಿಯನ್ನು ಕೊಲೆ ಮಾಡಲು ಪತ್ನಿ ರಾಜೇಶ್ವರಿ ಶೆಟ್ಟಿ, ನವನೀತ್ ಶೆಟ್ಟಿ ಹಾಗೂ ನಿರಂಜನ್ ಭಟ್ ಸಂಚು ರೂಪಿಸಿದರು. 2016ರ ಜು. 28ರಂದು ಮಧ್ಯಾಹ್ನ 3 ಗಂಟೆಗೆ ಮನೆಯಲ್ಲಿ ಸ್ನಾನ ಮಾಡಿ ಬಾತ್‌ರೂಮಿನಿಂದ ಹೊರಗಡೆ ಬರುತ್ತಿದ್ದ ಭಾಸ್ಕರ್ ಶೆಟ್ಟಿಯ ಮುಖದ ಮೇಲೆ ಪೆಪ್ಪರ್ ಸ್ಪ್ರೆ ಹಾಕಿದ ಈ ಮೂವರು, ಕಬ್ಬಿಣದ ರಾಡಿನಿಂದ ತಲೆಯ ಮೇಲೆ ಹೊಡೆದು ನಂತರ ಕೀಟನಾಶಕ ಕುಡಿಸಿ ಪ್ರಜ್ಞೆ ತಪ್ಪುವಂತೆ ಮಾಡಿದರು.

ಬಳಿಕ ಅವರನ್ನು ತಮ್ಮ ಕಾರಿನ ಡಿಕ್ಕಿಯಲ್ಲಿ ಹಾಕಿ ನಂದಳಿಕೆಯಲ್ಲಿರುವ ನಿರಂಜನ ಭಟ್ ಮನೆಗೆ ತೆಗೆದುಕೊಂಡು ಹೋದರು. ಅಲ್ಲಿ ಯಾಗ ಶಾಲೆಯಲ್ಲಿ ಕಲ್ಲುಗಳಿಂದ ಹೋಮ ಕುಂಡ ರಚಿಸಿ ಆ ಕುಂಡದಲ್ಲಿ ಭಾಸ್ಕರ್ ಶೆಟ್ಟಿಯ ದೇಹವನ್ನು ಇಟ್ಟು ಕರ್ಪೂರ, ತುಪ್ಪ, ಪೆಟ್ರೋಲ್‌ನಿಂದ ಸುಟ್ಟರು. ಮುಂದೆ ಎಲ್ಲ ಸಾಕ್ಷ್ಯಾಧಾರಗಳನ್ನು ನಾಶ ಮಾಡುವುದಕ್ಕಾಗಿ ನಿರಂಜನ ಭಟ್ ಹಾಗೂ ಆತನ ಕಾರು ಚಾಲಕ ರಾಘವೇಂದ್ರ ಯಾಗ ಶಾಲೆಯನ್ನು ನೀರಿನಿಂದ ತೊಳೆದು ಮೂಳೆಗಳನ್ನು ಹಾಗೂ ಹೋಮಕ್ಕೆ ಉಪಯೋಗಿಸಿದ ಕಲ್ಲುಗಳನ್ನು ನದಿಯಲ್ಲಿ ಎಸೆದಿದ್ದರು. ನಿರಂಜನ್ ಭಟ್ ತಂದೆ ಶ್ರೀನಿವಾಸ ಭಟ್ ಸುಟ್ಟ ಜಾಗದ ಟೈಲ್ಸ್‌ಗಳನ್ನು ತೆಗೆದು ಹೊಸ ಟೈಲ್ಸ್‌ಗಳನ್ನು ಹಾಕಿದ್ದರು.

ತಾಯಿಯಿಂದ ದೂರು

ಜು.29ರಂದು ಭಾಸ್ಕರ್ ಶೆಟ್ಟಿ ತಾಯಿ ಗುಲಾಬಿ ಶೆಡ್ತಿ, ತನ್ನ ಮಗ ಜು.28ರಿಂದ ನಾಪತ್ತೆ ಯಾಗಿದ್ದಾನೆ ಎಂಬುದಾಗಿ ಮಣಿಪಾಲ ಪೊಲೀಸ್ ಠಾಣೆಯಲ್ಲಿ ದೂರು ನೀಡಿದರು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರಿಂದ ಈ ಕೊಲೆಗೆ ಬೆಳಕಿಗೆ ಬಂತು. ಆ.7ರಂದು ಪತ್ನಿ ರಾಜೇಶ್ವರಿ ಹಾಗೂ ಮಗ ನವನೀತ್‌ನನ್ನು ಮತ್ತು ಆ.8ರಂದು ನಿರಂಜನ್ ಭಟ್‌ನನ್ನು ಪೊಲೀಸರು ಬಂಧಿಸಿದರು. ಅದೇ ದಿನ ರಾತ್ರಿ ನಿರಂಜನ್ ಭಟ್ ಆತ್ಮಹತ್ಯೆ ಯತ್ನಿಸಿ ಆಸ್ಪತ್ರೆಗೆ ದಾಖಲಾಗಿದ್ದನು.

ಸಂಘ ಸಂಸ್ಥೆಗಳ ಒತ್ತಾಯದ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು ಸರಕಾರ ಆ.16 ರಂದು ಸಿಐಡಿ ತನಿಖೆಗೆ ಒಪ್ಪಿಸಿತು. ಸಿಐಡಿ ಪೊಲೀಸರು ಮೂರು ತಿಂಗಳ ಕಾಲ ತನಿಖೆ ನಡೆಸಿ ನ.2ರಂದು ಪ್ರಾಥಮಿಕ ಹಂತದ 1300ಪುಟಗಳ ಚಾರ್ಜ್‌ಶೀಟ್ ಮತ್ತು 2017ರ ಜ.25ರಂದು 101 ಪುಟಗಳ ಹೆಚ್ಚುವರಿ ಚಾರ್ಜ್‌ಶೀಟ್‌ನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು.

2016ರ ಅ.1ರಂದು ಶ್ರೀನಿವಾಸ ಭಟ್ ಹಾಗೂ ರಾಘವೇಂದ್ರ ಜಾಮೀನು ಪಡೆದಿದ್ದರು. 2018ರ ನ.5ರಂದು ಸುಪ್ರೀಂ ಕೋರ್ಟಿನ ನಿರ್ದೇಶನದಂತೆ ಜಿಲ್ಲಾ ನ್ಯಾಯಾಲಯವು ರಾಜೇಶ್ವರಿಗೆ ಶರ್ತಬದ್ಧ ಜಾಮೀನು ಮಂಜೂರು ಮಾಡಿತ್ತು.

ತೀರ್ಪು ಹೊರಬರುತ್ತಿದ್ದಂತೆ ಕಣ್ಣೀರಿಟ್ಟ ರಾಜೇಶ್ವರಿ !

ನ್ಯಾಯಾಧೀಶರು ತೀರ್ಪು ಪ್ರಕಟಿಸುತ್ತಿದ್ದಂತೆ ಕೋರ್ಟ್‌ನಲ್ಲಿ ಹಾಜರಿದ್ದ ಪ್ರಮುಖ ಆರೋಪಿ ರಾಜೇಶ್ವರಿ ಶೆಟ್ಟಿ ಕಣ್ಣೀರಿಟ್ಟಳು.
ಇದಕ್ಕೂ ಮೊದಲು ರಾಜೇಶ್ವರಿ, ‘ನಾನು ಯಾವುದೇ ತಪ್ಪು ಮಾಡಿಲ್ಲ, ನನಗೆ ಶಿಕ್ಷೆ ನೀಡುವುದು ಸರಿಯಲ್ಲ ಎಂದು ನ್ಯಾಯಾಧೀಶರಲ್ಲಿ ಮನವಿ ಮಾಡಿದಳೆಂದು ತಿಳಿದುಬಂದಿದೆ. ನ್ಯಾಯಾಲಯ ಆದೇಶ ನೀಡುತ್ತಿದ್ದಂತೆಯೇ ಕೋರ್ಟ್‌ನಲ್ಲಿ ಹಾಜರಿದ್ದ ರಾಜೇಶ್ವರಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು. ಬಳಿಕ ಆಕೆಯನ್ನು ಬಿಗಿ ಪೊಲೀಸ್ ಭದ್ರತೆಯಲ್ಲಿ ಬೆಂಗಳೂರು ಜೈಲಿಗೆ ಕರೆದುಕೊಂಡು ಹೋಗಲಾಯಿತು.

ಪ್ರಕರಣದ ಪ್ರಮುಖ ಅಂಶಗಳು

ಆರಂಭದಲ್ಲಿ ಆಗಿನ ಮಣಿಪಾಲ ಪೊಲೀಸ್ ನಿರೀಕ್ಷಕ ಎಸ್.ವಿ. ಗಿರೀಶ್, ನಂತರ ಕಾರ್ಕಳ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕಿ ಡಾ. ಸುಮನಾ ಹಾಗೂ ಸಿಓಡಿ ತನಿಖೆ ನಡೆಸಿದ ಬಳಿಕ ಸಿಓಡಿ ಡಿವೈಎಸ್ಪಿ ಎಸ್.ಟಿ. ಚಂದ್ರಶೇಖರ್ ಹೀಗೆ ಈ ಪ್ರಕರಣದಲ್ಲಿ ಮೂವರು ತನಿಖಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದರು.

ತನ್ನ ಜೀಪಿನ ಮುಂದಿನ ಸೀಟಿನಲ್ಲಿ ಆರೋಪಿ ನವನೀತ್‌ನನ್ನು ಕುಳ್ಳಿರಿಸಿ ಕರೆದುಕೊಂಡು ಹೋಗಿದ್ದ ಆರೋಪದಲ್ಲಿ ತನಿಖಾಧಿಕಾರಿ ಪೊಲೀಸ್ ನಿರೀಕ್ಷಕ ಗಿರೀಶ್ ವಿರುದ್ಧ ಇಲಾಖಾ ವಿಚಾರಣೆ ನಡೆಸಿ, ಬಳಿಕ ತನಿಖಾಧಿಕಾರಿಯನ್ನು ಬದಲಾಯಿಸಾಗಿತ್ತು.

ಭಾಸ್ಕರ್ ಶೆಟ್ಟಿ ತಾಯಿ ಗುಲಾಬಿ ಶೆಡ್ತಿ ಮನವಿ ಮೇರೆಗೆ ಈ ಪ್ರಕರಣದಲ್ಲಿ ವಾದ ಮಂಡಿಸಲು ಸರಕಾರ ವಿಶೇಷ ಸರಕಾರಿ ಅಭಿಯೋಜಕರಾಗಿ ಶಾಂತಾ ರಾಮ್ ಶೆಟ್ಟಿ ಅವರನ್ನು ನೇಮಕ ಮಾಡಿತು. ಇದರ ವಿರುದ್ಧ ರಾಜೇಶ್ವರಿ ಹೈಕೋರ್ಟ್‌ನಲ್ಲಿ ಎರಡು ಬಾರಿ ತಡೆಯಾಜ್ಞೆ ತಂದಿದ್ದರು.

ಪ್ರಕರಣದ ಪ್ರಮುಖ ಮೂವರು ಆರೋಪಿಗಳನ್ನು ಕೇವಲ ಒಂದೂವರೆ ವರ್ಷ ಅವಧಿಯಲ್ಲಿ ವಿವಿಧ ಕಾರಣಗಳಿಗಾಗಿ ರಾಜ್ಯದ ಒಟ್ಟು ನಾಲ್ಕು ಜೈಲು ಗಳಿಗೆ ಸ್ಥಳಾಂತರಿಸಿರುವ ಪ್ರಸಂಗ ಎದುರಾಗಿತ್ತು.

ಜೈಲಿನಲ್ಲಿದ್ದ ಆರೋಪಿಗಳು ಕೋರ್ಟ್‌ಗೆ ಹಾಜರಾಗಲು ಇನ್ನೋವಾ ಕಾರಿನ ವ್ಯವಸ್ಥೆ ಕಲ್ಪಿಸಿ ರಾಜಾತಿಥ್ಯ ನೀಡಿರುವ ಎಎಸ್ಸೈ ಸಹಿತ ಮೂವರು ಪೊಲೀಸ್ ಸಿಬ್ಬಂದಿಗಳನ್ನು ಎಸ್ಪಿ ಅಮಾನತುಗೊಳಿಸಿದ್ದರು.

''ಈ ಪ್ರಕರಣದಲ್ಲಿ ಪ್ರತ್ಯಕ್ಷ ಸಾಕ್ಷಿಗಳಿರಲಿಲ್ಲ. ಆದುದರಿಂದ ಸಾಂಧರ್ಬಿಕ ಸಾಕ್ಷಿಗಳೇ ಈ ಪ್ರಕರಣದ ಪ್ರಮುಖ ಅಂಶವಾಗಿತ್ತು. ನದಿಯಲ್ಲಿ ಸಿಕ್ಕಿದ ಮೂಳೆ ಗಳಿಗೂ ಭಾಸ್ಕರ್ ತಾಯಿ ಮತ್ತು ತಮ್ಮನ ಡಿಎನ್‌ಎಗೂ ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ ನಡೆಸಿದ ಪರೀಕ್ಷೆಯಲ್ಲಿ ಹೊಂದಿಕೆಯಾಗಿತ್ತು. ಹೀಗೆ ಸಾಕಷ್ಟು ಪುರಾವೆಗಳು ಈ ಪ್ರಕರಣಕ್ಕೆ ಬೆಂಬಲ ಕೊಟ್ಟಿವೆ''.

-ಶಾಂತಾರಾಮ್ ಶೆಟ್ಟಿ, ವಿಶೇಷ ಸರಕಾರಿ ಅಭಿಯೋಜಕರು

''ಈ ಪ್ರಕರಣಕ್ಕೆ ಸಂಬಂಧಿಸಿ ನೀಡಲಾದ ದೂರಿನಲ್ಲಿರುವುದು ಎಲ್ಲವೂ ಆರೋಪಗಳು ಸಂಪೂರ್ಣ ಸುಳ್ಳು. ಇದರಲ್ಲಿ ಯಾವುದೇ ಪ್ರತ್ಯಕ್ಷ ಸಾಕ್ಷಗಳಿಲ್ಲ. ನಾವು ಇಂದಿನ ತೀರ್ಪಿನ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟು ಕೊಂಡಿದ್ದೆವು. ಇದರ ವಿರುದ್ಧ ನಾವು ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸುತ್ತೇವೆ. ಮುಂದೆ ನಮ್ಮ ಪರ ತೀರ್ಪು ಬರುವ ವಿಶ್ವಾಸ ಇದೆ''.

-ಪ್ರದೀಪ್ ಕುಮಾರ್, ಆರೋಪಿ ಪರ ವಕೀಲರು

''ಈ ಪ್ರಕರಣದಲ್ಲಿ ಆರೋಪಿಗಳಿಗೆ ಶಿಕ್ಷೆಯಾಗಬೇಕು ಮತ್ತು ಮುಖ್ಯವಾಗಿ ರಾಜೇಶ್ವರಿ ಜೈಲಿಗೆ ಹೋಗಬೇಕೆಂಬುದು ನಮ್ಮ ಆಶಯವಾಗಿತ್ತು. ಅದರಂತೆ ನ್ಯಾಯಾಲಯ ತೀರ್ಪು ನೀಡಿದೆ. ಇದರಿಂದ ನಮಗೆ ಕಾನೂನಿನ ಮೇಲೆ ಸಾಕಷ್ಟು ನಂಬಿಕೆ ಬಂದಿದೆ. ನಮಗೆ ಅವರ ಆಸ್ತಿ ಮೇಲೆ ಯಾವುದೇ ಆಸೆ ಇಲ್ಲ. ಇಂತಹ ದುರಂತ ಅಂತ್ಯ ಯಾವುದೇ ಕುಟಂಬದಲ್ಲಿಯೂ ನಡೆಯಬಾರದು. ಅವರ ತಾಯಿ ಸಾಕಷ್ಟು ನೋವು ಅನುಭವಿಸಿದ್ದಾರೆ''.

-ಭಾಸ್ಕರ್ ಶೆಟ್ಟಿ ಸಹೋದರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News