ದತ್ತಾಂಶ ರಕ್ಷಣಾ ಮಸೂದೆ: ಕರಡು ದೊರಕಿಲ್ಲ ಎಂದು ಸಮಿತಿ ಸದಸ್ಯರು ದೂರಿದ ನಂತರ ಯು-ಟರ್ನ್ ಹೊಡೆದ ರವಿಶಂಕರ್‌ ಪ್ರಸಾದ್

Update: 2021-06-08 10:09 GMT

ಹೊಸದಿಲ್ಲಿ: ಖಾಸಗಿ ದತ್ತಾಂಶ ರಕ್ಷಣಾ ಕಾಯಿದೆಯ ಕರಡನ್ನು ಜಂಟಿ ಸಂಸದೀಯ ಸಮಿತಿ ಇನ್ನಷ್ಟೇ ಸಲ್ಲಿಸಬೇಕಿದೆ ಎಂದು ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ರವಿ ಶಂಕರ್ ಪ್ರಸಾದ್ ಹೇಳಿದ್ದಾರೆ. ಸಮಿತಿ ಸದಸ್ಯರು ಕರಡನ್ನು ಇನ್ನಷ್ಟೇ ನೋಡಬೇಕಿದೆ ಎಂದು ಕಾಂಗ್ರೆಸ್ ನಾಯಕ ಜೈರಾಂ ರಮೇಶ್ ಹೇಳಿದ ನಂತರ ಕೇಂದ್ರ ಸಚಿವರ ಮೇಲಿನ ಸ್ಪಷ್ಟೀಕರಣ ಬಂದಿದೆ.

ಜನರ ಖಾಸಗಿ ಮಾಹಿತಿಗಳನ್ನು ಅವರ ಬಹಿರಂಗ ಅನುಮತಿಯಿಲ್ಲದೆ ಬಳಸುವುದನ್ನು ನಿರ್ಬಂಧಿಸುವ ಪ್ರಸ್ತಾಪವನ್ನು ಕರಡು  ಮಸೂದೆ ಹೊಂದಿದೆ. "ಸಮಿತಿ ತನ್ನ ವರದಿಯನ್ನು ನೀಡಿದೆ, ಅವರು ಒಳ್ಳೆಯ ಕೆಲಸ ಮಾಡಿದ್ದಾರೆ,  ಕೋವಿಡ್ ಸಮಸ್ಯೆ ಕಡಿಮೆಯಾದ ನಂತರ ಮುಂದಿನ ಅಧಿವೇಶನದಲ್ಲಿ ಅದನ್ನು ಮಂಡಿಸುವ ಉದ್ದೇಶವಿದೆ" ಎಂದು ಸಚಿವರು ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ ನಂತರ ವಿವಾದ ಉಂಟಾಗಿತ್ತು.

ಇದಕ್ಕೆ ಪ್ರತಿಕ್ರಿಯಿಸಿದ್ದ ಜೈರಾಂ ರಮೇಶ್ "ನನಗೆ ಅಚ್ಚರಿಯಾಗಿದೆ, ಸಮಿತಿ ಅಧ್ಯಕ್ಷೆ ನನಗೆ ಮಾರ್ಚ್ 8ರಂದು ಮಾಹಿತಿ ನೀಡಿ ಕರಡು ವರದಿಯನ್ನು  ಸದಸ್ಯರ ಪ್ರತಿಕ್ರಿಯೆಗಾಗಿ ನೀಡಲಾಗುವುದು ಎಂದಿದ್ದರು. ನಾವು ಅದಕ್ಕಾಗಿ ಕಾಯುತ್ತಿದ್ದೇವೆ," ಎಂದಿದ್ದರು.

ಇದರ ನಂತರ ಪ್ರತಿಕ್ರಿಯಿಸಿದ ಸಚಿವರು ವರದಿ ಇನ್ನಷ್ಟೇ ಅಂತಿಮಗೊಳಿಸಬೇಕಿದೆ ಎಂದಿದ್ದಾರೆ.

ಜೈರಾಂ ರಮೇಶ್ ಹೊರತಾಗಿ  ಸಮಿತಿಯ ಕೆಲ ಇತರ ಸದಸ್ಯರೂ ಸಚಿವರ ಹೇಳಿಕೆಗೆ ಆಕ್ಷೇಪಿಸಿದ್ದರು. ಸಮಿತಿ ಸದಸ್ಯ ಮನೀಶ್ ತಿವಾರಿ ಅವರು ಕೂಡ ವರದಿ ಅಂತಿಮಗೊಳಿಸಲು ಆಗುತ್ತಿರುವ ವಿಳಂಬವನ್ನು ಟೀಕಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News