ಗ್ರಾ.ಪಂ. ಕಾಮಗಾರಿ ಹಿಂದೆ ಶಾಂತಿ ಭಂಗದ ಉದ್ದೇಶ: ಶಕುಂತಳಾ ಶೆಟ್ಟಿ

Update: 2021-06-09 09:35 GMT

ಉಪ್ಪಿನಂಗಡಿ: ಸರ್ವ ಧರ್ಮೀಯರ ಉಪಯೋಗಕ್ಕೆಂದು ಸಾರ್ವಜನಿಕರು ಕಾನೂನು ಹೋರಾಟದ ಮೂಲಕ 34 ನೆಕ್ಕಿಲಾಡಿ ಗ್ರಾಮದ ಮೈಂದಡ್ಕದಲ್ಲಿ ಪಡೆದ ಸಾರ್ವಜನಿಕ ಮೈದಾನವನ್ನು ಸ್ಥಳೀಯ ಗ್ರಾ.ಪಂ. ಆಡಳಿತವು ತನ್ನ ಸ್ವಾಧೀನಕ್ಕೆ ತೆಗೆದುಕೊಳ್ಳದಿದ್ದರೂ, ಆ ಪರಿಸರದಲ್ಲಿ  ಶಾಂತಿ- ಸೌಹಾರ್ದತೆಯ ವಿರುದ್ಧ ಹೋಗಿ ಯಾರಿಗೂ ಉಪಯೋಗಕ್ಕೆ ಬಾರದಂತೆ ಮಾಡಿದೆ. ಈ ಮೈದಾನದ ಪ್ರವೇಶ ದ್ವಾರವನ್ನು ಗ್ರಾ.ಪಂ. ಬಂದ್ ಮಾಡಿ ಸುತ್ತಲೂ ಅಗಲು (ಅಗರು) ತೆಗೆಯುವ ಕಾಮಗಾರಿಯ ಹಿಂದೆ ಪರಿಸರದಲ್ಲಿ ಶಾಂತಿ ಭಂಗ ಉಂಟು ಮಾಡುವ ಉದ್ದೇಶ ಗೋಚರಿಸುತ್ತಿದೆ. ಗ್ರಾ.ಪಂ. ಈ ನಡೆಯನ್ನು ತೀವ್ರವಾಗಿ ಖಂಡಿಸುವುದಾಗಿ ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ ತಿಳಿಸಿದರು.

ಮೈಂದಡ್ಕ ಮೈದಾನದ ಸುತ್ತ 34 ನೆಕ್ಕಿಲಾಡಿ ಗ್ರಾ.ಪಂ. ಅಗಲು (ಅಗರು) ತೋಡಿದ ಕಾಮಗಾರಿಯನ್ನು ಜೂ.9ರಂದು ವೀಕ್ಷಿಸಿದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು,  ಸುತ್ತಲೂ ಕಾಡು- ಗುಡ್ಡಗಳಿಂದಾವೃತವಾದ ಉತ್ತಮ ಹಸಿರ ಪರಿಸರದಲ್ಲಿ 55 ಸೆಂಟ್ಸ್ ಜಾಗವು ಸಾರ್ವಜನಿಕರ ಕಾನೂನು ಹೋರಾಟದ ಮೂಲಕ ಸರಕಾರಕ್ಕೆ ಸಿಕ್ಕಿದೆ. ಇದು ಕಂದಾಯ ಇಲಾಖೆಯ ವಶದಲ್ಲಿದ್ದು, ಈ ಗ್ರಾಮದ ಸರ್ವರ ಆಸ್ತಿ. ಆದರೆ 34 ನೆಕ್ಕಿಲಾಡಿಯ ಈಗಿನ ಆಡಳಿತ ಮಾತ್ರ ಏಕಾಏಕಿ ಮೈದಾನದ ಸುತ್ತಲೂ ಅಗಲು ತೆಗೆಯುವ ಮೂಲಕ ಒಂದೆಡೆ ಮೈದಾನವನ್ನು ಹಾಳುಗಡೆವಿದೆಯಲ್ಲದೆ, ಪರಿಸರದಲ್ಲಿದ್ದ ಶಾಂತಿ- ಸೌಹಾರ್ದತೆಗೆ ಧಕ್ಕೆ ತರಲು ಹೊರಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಈ ಮೈದಾನದ ಬಳಿಯೇ ಕ್ರೈಸ್ತ ದಫನ ಭೂಮಿಯಿದೆ. ಅಲ್ಲಿ ಮರಣ ಗಳಾದಾಗ ಅಲ್ಲಿಗೆ ಬರುವವರು ತಮ್ಮ ವಾಹನಗಳನ್ನು ಮೈದಾನದಲ್ಲಿ ನಿಲ್ಲಿಸುತ್ತಿದ್ದರು. ಕ್ರೈಸ್ತ ಧರ್ಮದವರು ಅಲ್ಲಿ ವಾಹನವನ್ನಿಡ ಬಾರದು ಎಂಬುದನ್ನೇ ಮೂಲ ಉದ್ದೇಶವನ್ನಿಟ್ಟುಕೊಂಡು ಇದೀಗ ಅಗಲು ನಿರ್ಮಿಸಿ ಮೈದಾನದ ಪ್ರವೇಶ ದ್ವಾರವನ್ನೇ ಗ್ರಾ.ಪಂ. ಬಂದ್ ಮಾಡಿರುವುದು ನ್ಯಾಯವೇ? ಇಲ್ಲಿ ದಿನವೂ ಮರಣವನ್ನು ತಂದು ದಫನ ಮಾಡುವುದಿಲ್ಲ. ಯಾವಗಾಲಾದರೊಮ್ಮೆ ಅವರು ಅದರ ಉಪಯೋಗ ಪಡೆಯುತ್ತಿದ್ದರು. ಆದರೆ ಅದಕ್ಕೂ ಅಡ್ಡಿ ಮಾಡಲು ಮುಂದಾದ ಗ್ರಾ.ಪಂ.ನ ನಿಲುವಿಗೆ ಏನೇನಲ್ಲಿ ಎಂದು ಅರ್ಥವಾಗುತ್ತಿಲ್ಲ. ವ್ಯಕ್ತಿಯನ್ನು ನೋಡದೇ ಪಕ್ಷ ನೋಡಿ ಓಟು ಕೊಟ್ಟಿದ್ದರ ಪರಿಣಾಮವಿದು. ಅದನ್ನು ಇಂದು ಜನ ಅನುಭವಿಸುತ್ತಿ ದ್ದಾರೆ ಎಂದರಲ್ಲದೆ, 93ರ ಪಂಚಾಯತ್ ರಾಜ್ ಕಾಯ್ದೆ ಆ್ಯಕ್ಟ್‍ನಲ್ಲಿ ಮೃತರಾದವರ ಅಂತಿಮ ಯಾತ್ರೆಗೆ ಸ್ಮಶಾನಕ್ಕೆ ಬರುವವರಿಗೆ ಗ್ರಾ.ಪಂ. ನೆರಳು ಮಾಡಿಕೊಡುವುದು ಗ್ರಾ.ಪಂ.ನ ಕರ್ತವ್ಯ ಎಂದಿದೆ. ಆದರೆ ಗ್ರಾ.ಪಂ. ಸ್ಮಶಾನದಲ್ಲಿ ನೆರಳು ಮಾಡಿ ಕೊಡುವುದು ಬಿಡಿ.  ಮೈದಾನದಲ್ಲಿರುವ ಮರದಡಿಯ ಪ್ರಾಕೃತಿಕ ನೆರಳನ್ನು ಅನುಭವಿಸದಂತೆ ಅವರನ್ನು ಗ್ರಾ.ಪಂ. ಇದೀಗ ನಿರ್ಬಂಧಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಚರಂಡಿಯೆಂದರೆ ಒಪ್ಪಲು ಸಾಧ್ಯವಿಲ್ಲ: ಗ್ರಾ.ಪಂ. ಈಗ ಇದು ಮೈದಾನದ ಸುತ್ತ ಚರಂಡಿ ಕಾಮಗಾರಿ ನಡೆಸಿದ್ದೇವೆ ಎಂದು ಹೇಳಿದರೆ ಅದನ್ನು ಒಪ್ಪಲು ಸಾಧ್ಯವಿಲ್ಲ. ಅದನ್ನು ಚರಂಡಿಯೋ ಅಥವಾ ತೋಡು ಎನ್ನಬೇಕೇ ಗೊತ್ತಾಗುತ್ತಿಲ್ಲ. ಮೈದಾನದ ಎರಡು ಸುತ್ತ ಜೆಸಿಬಿಯಿಂದ ತೋಡಿನಂತೆ ಮಾಡಿ ಅದರ ಮಣ್ಣನ್ನು ಎತ್ತರದಲ್ಲಿ ಮೈದಾನಕ್ಕೆ ಹಾಕಲಾಗಿದೆ. ಈ ತೋಡಿನ ಕೆಳ ಭಾಗ ಕೂಡ ಸಮತಟ್ಟಾಗಿರದೆ ಏರು ದಿಬ್ಬಗಳಿಂದ ಕೂಡಿದೆ. ಇಲ್ಲಿ ಸರಾಗವಾಗಿ ನೀರು ಹರಿದು ಹೋಗಲು ಸಾಧ್ಯವೇ ಇಲ್ಲ. ಮೈದಾನದ ಇನ್ನೊಂದು ಬದಿ ಅರಣ್ಯ ಇಲಾಖೆಯ ಜಾಗವನ್ನು ಸಮತಟ್ಟುಗೊಳಿಸಿ, ಮೈದಾನಕ್ಕೆ ಎತ್ತರಕ್ಕೆ ಮಣ್ಣು ರಾಶಿ ಹಾಕಲಾ ಗಿದೆ. ಇಲ್ಲಿ ಚರಂಡಿ ಅಥವಾ ತೋಡನ್ನು ನಿರ್ಮಾಣ ಮಾಡಿಲ್ಲ. ಅರಣ್ಯ ಇಲಾಖೆಯ ಜಾಗ ಎತ್ತರ ಪ್ರದೇಶದಿಂದ ಮೈದಾನದ ಕಡೆ ಇಳಿ ಜಾರಾಗಿದ್ದು, ಗ್ರಾ.ಪಂ.ನ ಅವೈಜ್ಞಾನಿಕ ಕಾಮಗಾರಿಯಿಂದ ಮಳೆ ಬಂದಾಗ ಎತ್ತರ ಪ್ರದೇಶದಿಂದ ಹರಿದು ಬರುವ ನೀರು ಬೇರೆಲ್ಲಿಯೂ ಹರಿಯಲು ಸಾಧ್ಯವಾಗದೇ ಅರಣ್ಯ ಇಲಾಖೆಯ ಈ ಜಾಗದಲ್ಲಿ ಶೇಖರಣೆಯಾಗಿ ಇಂಗುಗುಂಡಿಯಂತಾಗಲಿದೆ. ಮತ್ತೊಂದೆಡೆ ಮೈದಾನಕ್ಕೆ ಹಾಕಿದ ಮಣ್ಣೆಲ್ಲಾ ಮಳೆ ನೀರಿಗೆ ಕೊಚ್ಚಿಕೊಂಡು ಮೈದಾನಕ್ಕೆ ಹರಿದು ಬರಲಿದ್ದು, ನೀರು, ಮಣ್ಣು ನಿಂತು ಮೈದಾನವು ಗದ್ದೆಯಂತಾಗಲಿದೆ ಎಂದ ಅವರು, ಅರಣ್ಯ ಇಲಾಖೆಯ ಜಾಗದ ಮಣ್ಣನ್ನು ಅವೈಜ್ಞಾನಿಕವಾಗಿ ತೆಗೆಯುವಾಗ ಅರಣ್ಯ ಇಲಾಖೆ ಯಾಕೆ ಮೌನವಾಗಿ ಕೂತಿತ್ತು. ಇದು ಬಲತ್ಕಾರವೋ? ಇನ್ನೇನೋ ಎಂಬುದು ಅರ್ಥವಾಗುತ್ತಿಲ್ಲ ಎಂದರು.

ಮೈದಾನದೊಳಗೆ ಬರುವುದು ಹೇಗೆ?: ಸಾರ್ವಜನಿಕ ಮೈದಾನವೆನ್ನುವುದು ಒಂದು ಧರ್ಮಕ್ಕೆ ಸೀಮಿತವಲ್ಲ. ಅದು ಸಮಾಜದ ಎಲ್ಲಾ ಬಂಧುಗಳಿಗೆ ಉಪಯೋಗಕ್ಕೆ ಬರಬೇಕು. ಇದರ ದಾರಿ ಗ್ರಾ.ಪಂ. ಬಂದ್ ಮಾಡಿದ್ದರಿಂದಾಗಿ ಮಕ್ಕಳು, ವೃದ್ಧರು ಹೇಗೆ ಮೈದಾನಕ್ಕೆ ಬರಬೇಕು. ಮಕ್ಕಳು ಸೈಕಲ್ ಸವಾರಿ ಕಲಿಯುವುದು, ಆಟವಾಡುವುದಾದರೂ ಎಲ್ಲಿ?  ಮೈದಾನದೊಳಗೊಂದು ಸಾರ್ವಜನಿಕ ಕುಡಿಯುವ ನೀರಿನ ಟ್ಯಾಂಕ್ ಇದ್ದು, ಅಲ್ಲಿಗೆ ಹೇಗೆ ಹಾರಿಕೊಂಡು ಬರಬೇಕೆ? ಕಂದಾಯ ಇಲಾಖೆಯ ವಶದಲ್ಲಿರುವ ಈ ಜಾಗದಲ್ಲಿ ಪರಿಸರದ ಶಾಂತಿಗೆ ಧಕ್ಕೆ ತರುವಂತಹ ಕಾಮಗಾರಿ ನಡೆಸಲು ಗ್ರಾ.ಪಂ.ಗೆ ಅಧಿಕಾರ ಕೊಟ್ಟವರು ಯಾರು ಎಂದು ಪ್ರಶ್ನಿಸಿದ ಅವರು, ಮೈದಾನಕ್ಕೆ ಬಂದ ಪುಟಾಣಿ ಮಕ್ಕಳನ್ನು ಓಡಿಸುವ ಮನೋಸ್ಥಿತಿಯುಳ್ಳವರು ಮನುಷ್ಯರಾಗಲು ಸಾಧ್ಯವೇ ಇಲ್ಲ. ಆದ್ದರಿಂದ ಗ್ರಾ.ಪಂ. ಇಲ್ಲಿಗೆ ಮೋರಿ ಹಾಕಿ ಮೈದಾನಕ್ಕೆ ಪ್ರವೇಶ ದಾರಿಯನ್ನು ಮಾಡಿಕೊಡಬೇಕು. ಇಲ್ಲಿನ ಶಾಂತಿ- ಸೌಹಾರ್ದತೆಯನ್ನು ಉಳಿಸುವ ಕೆಲಸವಾಗಬೇಕು ಎಂದರು.

ವಿಟ್ಲ- ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ. ರಾಜಾರಾಮ್ ಕೆ.ಬಿ. ಮಾತನಾಡಿ, ಕೆಲವು ದಿನಗಳ ಹಿಂದೆ ಕೆಲವು ಕಿಡಿಗೇಡಿಗಳ ಪ್ರೇರಣೆಯಿಂದ ಕೆಲವು ಯುವಕರು ಮೈದಾನದ ದಾರಿಗಡ್ಡವಾಗಿ ಕ್ರೋಟಾನ್ ಗಿಡಗಳನ್ನು ನೆಟ್ಟಿದ್ದಲ್ಲದೆ, ಇಲ್ಲಿಗೆ ಸೈಕಲ್ ಸವಾರಿ ಮಾಡುತ್ತಾ ಬಂದ ಪುಟಾಣಿ ಮಕ್ಕಳಿಬ್ಬರನ್ನು ಮೈದಾನಕ್ಕೆ ಬಾರದಂತೆ ಬೆದರಿಸಿ, ಓಡಿಸಿದ್ದರು. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ವಿಚಾರ ತಿಳಿದು ನಾನು ಸೇರಿದಂತೆ ಇನ್ನಿತರ ಕಾಂಗ್ರೆಸ್ ಮುಖಂಡರು ಮೈದಾನಕ್ಕೆ ಭೇಟಿ ನೀಡಿ ನಡೆದ ಘಟನೆಯ ಬಗ್ಗೆ ಮಾಹಿತಿ ಕೇಳುತ್ತಿದ್ದಾಗ ಅಲ್ಲಿಗೆ ಬಂದ  34 ನೆಕ್ಕಿಲಾಡಿ ಗ್ರಾ.ಪಂ. ಅಧ್ಯಕ್ಷರು ನಮ್ಮಲ್ಲಿ ಸೌಹಾರ್ದಯುತವಾಗಿ ಈ ಪ್ರಕರಣ ಹಿಂದೆಗೆದುಕೊಳ್ಳಿ ಎಂದು ಮನವಿ ಮಾಡಿದ್ದರಲ್ಲದೆ,  ಯುವಕರು ಮಾಡಿರುವುದು ತಪ್ಪು. ನಾನೇ ಅವರಲ್ಲಿ ದಾರಿಗಡ್ಡವಾಗಿ ನೆಟ್ಟಿರುವ ಗಿಡಗಳನ್ನು ತೆಗೆಯಲು ಹೇಳುತ್ತೇನೆ. ಠಾಣೆಯಲ್ಲಿರುವ ಪ್ರಕರಣವನ್ನು  ಪಾಪಸ್ ಪಡೆದುಕೊಳ್ಳಿ ಎಂದು ವಿನಂತಿಸಿದ್ದರು. ನಾವು ಯುವಕರ ಭವಿಷ್ಯದ ಹಿತದೃಷ್ಟಿಯಿಂದ ಈ ಪ್ರಕರಣವನ್ನು ಸೌಹಾರ್ದ ಯುತವಾಗಿ ಮುಗಿಸಲು ಮುಂದಾಗಿದ್ದೆವು. ಆದರೆ ಅಂದು ಮೈದಾನದ ದಾರಿ ಓಪನ್ ಮಾಡಿಕೊಡುತ್ತೇನೆ ಎಂದು ಹೇಳಿದ್ದ ಗ್ರಾ.ಪಂ. ಅಧ್ಯಕ್ಷರೇ ಆ ಬಳಿಕ ತಾನೇ ಮುಂದೆ ನಿಂತು ಮೈದಾನಕ್ಕೆ ಪ್ರವೇಶಿದಂತೆ ಜೆಸಿಬಿ ಮೂಲಕ ಅಗಲು ತೆಗೆಯುವ ಕಾಮಗಾರಿ ನಡೆಸಿದ್ದಾರೆ. ಇಂತಹ ಕೆಲಸ ಮಾಡುವ ಮೂಲಕ ಅಧ್ಯಕ್ಷರು  ಸಮಾಜದ ಸಾಮರಸ್ಯವನ್ನು ಒಡೆಯುವ ಪ್ರಯತ್ನಕ್ಕೆ ಮುಂದಾಗಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ.

ಈ ಸಂದರ್ಭ ಕಾಂಗ್ರೆಸ್ ದ.ಕ. ಜಿಲ್ಲಾ ಕಾರ್ಯದರ್ಶಿ ಉಮಾನಾಥ ಶೆಟ್ಟಿ ಪೆರ್ನೆ, ಮುಖಂಡ ವೆಂಕಪ್ಪ ಪೂಜಾರಿ ಮರುವೇಲು, ಕರ್ನಾಟಕ ರಾಜ್ಯ ರೈತ ಸಂಘ (ಹಸಿರು ಸೇನೆ)ದ ದ.ಕ. ಜಿಲ್ಲಾ ಸಂಚಾಲಕ ರೂಪೇಶ್ ರೈ ಅಲಿಮಾರ್,  ಮೈಂದಡ್ಕದ ಸೌಹಾರ್ದತೆ ಉಳಿಸಿ ಹೋರಾಟ ಸಮಿತಿಯ ಅಧ್ಯಕ್ಷ ಜತೀಂದ್ರ ಶೆಟ್ಟಿ ಅಲಿಮಾರ್, ಕಾರ್ಯದರ್ಶಿ ಅಬ್ದುರ್ರಹ್ಮಾನ್ ಯುನಿಕ್, ಉಪಾಧ್ಯಕ್ಷೆ ಅನಿ ಮಿನೇಜಸ್, ಪ್ರಮುಖರಾದ ಜಯಶೀಲ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News