×
Ad

ನೂತನ ವಿಶೇಷ ಕರ್ತವ್ಯಾಧಿಕಾರಿಯನ್ನು ನೇಮಿಸಿದ ಮಧ್ಯಪ್ರದೇಶ ಸಿಎಂ: ಆರೆಸ್ಸೆಸ್‌, ಬಿಜೆಪಿಗರಿಂದಲೇ ವ್ಯಾಪಕ ವಿರೋಧ

Update: 2021-06-08 17:20 IST
Photo: Twitter

ಭೋಪಾಲ್: ಮಧ್ಯ ಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ತಮ್ಮ ವಿಶೇಷ ಕರ್ತವ್ಯಾಧಿಕಾರಿಯನ್ನಾಗಿ ತುಷಾರ್ ಪಾಂಚಾಲ್ ಅವರನ್ನು ನೇಮಿಸಿದ ಮರುದಿನ ಹಲವು ಬಿಜೆಪಿ, ಆರೆಸ್ಸೆಸ್ ನಾಯಕರು ಮತ್ತು ಬೆಂಬಲಿಗರು ಟ್ವಿಟ್ಟರ್ ಅಭಿಯಾನವೊಂದನ್ನು ನಡೆಸಿ ಸೀಎಂ ತಮ್ಮ ನಿರ್ಧಾರ ಮರುಪರಿಶೀಲಿಸಬೇಕೆಂದು ಆಗ್ರಹಿಸಿದ್ದಾರೆ. ಇದಕ್ಕೆ ಕಾರಣ  ಪಾಂಚಾಲ್ ಅವರ ಹಿಂದಿನ ʼಹಿಂದು ವಿರೋಧಿ' ಹಾಗೂ ಮೋದಿ ಸರಕಾರವನ್ನು ಟೀಕಿಸುವ ಟ್ವೀಟ್‍ಗಳಾಗಿವೆ. ಚೌಹಾಣ್ ಅವರಿಗೆ ಪಾಂಚಾಲ್ ಅವರಂತಹ ʼಮೋದಿ ದ್ವೇಷಿ' ಬೇಕೇ ಎಂದು ಹಲವು ಮಂದಿ ಪ್ರಶ್ನಿಸಿದ್ದಾರೆ.

"ಸ್ನೇಹಿತರೇ ನಿಮ್ಮಲ್ಲಿ ಹಲವರು ನನ್ನನ್ನು ಪರದೆಯ ಹಿಂದಿನ ವ್ಯಕ್ತಿಯಾಗಿ ತಿಳಿದಿದ್ದೀರಿ. ನಾನು 2001ರಿಂದ ಹಲವಾರು ಸಿಎಂಗಳು ಹಾಗೂ ರಾಜಕೀಯ ನಾಯಕರೊಂದಿಗೆ ನಿಕಟವಾಗಿ ಕೆಲಸ ಮಾಡಿದ್ದೇನೆ, ಇಂದು ನನ್ನ ಅದೃಷ್ಟ ನನ್ನನ್ನು ಮಧ್ಯ ಪ್ರದೇಶ ಸಿಎಂ ಅವರ ಕಚೇರಿಯೊಳಗೆ ಕೂರಿಸಿದೆ. ನನಗೆ ಶುಭ ಹಾರೈಸಿ" ಎಂದು ಪಾಂಚಾಲ್ ಸೋಮವಾರ ಟ್ವೀಟ್ ಮಾಡಿದ್ದರು.

ಇದರ ಬೆನ್ನಲ್ಲೇ ದಿಲ್ಲಿ ಬಿಜೆಪಿ ವಕ್ತಾರ ತಜೀಂದರ್ ಬಗ್ಗಾ ಅವರು ಪಾಂಚಾಲ್ ಅವರ ಹಳೆ ಟ್ವೀಟ್‍ನ ಸ್ಕ್ರೀನ್ ಶಾಟ್ ಪೋಸ್ಟ್ ಮಾಡಿ ಇಂತಹ ಜನರು ನಿಮಗೆ ಬೇಕೇ ಎಂದು ಚೌಹಾಣ್ ಅವರನ್ನು ಪ್ರಶ್ನಿಸಿದ್ದಾರೆ.

ಆರೆಸ್ಸೆಸ್ ನ ದಿಲ್ಲಿ ರಾಜ್ಯ ಕಾರ್ಯಕಾರಿ ಸದಸ್ಯ ರಾಜೀವ್ ತುಲಿ ಕೂಡ ಪಾಂಚಾಲ್  ಅವರ ಹಳೆ ಟ್ವೀಟ್ ಪೋಸ್ಟ್ ಮಾಡಿ ಮಧ್ಯ ಪ್ರದೇಶದಲ್ಲಿ ನಮ್ಮ ಸಿದ್ಧಾಂತದ ಹಲವಾರು ಖ್ಯಾತ ಪತ್ರಕರ್ತರಿದ್ದಾರೆ. ಅವರೊಬ್ಬರು ಯಾಕಾಗಬಾರದು?" ಎಂದು ಪ್ರಶ್ನಿಸಿದ್ದಾರೆ.

ತಮ್ಮ ವಿರುದ್ಧ ಕೇಳುತ್ತಿರುವ ಅಪಸ್ವರಗಳ ಕುರಿತು ಪಾಂಚಾಲ್ ಪ್ರತಿಕ್ರಿಯಿಸಿಲ್ಲ.

2018ರ ಚುನಾವಣೆ ವೇಳೆ ಪಾಂಚಾಲ್ ಅವರ ತಂಡವೇ ಸಿಎಂ ಅವರ ಸೋಶಿಯಲ್ ಮೀಡಿಯಾ ನಿರ್ವಹಿಸಿತ್ತು. ಇದೀಗ ಸಿಎಂ ಅವರ ಇಮೇಜ್ ವೃದ್ಧಿಸಲು ಅವರನ್ನು ವಿಶೇಷ ಕರ್ತವ್ಯಾಧಿಕಾರಿಯನ್ನಾಗಿ ನೇಮಿಸಲಾಗಿದೆ ಎಂದು ಹಿರಿಯ ಬಿಜೆಪಿ ನಾಯಕರೊಬ್ಬರು ಪ್ರತಿಕ್ರಿಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News